ತೀವ್ರ ಬೇಸಿಗೆ, ತಾಪಮಾನ ಏರಿಕೆಯಿಂದ ಬಸವಳಿದಿದ್ದ ಭಾರತದ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಭಾರೀ ಮಳೆಯಾಗುತ್ತಿದೆ. ಆದರೆ, ಸುರಿಯುತ್ತಿರುವ ಮಳೆಯಿಂದ ಪ್ರಮುಖ ಬಳೆಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಬದಲಾಗಿ, ಬೆಳೆ ಉತ್ಪಾದನೆಯು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕೃಷಿ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಗುರುವಾರ ಹೇಳಿದ್ದಾರೆ.
ಹವಾಮಾನ ಮಾದರಿಯ ಬಗ್ಗೆ ಮಾತನಾಡಿದ ಅವರು, “ಮುಂಗಾರುಪೂರ್ವ ಹಠಾತ್ ಮಳೆ, ಆಲಿಕಲ್ಲು ಮಳೆ ಹಾಗೂ ಬಿರುಗಾಳಿ ಸಾಮಾನ್ಯವಾಗಿವೆ. ಆದಾಗ್ಯೂ, ಹಠಾತ್ ಮಳೆಯಿಂದಾಗಿ ಇಲ್ಲಿಯವರೆಗೆ ಯಾವುದೇ ಹಾನಿ ವರದಿಯಾಗಿಲ್ಲ. ಇದು ಬೇಸಿಗೆ ಬೆಳೆಗಳಾದ ಹೆಸರುಕಾಳು, ಜೋಳ ಹಾಗೂ ಭತ್ತದ ಇಳುವರಿ ಹೆಚ್ಚಾಗಲು ಕಾರಣವಾಗುತ್ತದೆ” ಎಂದು ಹೇಳಿದ್ದಾರೆ.
“ಉತ್ತರ ಪ್ರದೇಶ, ಬಿಹಾರದ ಕೆಲವು ಭಾಗಗಳಲ್ಲಿ ಆಲಿಕಲ್ಲು ಮಳೆ ಮತ್ತು ಬಿರುಗಾಳಿಯಿಂದಾಗಿ ಮಾಗಿದ ಮಾವು ಮತ್ತು ಲಿಚಿ ಹಣ್ಣುಗಳು ಉದುರಿ ಹೋಗಬಹುದು. ಆದರೆ, ರಾಜ್ಯ ಸರ್ಕಾರಗಳು ಇನ್ನೂ ಪರಿಸ್ಥಿತಿಯನ್ನು ನಿರ್ಣಯಿಸಿ ಸಚಿವಾಲಯಕ್ಕೆ ವರದಿ ಮಾಡಿಲ್ಲ” ಎಂದು ಅವರು ಹೇಳಿದ್ದಾರೆ.
ಮುಂಬರುವ ಖಾರಿಫ್ ಋತುವಿನ ಕುರಿತು ಮಾತನಾಡಿದ ಚತುರ್ವೇದಿ, “ಜುಲೈನಿಂದ ಪ್ರಾರಂಭವಾಗುವ ಭತ್ತದ ಬಿತ್ತನೆ ಸಿದ್ಧತೆಗಳು ಉತ್ತಮವಾಗಿ ಪ್ರಗತಿಯಲ್ಲಿವೆ. ಕೆಲವು ಬೆಳೆಗಳ ಬಿತ್ತನೆಯಲ್ಲಿ ಸ್ವಲ್ಪ ಏರಿಕೆಯಾಗುವ ನಿರೀಕ್ಷೆಯಿದೆ” ಎಂದು ಅವರು ತಿಳಿಸಿದ್ದಾರೆ.