2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಎಲ್ಲ 7 ಆರೋಪಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದೆ. 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ 17 ವರ್ಷಗಳ ನಂತರ ಮುಂಬೈನ ವಿಶೇಷ ಎನ್ಐಎ ನ್ಯಾಯಾಲಯವು ಗುರುವಾರ ತೀರ್ಪು ಪ್ರಕಟಿಸಿದೆ.
ಪುರೋಹಿತ್ ಆರ್‌ಡಿಎಕ್ಸ್ ತಂದಿರುವುದಕ್ಕೆ ಯಾವುದೇ ಸಾಕ್ಷಿಯಿಲ್ಲ, ಪಿತೂರಿ ಬಗ್ಗೆಯೂ ಯಾವುದೇ ಸಾಕ್ಷಿಯಿಲ್ಲ. ಪ್ರಾಸಿಕ್ಯೂಷನ್ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡುವ ವೇಳೆ ಹೇಳಿದೆ.
2008ರ ಸೆಪ್ಟೆಂಬರ್ 29ರ ರಾತ್ರಿ ಮಾಲೆಗಾಂವ್‌ನ ಭಿಕ್ಕು ಚೌಕ್ ಬಳಿ ನಡೆದ ಸ್ಫೋಟದಲ್ಲಿ ಆರು ಜನರು ಮೃತಪಟ್ಟಿದ್ದರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಜನದಟ್ಟಣೆಯ ಪ್ರದೇಶದಲ್ಲಿ ಮೋಟಾರ್ ಸೈಕಲ್‌ಗೆ ಐಇಡಿ ಅಳವಡಿಸಲಾಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಾನವೀಯತೆಯ ಪಸೆ ಉಳಿದಿದೆಯೇ ತುಸುವಾದರೂ?
ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ (ನಿವೃತ್ತ) ಸೇರಿದಂತೆ ಏಳು ಜನರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಏಪ್ರಿಲ್ 19 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಆರಂಭದಲ್ಲಿ, ಎಲ್ಲಾ ಏಳು ಆರೋಪಿಗಳು ಮೇ 8 ರಂದು ತೀರ್ಪಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು ಆದರೆ ನಂತರ ತೀರ್ಪನ್ನು ಜುಲೈ 31 ಕ್ಕೆ ಮುಂದೂಡಲಾಯಿತು.
ಆರಂಭದಲ್ಲಿ ಈ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ವಿಶೇಷ ಇನ್ಸ್‌ಪೆಕ್ಟರ್ ಜನರಲ್ ಹೇಮಂತ್ ಕರ್ಕರೆ ನಿರ್ವಹಿಸುತ್ತಿದ್ದರು, ನಂತರ ಅವರು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದರು. ಈ ಪ್ರಕರಣದಲ್ಲಿ ಎಟಿಎಸ್ 2009 ರಲ್ಲಿ ತನ್ನ ಆರೋಪಪಟ್ಟಿಯನ್ನು ಸಲ್ಲಿಸಿತು.