ಮುಂದಿನ ವಿಚಾರಣೆಯವರೆಗೆ ವಕ್ಫ್ ಕಾಯ್ದೆಯಲ್ಲಿ ಯಾವುದೇ ಬದಲಾವಣೆ ಮಾಡುವಂತಿಲ್ಲ, ನೂತನ ಕಾಯಿದೆಯಡಿ ಯಾವುದೇ ನೇಮಕಾತಿ ನಡೆಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೇ 5ರಂದು ನಡೆಯುವ ಮುಂದಿನ ವಿಚಾರಣೆಯವರೆಗೆ ವಕ್ಫ್ ಕಾಯ್ದೆಯ ಸೆಕ್ಷನ್ 9 ಮತ್ತು 14 ರ ಅಡಿಯಲ್ಲಿ ಕೇಂದ್ರ ಸರಕಾರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳಿಗೆ ಯಾವುದೇ ಮುಸ್ಲಿಮೇತರರ ನೇಮಕಾತಿಗಳನ್ನು ಮಾಡುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.
ವಿಚಾರಣೆ ವೇಳೆ ಸಾಲಿಸಿಟರ್ ಜನರಲ್ ಮೆಹ್ತಾ ಕೇಂದ್ರ ಸರಕಾರ ಈ ಕುರಿತು 7 ದಿನಗಳಲ್ಲಿ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ಅವಧಿಯಲ್ಲಿ ಕೇಂದ್ರ ವಕ್ಫ್ ಕೌನ್ಸಿಲ್ ಅಥವಾ ರಾಜ್ಯ ವಕ್ಫ್ ಮಂಡಳಿಗಳಿಗೆ ಯಾವುದೇ ನೇಮಕಾತಿಗಳನ್ನು ಮಾಡುವುದಿಲ್ಲ ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ಇದೇ ವೇಳೆ ಭರವಸೆ ನೀಡಿದರು.
ಈಗಾಗಲೇ ನೋಡಿಫೈ ಮಾಡಿದ ಅಥವಾ ನೋಂದಾಯಿಸಲಾದ, ಹಾಗೂ ದೀರ್ಘ ಕಾಲದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸುತ್ತಿರುವ (ವಕ್ಫ್ ಬೈ ಯೂಸರ್) ಆಸ್ತಿಗಳನ್ನು ಒಳಗೊಂಡಂತೆ ಯಾವುದೇ ವಕ್ಫ್ ಆಸ್ತಿಗಳನ್ನು ಡಿನೋಟಿಫೈ ಮಾಡುವಂತಿಲ್ಲ. ಜಿಲ್ಲಾಧಿಕಾರಿಗಳು ಅವುಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೇಶವನ್ನಾಳುವ ಪ್ರಧಾನಿ ಮೋದಿ ಬಡ ಮುಸ್ಲಿಮರ ಪರವೇ?
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ನ್ಯಾಯಮೂರ್ತಿ ಸಂಜಯ್ ಕುಮಾರ್ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ಪೀಠವು 1995 ರ ವಕ್ಫ್ ಕಾಯ್ದೆಗೆ 2025 ರಲ್ಲಿ ಮಾಡಲಾದ ತಿದ್ದುಪಡಿಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳನ್ನು ಸತತ ಎರಡನೇ ದಿನವೂ ವಿಚಾರಣೆ ನಡೆಸಿತು.
ವಕ್ಫ್ (ತಿದ್ದುಪಡಿ) ಕಾಯ್ದೆ 2025ರ ಹಲವಾರು ನಿಬಂಧನೆಗಳ ಬಗ್ಗೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕೆಲವು ಷರತ್ತುಗಳು ಸಾಂವಿಧಾನಿಕ ಪರಿಶೀಲನೆಗೆ ಒಳಗಾಗಬಹುದು ಎಂಬ ಸುಳಿವನ್ನು ನೀಡಿದೆ.