ಪೂಜಾ ಸ್ಥಳಗಳ ವಿಚಾರದಲ್ಲಿ ಧಾರ್ಮಿಕ ಸ್ವರೂಪವನ್ನು ಮುನ್ನೆಲೆಗೆ ತಂದು ವಿವಾದ ಎಬ್ಬಿಸಿರುವ ಯಾವುದೇ ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ಆದೇಶಿಸದಂತೆ ವಿಚಾರಣಾ ನ್ಯಾಯಾಲಯಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಧಾರ್ಮಿಕ ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ-1991ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿದೆ. 1991ರ ಕಾಯ್ದೆಯಡಿ ಅಸ್ತಿತ್ವದಲ್ಲಿರುವ ಯಾವುದೇ ಧಾರ್ಮಿಕ ಸ್ಥಳಗಳನ್ನು ಸಮೀಕ್ಷೆ ನಡೆಸಲು ಅಥವಾ ಬೇರಾವುದೇ ರೀತಿಯ ಪರಿಣಾಮಕಾರಿ ಆದೇಶಗಳನ್ನು ನೀಡದಂತೆ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿ, ಮಧ್ಯಂತರ ಆದೇಶ ಹೊರಡಿಸಿದೆ.
ಧಾರ್ಮಿಕ ಸ್ವರೂಪವನ್ನು ವಿವಾದಗೊಳಿಸಿ ದಾಖಲಾದ ಮೊಕದಮೆಗಳ ವಿಚಾರಣೆ ವೇಳೆ ಅಸ್ತಿತ್ವದಲ್ಲಿರುವ ಧಾರ್ಮಿಕ ರಚನೆಗಳ ವಿರುದ್ಧ ಆದೇಶಗಳನ್ನು ನೀಡಬಾರದು. ಮಾತ್ರವಲ್ಲದೆ, ಮುಂದಿನ ಆದೇಶದವರೆಗೆ ದೇಶದಲ್ಲಿ ಪೂಜಾ ಸ್ಥಳಗಳ ವಿರುದ್ಧ ಯಾವುದೇ ದಾವೆಗಳನ್ನು ದಾಖಲಿಸುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.