ಫೆ.29ರ ನಂತರ ಆನ್‌ಲೈನ್ ಪಾವತಿ ಸೇವಾ ಸಂಸ್ಥೆ ಪೇಟಿಎಂ ಪೇಮೆಂಟ್ ಬ್ಯಾಂಕ್‌ನ ಎಲ್ಲ ಸೇವೆಗಳು ರದ್ದುಗೊಳ್ಳಲಿವೆ ಎಂದು ಆರ್‌ಬಿಐ ತಿಳಿಸಿದೆ. ವಾಲೆಟ್ ಹಾಗೂ ಫಾಸ್ಟ್‌ಟ್ಯಾಗ್ ಒಳಗೊಂಡು ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂಗೆ ಆರ್‌ಬಿಐ ಆದೇಶಿಸಿದೆ.
ಪೇಟಿಎಂನ ಪೇಮೆಂಟ್ ಬ್ಯಾಂಕ್‌ನ ಪಾವತಿ ಸೇವಾ ಕಾರ್ಯಚಟುವಟಿಕೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಆರ್‌ಬಿಐ “ಬ್ಯಾಂಕ್‌ನಲ್ಲಿ ನಿರಂತರ ಉಲ್ಲಂಘನೆಗಳು ಮುಂದುವರೆದ ಕಾರಣದಿಂದ ಮಹತ್ವದ ಮೇಲ್ವಿಚಾರಣಾ ಕಾಳಜಿಗಳಿಗಾಗಿ ಕ್ರಮ ಕೈಗೊಂಡಿರುವುದನ್ನು” ಉಲ್ಲೇಖಿಸಲಾಗಿದೆ. ಬಾಹ್ಯ ಸಂಸ್ಥೆಗಳಿಂದ ಸಮಗ್ರ ಲೆಕ್ಕಪರಿಶೋಧನೆ ಕೈಗೊಂಡ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
2022 ಮಾರ್ಚ್ 11ರಲ್ಲೇ ನೂತನ ಗ್ರಾಹಕರನ್ನು ಹೊಂದುವುದನ್ನು ನಿಲ್ಲಿಸಬೇಕು ಎಂದು ಪೇಟಿಎಂ ಪೇಮೆಂಟ್ ಬ್ಯಾಂಕ್ ಸಂಸ್ಥೆಗೆ ತಿಳಿಸಿರುವುದನ್ನು ಆರ್‌ಬಿಐ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶೂದ್ರ ಸ್ವಾಮಿ ಕೇಸರಿ ಸ್ವಾಮಿಯಾಗುವುದು ತಪ್ಪೇ?
ಬಡ್ಡಿ ಭತ್ಯೆ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿ ಪಡೆಯುವ ಸೇವೆಗಳನ್ನು ಒಳಗೊಂಡು ಲಭ್ಯವಿರುವ ಬಾಕಿಯನ್ನು ಬಳಸಲು ಬಳಕೆದಾರರಿಗೆ ವಿನಾಯಿತಿ ನೀಡಲಾಗಿದೆ.
ಇದು ಪೇಟಿಎಂನ ಪೇಮೆಂಟ್ಸ್ ಬ್ಯಾಂಕ್ಗೆ ಮಾತ್ರ ಹಾಕಲಾಗಿರುವ ನಿರ್ಬಂಧ. ಪೇಟಿಎಂ ಆ್ಯಪ್ನಲ್ಲಿರುವ ಬೇರೆಲ್ಲಾ ಯುಪಿಐ ವಹಿವಾಟು ಸೇವೆಗಳನ್ನು ಪಡೆಯಬಹುದಾಗಿದೆ. ಪೇಟಿಎಂ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು. ವಿದ್ಯುತ್, ನೀರು ಇತ್ಯಾದಿ ಬಿಲ್ಗಳನ್ನು ಮಾಮೂಲಿಯಾಗಿ ನೀವು ಪಾವತಿಸಬಹುದು.
ಆರ್‌ಬಿಐ ಆದೇಶದ ಬಗ್ಗೆ ಪೇಟಿಎಂ ಮಾತೃಸಂಸ್ಥೆ ಒನ್97 ಕಮ್ಯೂನಿಕೇಷನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.