ಭಾನುವಾರದಿಂದ ಪ್ರಾರಂಭವಾಗುವ ಒಂಬತ್ತು ದಿನಗಳ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದ ಮೈಹಾರ್ ಪಟ್ಟಣದಲ್ಲಿ ಎಲ್ಲಾ ಮಾಂಸಾಹಾರಿ ಆಹಾರಗಳನ್ನು ಅಧಿಕಾರಿಗಳು ನಿಷೇಧಿಸಿದ್ದಾರೆ.
ಮೈಹಾರ್‌ನಲ್ಲಿ ಶಾರದಾ ಮಂದಿರವಿದ್ದು ವಾರ್ಷಿಕ ಒಂಬತ್ತು ದಿನಗಳ ‘ಮಾತೆ ಶಾರದಾ ಚೈತ್ರ ನವರಾತ್ರಿ ಜಾತ್ರೆ’ ನಡೆಯಲಿದೆ. ಸಾವಿರಾರು ಭಕ್ತರು ಪಟ್ಟಣಕ್ಕೆ ಭೇಟಿ ನೀಡುತ್ತಾರೆ. ಈ ಒಂಬತ್ತು ದಿನವೂ ಮಾಂಸಾಹಾರ ನಿಷೇಧಿಸಲಾಗಿದೆ.
ಇದನ್ನು ಓದಿದ್ದೀರಾ? ಮಾಂಸಾಹಾರ ಸೇವಿಸಿದ್ದ ವಿಪಕ್ಷ ನಾಯಕರನ್ನು ಮೊಘಲರಿಗೆ ಹೋಲಿಸಿದ ಪ್ರಧಾನಿ; ಕಾಂಗ್ರೆಸ್, ಆರ್‌ಜೆಡಿ ತಿರುಗೇಟು
ಇದಲ್ಲದೆ, ಚೈತಿ ಚಂದ್ (ಮಾರ್ಚ್ 30), ರಾಮ ನವಮಿ (ಏಪ್ರಿಲ್ 6), ಮಹಾವೀರ ಜಯಂತಿ (ಏಪ್ರಿಲ್ 10) ಮತ್ತು ಬುದ್ಧ ಪೂರ್ಣಿಮಾ (ಮೇ 12) ಹಬ್ಬಗಳಂದು ಭೋಪಾಲ್ ಮತ್ತು ಇಂದೋರ್‌ನಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಲಾಗುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ನಗರಗಳಲ್ಲಿ ಮಾಂಸಾಹಾರ ನಿಷೇಧ ಜಾರಿಗೊಳಿಸಲಾಗಿದ್ದು, ಆದೇಶ ಉಲ್ಲಂಘಿಸಿದರೆ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದು ಪುರಸಭೆ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಈ ಹಿಂದೆ ಲೋಕೋಪಯೋಗಿ ಇಲಾಖೆ ಸಚಿವ ರಾಕೇಶ್ ಸಿಂಗ್ ಸೇರಿದಂತೆ ಹಲವು ಬಿಜೆಪಿ ಶಾಸಕರು ನವರಾತ್ರಿಯ ಸಮಯದಲ್ಲಿ ರಾಜ್ಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಬೇಕೆಂದು ಒತ್ತಾಯಿಸಿದ್ದರು.
ಇದನ್ನು ಓದಿದ್ದೀರಾ? ರಾಯಚೂರು | ಬಾಡೂಟ ಸೇವಿಸಿ 20 ಮಂದಿ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ಈ ನಡುವೆ ಏಪ್ರಿಲ್ 1ರಿಂದ ರಾಜ್ಯಾದ್ಯಂತ ಮೈಹಾರ್ ಸೇರಿದಂತೆ 17 ಪಟ್ಟಣಗಳಲ್ಲಿ ಮದ್ಯದ ಅಂಗಡಿಗಳನ್ನು ಶಾಶ್ವತವಾಗಿ ಮುಚ್ಚಲಾಗುವುದು ಎಂದು ಸರ್ಕಾರ ಈಗಾಗಲೇ ಘೋಷಿಸಿದೆ.
ಕೆಲವು ಹಬ್ಬಗಳ ಸಂದರ್ಭದಲ್ಲಿ ಬಹುತೇಕ ಜನರು ಮಾಂಸಾಹಾರ ಸೇವಿಸಿದ ಕಾರಣ ಹೆಚ್ಚು ವ್ಯಾಪಾರ ನಡೆಯದೆಂದು ಮಾಂಸದಂಗಡಿಗಳನ್ನು ಮುಚ್ಚುವುದು ರೂಢಿಯಾಗಿತ್ತು. ಆದರೆ ಇತ್ತೀಚೆಗೆ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಧಾರ್ಮಿಕ ನಂಬಿಕೆ ಹೆಸರಲ್ಲಿ ಹೇರಿಕೆಯಾಗಿ ಮಾಡಲಾಗುತ್ತಿದೆ. ಪರವಾನಗಿ ರದ್ದು ಪಡಿಸುವಂತಹ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧಾರ್ಮಿಕ ನಂಬಿಕೆಗೆ ಗೌರವ ನೀಡಬೇಕು ಎನ್ನುವವರು ಕೆಲವರಿದ್ದರೆ, ಇನ್ನೂ ಕೆಲವರು ತಮ್ಮ ನಂಬಿಕೆಯನ್ನು ಎಲ್ಲರ ಮೇಲೆ ಹೇರುವುದು ಸರಿಯಲ್ಲ ಎಂದಿದ್ದಾರೆ.
