ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ಆರೋಪಗಳನ್ನು ಅಲ್ಲಗಳೆದಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಯಾವುದೇ ಪುರಾವೆಯಿಲ್ಲ. ಎನ್‌ಟಿಎ ಮೇಲೆ ಮಾಡಲಾಗಿರುವ ಭ್ರಷ್ಟಾಚಾರ ಆರೋಪಗಳು ಪತ್ತೆಯಾಗಿಲ್ಲ.ಇದೊಂದು ಅತ್ಯಂತ ವಿಶ್ವಾಸಾರ್ಹ ಸಂಸ್ಥೆ” ಎಂದು ಹೇಳಿದ್ದಾರೆ.
“ಸುಪ್ರೀಂ ಕೋರ್ಟ್ ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದು, ನಾವು ಈ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಯಾವುದೇ ವಿದ್ಯಾರ್ಥಿಗೂ ಅನಾನುಕೂಲವಾಗದಂತೆ ನಾವು ಖಚಿತಪಡಿಸುತ್ತೇವೆ” ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಈ ನಡುವೆ ಈ ವರ್ಷದ ನೀಟ್ ಯುಜಿ ಪ್ರವೇಶ ಪರೀಕ್ಷೆಯಲ್ಲಿ 1563 ಅಭ್ಯರ್ಥಿಗಳು ಪಡೆದುಕೊಂಡಿದ್ದ ಗ್ರೇಸ್ ಅಂಕವನ್ನು ರಾಷ್ಟ್ರೀಯ ಪರೀಕ್ಷಾ ಮಂಡಳಿ(ಎನ್‌ಟಿಎ) ರದ್ದುಪಡಿಸಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಇಂದು ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ನೀಟ್ ಫಲಿತಾಂಶ ವಿವಾದ: 1563 ಅಭ್ಯರ್ಥಿಗಳ ಗ್ರೇಸ್ ಅಂಕ ರದ್ದು, ಸುಪ್ರೀಂಗೆ ತಿಳಿಸಿದ ಕೇಂದ್ರ
ಪರೀಕ್ಷೆ ಆರಂಭಿಸಲು ವಿಳಂಬವಾದ ಕಾರಣ ಅದಕ್ಕೆ ಪ್ರತಿಯಾಗಿ ನಿರ್ದಿಷ್ಟ ಕೇಂದ್ರಗಳ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಲಾಗಿತ್ತು. ಇಂತಹ ಕೇಂದ್ರಗಳಲ್ಲಿ ಗ್ರೇಸ್ ಅಂಕವನ್ನು ರದ್ದುಗೊಳಿಸಲಾಗಿದ್ದು, ಅವರಿಗೆ ಮರು ಪರೀಕ್ಷೆ ತೆಗೆದುಕೊಳ್ಳುವ ಆಯ್ಕೆ ನೀಡಲಾಗಿದೆ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಜೂನ್ 23ರಂದು ಮರು ಪರೀಕ್ಷೆಯನ್ನು ಎನ್‌ಟಿಎ ಕೈಗೊಳ್ಳುವ ಸಂಭವವಿರುವ ಸಲ್ಲಿಕೆಯನ್ನು ಕೋರ್ಟ್ ದಾಖಲಿಸಿಕೊಂಡಿತು. ಇದರ ಫಲಿತಾಂಶವನ್ನು ಜೂನ್ 30 ರಂದು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಮೇ 5 ರಂದು ನಡೆದ ಹಮ್ಮಿಕೊಳ್ಳಲಾಗಿದ್ದ ನೀಟ್ ಪರೀಕ್ಷೆಯಲ್ಲಿ ದೇಶಾದ್ಯಂತ 571 ಕೇಂದ್ರಗಳಲ್ಲಿ 24 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.
ಎನ್‌ಟಿಎ ಇತಿಹಾಸದಲ್ಲಿಯೆ ಮೊದಲ ಬಾರಿಗೆ 67ಕ್ಕೂ ಹೆಚ್ಚು ವಿದ್ಯಾರ್ಥಿಗಳು 720 ಕ್ಕೆ 720 ಅಂಕ ಪಡೆದುಕೊಂಡಿದ್ದರು. ಈ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಹರಿಯಾಣದ ಫರಿದಾಬಾದ್ ಪರೀಕ್ಷಾ ಕೇಂದ್ರದಲ್ಲಿ ಬರೆದ ವಿದ್ಯಾರ್ಥಿಗಳಾಗಿದ್ದರು.
