ಆಗಸ್ಟ್ 15ರಂದು ಭಾರತವು 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯ ದಿನ ಆಚರಣೆಗೆ ಸಿದ್ದವಾಗುತ್ತಿರುವ ದೇಶಾದ್ಯಂತ ಸಂಭ್ರಮದ ವಾತಾವರಣೆ ಕಂಡುಬರುತ್ತಿದೆ. ಆದರೆ, ಹಲವೆಡೆ ಮಾಂಸದ ಅಂಗಡಿಗಳ ಸ್ವಾತಂತ್ರ್ಯವನ್ನು ಬಲವಂತವಾಗಿ ಕಸಿದುಕೊಳ್ಳಲಾಗಿದೆ. ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲಿ ಕೆಲವು ನಗರಗಳಲ್ಲಿ ಆಗಸ್ಟ್ 15ರಂದು ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ, ಕಲ್ಯಾಣ್-ಡೊಂಬಿವ್ಲಿ, ಮಾಲೆಗಾಂವ್ ಹಾಗೂ ನಾಗ್ಪುರದಲ್ಲಿ ಅಲ್ಲಿನ ಪಾಲಿಕೆಗಳು ಆಗಸ್ಟ್ 15ರಂದು ಮಾಂಸ ಮಾರಾಟವನ್ನು ನಿಷೇಧಿಸಿವೆ. ಅಂತೆಯೇ, ತೆಲಂಗಾಣದ ಹೈದರಾಬಾದ್‌ನಲ್ಲಿಯೂ ಪಾಲಿಕೆಯು ಮಾಂಸದ ಅಂಗಡಿಗಳನ್ನು ತೆರೆಯದಂತೆ ಆದೇಶ ಹೊರಡಿಸಿದೆ. ಪಾಲಿಕೆಗಳ ಕ್ರಮವನ್ನು ಹಲವರು ಖಂಡಿಸಿದ್ದಾರೆ. ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಲಿಕೆಗಳ ಕ್ರಮವನ್ನು ಖಂಡಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿ, “ಭಾರತದಾದ್ಯಂತ ಅನೇಕ ಪುರಸಭೆಗಳು ಮತ್ತು ಪಾಲಿಕೆಗಳು ಆಗಸ್ಟ್ 15ರಂದು ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ಮುಚ್ಚಬೇಕೆಂದು ಆದೇಶಿಸಿವೆ. ದುರದೃಷ್ಟವಶಾತ್, ಹೈದರಾಬಾದ್‌ನಲ್ಲಿಯೂ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಕೂಡ ಸಹ ಇದೇ ರೀತಿಯ ಆದೇಶವನ್ನು ಹೊರಡಿಸಿದೆ. ಇದು ನಿರ್ದಯ ಮತ್ತು ಸಂವಿಧಾನಬಾಹಿರ” ಎಂದು ಕಿಡಿಕಾರಿದ್ದಾರೆ.
“ಮಾಂಸ ತಿನ್ನುವುದಕ್ಕೂ ಮತ್ತು ಸ್ವಾತಂತ್ರ್ಯ ದಿನವನ್ನು ಆಚರಿಸುವುದಕ್ಕೂ ಸಂಬಂಧವೇನು? ತೆಲಂಗಾಣದ 99% ಜನರು ಮಾಂಸ ತಿನ್ನುತ್ತಾರೆ. ಈ ಮಾಂಸ ನಿಷೇಧಗಳು ಜನರ ಸ್ವಾತಂತ್ರ್ಯ, ಪ್ರೈವೆಸಿ, ಜೀವನೋಪಾಯ, ಸಂಸ್ಕೃತಿ, ಪೋಷಣೆ ಮತ್ತು ಧಾರ್ಮಿಕ ಹಕ್ಕನ್ನು ಉಲ್ಲಂಘಿಸುತ್ತವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಆಡಳಿತದಲ್ಲಿ ಹಿಂದು ಹಬ್ಬಗಳ ಸಮಯದಲ್ಲಿ ಮಾಂಸ ನಿಷೇಧಿಸುವುದು ಸಾಮಾನ್ಯವಾಗಿದೆ. ದೇಶದಲ್ಲಿ ಹೆಚ್ಚಿನವರು ಪ್ರಧಾನವಾಗಿ ಮಾಂಸಾಹಾರವನ್ನು ತಿನ್ನುತ್ತಾರೆ. ಆದರೆ, ಮಾಂಸ ಮಾರಾಟವನ್ನು ನಿರಂತರವಾಗಿ ನಿಷೇಧಿಸಲಾಗುತ್ತಿದೆ. ಇಂತಹ ಕ್ರಮಗಳು ಸ್ಥಳೀಯ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಹಲವರು ಟೀಕಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರದ ಭಾಗವೇ ಆಗಿರುವ ಎನ್‌ಸಿಪಿ (ಅಜಿತ್ ಬಣ) ಮಾಂಸಾಹಾರ ಮಾರಾಟ ನಿಷೇಧವನ್ನು ಪ್ರಶ್ನಿಸಿದೆ. ಆದರೆ, ಬಿಜೆಪಿ ನಾಯಕರು ಸ್ವಾತಂತ್ರ್ಯ ದಿನಾಚರಣೆ ಮತ್ತು ಮಹಾವೀರ ಜಯಂತಿಯಂತಹ ಸಂದರ್ಭಗಳಲ್ಲಿ ಮಾಂಸ ಮಾರಾಟ ನಿಷೇಧವನ್ನು ವಿಧಿಸುವ ಅಧಿಕಾರಿ ಪುರಸಭೆಗಳಿಗೆ ಇದೆ ಎಂಧು ಸಮರ್ಥಿಸಿಕೊಂಡಿದ್ದಾರೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್, “ಆಷಾಢ ಏಕಾದಶಿ ಅಥವಾ ಮಹಾವೀರ ಜಯಂತಿಯಂದು ಮಾಂಸ ನಿಷೇಧ ಮಾಡಿದ್ದರೆ ಈ ನಿಷೇಧವನ್ನು ಅರ್ಥಮಾಡಿಕೊಳ್ಳಬಹುದಿತ್ತು. ಆದರೆ ಅಂತಹ ಸಂದರ್ಭವಿಲ್ಲದಿದ್ದಾಗ, ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಏಕೆ ಒತ್ತಾಯಿಸಬೇಕು”ಎಂದು ಪ್ರಶ್ನಿಸಿದ್ದಾರೆ.
ಶಿವಸೇನಾ (ಉದ್ಧವ್ ಬಣ) ಶಾಸಕ ಆದಿತ್ಯ ಠಾಕ್ರೆ, “ಸ್ವಾತಂತ್ರ್ಯ ದಿನದಂದು ನಾವು ಏನು ತಿನ್ನುತ್ತೇವೆ ಎಂಬುದು ನಮ್ಮ ಹಕ್ಕು. ನಮ್ಮ ಸ್ವಾತಂತ್ರ್ಯ. ನಾವು ಸಸ್ಯಾಹಾರಿ ಅಥವಾ ಮಾಂಸಾಹಾರಿ ತಿನ್ನಬೇಕೆ ಎಂಬುದನ್ನು ನಮಗೆ ಹೇಳಲು ಅವರಿಗೆ ಅಧಿಕಾರವಿಲ್ಲ. ನಾವು ಖಂಡಿತವಾಗಿಯೂ ಮಾಂಸಾಹಾರಿ ತಿನ್ನುತ್ತೇವೆ. ನಾವು ಅದನ್ನು ನಮ್ಮ ಮನೆಯಲ್ಲಿ ತಿನ್ನುತ್ತೇವೆ. ನಮ್ಮ ಮನೆಯಲ್ಲಿ ನವರಾತ್ರಿಯ ಸಮಯದಲ್ಲೂ ಪ್ರಸಾದದಲ್ಲಿ ಸೀಗಡಿ, ಮೀನು ಇರುತ್ತದೆ. ಇದು ನಮ್ಮ ಸಂಪ್ರದಾಯ… ಇದು ಧರ್ಮದ ವಿಷಯವಲ್ಲ ಮತ್ತು ಇದು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಲ್ಲ…” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.