ಉತ್ತರ ಪ್ರದೇಶದ ಮುಜಫರ್ ನಗರ ಶಾಲಾ ವಿದ್ಯಾರ್ಥಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ನಡೆದುಕೊಂಡ ರೀತಿಗೆ ಸುಪ್ರೀಂ ಕೋರ್ಟ್ ಸೋಮವಾರ(ಸೆಪ್ಟೆಂಬರ್ 25) ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠವು, ಎಫ್ಐಆರ್ ದಾಖಲಾತಿ ವಿಳಂಬ ಹಾಗೂ ಕೋಮುವಾದಿ ಆರೋಪಗಳನ್ನು ಕೈಬಿಟ್ಟಿರುವ ಕುರಿತು ಪ್ರಶ್ನೆಗಳನ್ನು ಎತ್ತಿರುವ ಪೀಠ, ಹಿರಿಯ ಐಪಿಎಸ್ ಶ್ರೇಣಿಯ ಪೊಲೀಸ್ ಅಧಿಕಾರಿಯಿಂದ ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿತು.
ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಕಿರುಕುಳ ಮತ್ತು ಧರ್ಮ ಮತ್ತು ಜಾತಿಯ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸುವ ಶಿಕ್ಷಣದ ಹಕ್ಕು ಕಾಯ್ದೆಯ ಆದೇಶವನ್ನು ಅನುಸರಿಸಲು “ರಾಜ್ಯದ ಕಡೆಯಿಂದ ಪ್ರಾಥಮಿಕ ವೈಫಲ್ಯವಿದೆ” ಎಂದು ನ್ಯಾಯಾಲಯವು ಗಮನಿಸಿದೆ.
ನ್ಯಾಯಮೂರ್ತಿ ಅಭಯ್ ಎಸ್ ಓಕಾ, ಆರೋಪಗಳು ನಿಜವಾಗಿದ್ದರೆ ರಾಜ್ಯದ ಆತ್ಮಸಾಕ್ಷಿಯನ್ನು ಆಘಾತಗೊಳಿಸುತ್ತದೆ. ಇದು ಅತ್ಯಂತ ಗಂಭೀರವಾದ ವಿಚಾರ. ನಿರ್ದಿಷ್ಟ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಸಹಪಾಠಿಗೆ ಹೊಡೆಯಲು ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳುತ್ತಿರುವ ಶಿಕ್ಷಕರು! ಇದು ಗುಣಮಟ್ಟದ ಶಿಕ್ಷಣವೇ? ಎಂದು ಪ್ರಶ್ನಿಸಿದ ನ್ಯಾಯಮೂರ್ತಿಗಳು, ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ರಾಜ್ಯವು ತೆಗೆದುಕೊಳ್ಳಬೇಕು. ಆರೋಪಗಳು ನಿಜವಾಗಿದ್ದರೆ, ಇದು ಆತ್ಮಸಾಕ್ಷಿಯನ್ನು ಬೆಚ್ಚಿ ಬೀಳಿಸುತ್ತದೆ” ಎಂದು ಆಘಾತ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕರ್ನಾಟಕದ ಗೆಲುವಿನ ಪಯಣ ಪಂಚ ರಾಜ್ಯಗಳಿಗೂ ವಿಸ್ತರಿಸಲಿದೆ: ರಾಹುಲ್ ಗಾಂಧಿ
ಸುಪ್ರೀಂ ಕೋರ್ಟ್ ಅಕ್ಟೋಬರ್ 30ಕ್ಕೆ ಪ್ರಕರಣವನ್ನು ಮುಂದೂಡಿತು ಮತ್ತು ಸಂತ್ರಸ್ತ ಮಗುವಿನ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಿತು.
ಕಳೆದ ತಿಂಗಳು ವೈರಲ್ ಆದ ವಿಡಿಯೋದಲ್ಲಿ, ಶಿಕ್ಷಕಿ ತ್ಯಾಗಿ ಅವರು ಮುಸ್ಲಿಂ ಸಮುದಾಯದ ಬಾಲಕನೊಬ್ಬನಿಗೆ ಒಬ್ಬೊಬ್ಬರಾಗಿ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ನಿರ್ದೇಶಿಸುವುದನ್ನು ಕೇಳಬಹುದು. ಮಗುವಿಗೆ ಕಪಾಳಮೋಕ್ಷ ಮಾಡಿಸಿದ ನಂತರ ಬಾಲಕನ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನು ಆಡುತ್ತಿರುವುದು ಕೇಳಿಬರುತ್ತಿದೆ.
ಘಟನೆಯ ನಂತರ, ಆಗಸ್ಟ್ 26 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವ ಶಿಕ್ಷೆ) ಮತ್ತು ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಶಿಕ್ಷಕಿ ತ್ಯಾಗಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.