ಕೋಲ್ಕತ್ತಾದಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಕ್ರೂರ ಘಟನೆಯು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೃತ್ಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ಹೊತ್ತಿನಲ್ಲಿ ಮತ್ತೊಂದು ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರಾಖಂಡದಲ್ಲಿ ನಾಪತ್ತೆಯಾಗಿದ್ದ 33 ವರ್ಷದ ನರ್ಸ್ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ ಆರೋಪದ ಮೇಲೆ ಆರೋಪಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ರುದ್ರಪುರದಲ್ಲಿ ಜುಲೈ 30ರಂದು ನರ್ಸ್ ನಾಪತ್ತೆಯಾಗಿದ್ದರು. ಅವರು ಗದರ್‌ಪುರದ ಇಸ್ಲಾಂನಗರದಲ್ಲಿ ವಾಸಿಸುತ್ತಿದ್ದರು. ನೈನಿತಾಲ್‌ನ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರು ನಾಪತ್ತೆಯಾಗಿದ್ದರೆಂದು ಜುಲೈ 31ರಂದು ಆಕೆಯ ಸಹೋದರಿ ರುದ್ರುಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದ ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದರು. ಉತ್ತರ ಪ್ರದೇಶದ ದಿಬ್ಬಿಬಾ ಪ್ರದೇಶದ ನಿರ್ಜನ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಲಾಗಿದೆ ಎಂದು ವರದಿಯಲ್ಲಿ ಕಂಡುಬಂತಿತ್ತು.
ಅತ್ಯಾಚಾರ-ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ರಾಜಸ್ಥಾನದ ಜೋಧ್‌ಪುರ ಮೂಲದ ಆರೋಪಿ ಧರ್ಮೇಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಆತ, ಉತ್ತರ ಪ್ರದೇಶದ ಬರೇಲಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ.
ಆರೋಪಿ ಧರ್ಮೇಂದ್ರ ಸಂತ್ರಸ್ತೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದು, ಚಿನ್ನಾಭರಣೆಗಳನ್ನು ದೋಚಿ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಆರೋಪಿಯು ಸಂತ್ರಸ್ತೆ ಮೊಬೈಲ್‌ಅನ್ನೂ ಕದ್ದಿದ್ದು, ಮೊಬೈಲ್ ನೆಟ್‌ವರ್ಕ್ ಮೂಲಕ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನು ಬಂಧಿಸಿ, ವಿಚಾರಣೆ ಒಳಪಡಿಸಿದ್ದು, ಆರೋಪಿಯು ದರೋಡೆ ನಡೆಸಲು ಕಾಶಿಪುರ ರಸ್ತೆಯ ಬಸುಂಧರಾ ಅಪಾರ್ಟ್‌ಮೆಂಟ್‌ನೊಳಗೆ ಹೋಗುತ್ತಿದ್ದಾಗ ನರ್ಸ್ ಮೇಲೆ ಹಲ್ಲೆ ನಡೆಸಿ, ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.