ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ದೆಹಲಿಯ ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ನಲ್ಲಿ ಹಮ್ಮಿಕೊಂಡಿದ್ದ ‘ಲೆಹರಾ ದೋ ತಿರಂಗಾ’ (ತಿರಂಗಾ ಮಾರ್ಚ್) ಪ್ರತಿಭಟನಾ ಮೆರವಣಿಗೆಗೆ ದೆಹಲಿ ಪೊಲೀಸರು ತಡೆ ನೀಡಿದ್ದಾರೆ. ಶುಕ್ರವಾರ ಅಭಿಜೀತ್ ದೀಪ್ಕೆ ಅವರ ನಿವಾಸಕ್ಕೆ ತೆರಳಿದ ಪೊಲೀಸರ ತಂಡ, ಅವರಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.
ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಧ್ಯ ದೆಹಲಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) 163ನೇ ವಿಧಿಯಡಿ (ಹಳೆಯ 144ನೇ ವಿಧಿ) ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೀಗಾಗಿ ಯಾವುದೇ ಅನುಮತಿಯಿಲ್ಲದೆ ಜನಸಂದಣಿ ಸೇರಿಸುವುದು ಹಾಗೂ ಮೆರವಣಿಗೆ ನಡೆಸುವುದು ಕಾನೂನುಬಾಹಿರ ಎಂದು ಪೊಲೀಸರು ನೋಟಿಸ್ನಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರಧ್ವಜ ಹಾರಿಸುವುದು ಅಪರಾಧವಲ್ಲವಾದರೂ, ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಪ್ರತಿಭಟನೆ ನಡೆಸುವುದು ನಿಯಮಗಳ ಉಲ್ಲಂಘನೆಯಾಗುತ್ತದೆ ಎಂದು ದೀಪ್ಕೆ ಅವರಿಗೆ ತಿಳಿಸಲಾಗಿದೆ.
ಇದನ್ನೂ ಓದಿ: ಗ್ಯಾನೇಶ್ ಕುಮಾರ್ ರಕ್ಷಣೆಗೆ ನಿಂತಿರುವ ಮೋದಿ, ಅಮಿತ್ ಶಾ ಸ್ವಂತ ದೇಶದ ಜನರ ವಿರುದ್ಧವೇ ಯುದ್ಧ ಸಾರಿದ್ದಾರೆ: ಅಭಿಜೀತ್ ದೀಪ್ಕೆ
ಈಗಾಗಲೇ ಕನ್ನಾಟ್ ಪ್ಲೇಸ್ ಸುತ್ತಮುತ್ತ ಸುಮಾರು 6,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಸಿಆರ್ಪಿಎಫ್/ಆರ್ಎಎಫ್ ಪಡೆಗಳನ್ನು ನಿಯೋಜಿಸಲಾಗಿದೆ. ಸೆಂಟ್ರಲ್ ಪಾರ್ಕ್ ಅನ್ನು ಎರಡು ದಿನಗಳ ಕಾಲ ಸಾರ್ವಜನಿಕರಿಗೆ ಮುಚ್ಚಲಾಗಿದೆ. ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ವಿಚಾರಣೆಗಳ ನಡುವೆ ದೆಹಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ದೀಪ್ಕೆ, ಅವರ ಕಾರ್ಯಕರ್ತರಿಗೆ ದೆಹಲಿ ಪೊಲೀಸರು ನೋಟಿಸ್ ನೀಡಿರುವುದಕ್ಕೆ ಮತ್ತು ಪ್ರತಿಭಟನೆಗೆ ತಡೆ ಒಡ್ಡಿರುವುದಕ್ಕೆ ದೇಶಾದ್ಯಂತ ವಿರೋಧ ಪಕ್ಷಗಳ ಪ್ರಮುಖ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ರಾಷ್ಟ್ರಧ್ವಜ ಹಾರಿಸಿದ ಯುವಕರನ್ನು ಬಂಧಿಸಿರುವುದು ಪ್ರತಿಭಟನೆಯನ್ನು ಹತ್ತಿಕ್ಕುವ ಕ್ರಮವಾಗಿದೆ. ದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಸಂವಿಧಾನಾತ್ಮಕ ಹಕ್ಕು. ಜಂತರ್ ಮಂತರ್ ಭಾರತೀಯರ ಆಸ್ತಿ, ಅದನ್ನು ಮತ್ತೆ ವಶಕ್ಕೆ ಪಡೆಯುತ್ತೇವೆ ಎಂದು ಹೇಳಿದ್ದಾರೆ.
“ನಮ್ಮದೇ ದೇಶದಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಹಾರಿಸುವುದು ಮತ್ತು ಹಿಡಿದು ಮೆರವಣಿಗೆ ಮಾಡುವುದು ಅಪರಾಧವೇ? ಪೊಲೀಸರ ಈ ಕ್ರಮ ತೀರಾ ಹಾಸ್ಯಾಸ್ಪದ ಮತ್ತು ಖಂಡನೀಯ” ಎಂದು ಎಕ್ಸ್ (X)ನಲ್ಲಿ ಪ್ರಶ್ನಿಸಿದ್ದಾರೆ. ಸಿಜೆಪಿ ಕಾರ್ಯಕರ್ತರ ಬಂಧನ ಮತ್ತು ನೋಟಿಸ್ ಜಾರಿಯನ್ನು ಖಂಡಿಸಿದ್ದು, ಯುವಕರ ಧ್ವನಿಯನ್ನು ಅಡಗಿಸಲು ಸರ್ಕಾರ ಯತ್ನಿಸುತ್ತಿದೆ. ಪ್ರಜಾಪ್ರಭುತ್ವದ ಹಕ್ಕುಗಳನ್ನು ಕಾಪಾಡಲು ತಾವು ಯುವಜನತೆಯ ಪರವಾಗಿ ನಿಲ್ಲುವುದಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಮತ್ತು ಆರ್ಜೆಡಿ ಸಂಸದ ಮನೋಜ್ ಝಾ ಕೂಡ ಪೊಲೀಸರ ಕ್ರಮವನ್ನು ಪ್ರಶ್ನಿಸಿದ್ದು, “ತ್ರಿವರ್ಣ ಧ್ವಜ ಹಿಡಿಯುವುದು ದೇಶದಲ್ಲಿ ಯಾವಾಗ ಅಪರಾಧವಾಯಿತು?” ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೋಲಿಸರ ನೋಟಿಸ್ಗೆ ಪ್ರತಿಕ್ರಿಯಿಸಿರುವ ಅಭಿಜೀತ್ ದೀಪ್ಕೆ, ಪ್ರಜಾಸತ್ತಾತ್ಮಕವಾಗಿ ಮತ್ತು ಶಾಂತಿಯುತವಾಗಿ ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ಮಾಡುವುದು ಅಪರಾಧವಲ್ಲ. ತಮ್ಮ ಹಕ್ಕುಗಳಿಗಾಗಿ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.




