ಮಧ್ಯಾಹ್ನದ ಊಟಕ್ಕಾಗಿ ಶಾಲೆಗೆ ತನ್ನ ಟಿಫಿನ್ ಬಾಕ್ಸ್‌ನಲ್ಲಿ ಮಾಂಸಾಹಾರ ತಂದಿದ್ದಕ್ಕಾಗಿ ನರ್ಸರಿ ವಿದ್ಯಾರ್ಥಿಯನ್ನು ಶಾಲೆಯ ಪ್ರಾಂಶುಪಾಲರು ಅಮಾನತು ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಅಮ್ರೋಹಾದಲ್ಲಿರುವ ಖಾಸಗಿ ನರ್ಸರಿ ಶಾಲೆಯಲ್ಲಿ ಘಟನೆ ನಡೆದಿದೆ. ಮಾಂಸಾಹಾರ ತಂದಿದ್ದಕ್ಕಾಗಿ ವಿದ್ಯಾರ್ಥಿಯನ್ನು ಪ್ರಾಂಶುಪಾಲ ನಿಂದಿಸಿ, ಅಮಾನತು ಮಾಡಿರುವ ದೃಶ್ಯವನ್ನು ವಿದ್ಯಾರ್ಥಿಯ ತಾಯಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ, ಘಟನೆ ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಯ ತಾಯಿ ನಡುವೆ ತೀವ್ರ ವಾಗ್ವಾದ ನಡೆದಿದೆ. “ನಮ್ಮ ದೇವಸ್ಥಾನಗಳಿಗೆ ಅಪಚಾರ ಮಾಡಿ, ಶಾಲೆಗೆ ಮಾಂಸಾಹಾರ ತರುವ ಇಂತಹ ಮಕ್ಕಳಿಗೆ ನೈತಿಕತೆಯನ್ನು ಕಲಿಸಲು ನಾವು ಬಯಸುವುದಿಲ್ಲ” ಎಂದು ಪ್ರಾಂಶುಪಾಲರು ತಾಯಿಗೆ ಹೇಳುವುದು ವಿಡಿಯೋದಲ್ಲಿ ಕಂಡುಬಂದಿದೆ.
“ಎಲ್ಲರಿಗೂ ಮಾಂಸಾಹಾರ ತಿನ್ನಿಸಿ, ಅವರನ್ನು ಇಸ್ಲಾಂಗೆ ಮತಾಂತರಿಸುವ ಬಗ್ಗೆ ವಿದ್ಯಾರ್ಥಿ ಮಾತನಾಡಿದ್ದಾನೆ” ಎಂದು ಪ್ರಾಂಶುಪಾಲ ಆರೋಪಿಸಿದ್ದಾರೆ. ಅವರ ಆರೋಪವನ್ನು ವಿದ್ಯಾರ್ಥಿಯ ತಾಯಿ ನಿರಾಕರಿಸಿದ್ದಾರೆ.
“ತನ್ನ ಮಗನಿಗೆ 7 ವರ್ಷ. ಆತ ಮತಾಂತರದಂತಹ ಗಂಭೀರ ವಿಚಾರಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ” ಎಂದು ತಾಯಿ ಹೇಳಿದ್ದಾರೆ. ಅದಕ್ಕೆ, ಪ್ರಾಂಶುಪಾಲರು “ಮಗು ಮನೆಯಲ್ಲಿ ಎಲ್ಲವನ್ನೂ ಕಲಿಯುತ್ತದೆ. ಅವರ ಪೋಷಕರು ಎಲ್ಲವನ್ನೂ ಕಲಿಸುತ್ತಾರೆ” ಎಂದು ಕೋಮುದ್ವೇಷದಿಂದ ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ.
ಇತರ ವಿದ್ಯಾರ್ಥಿಗಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದು, ಶಾಲೆಯ ರಿಜಿಸ್ಟರ್‌ನಿಂದ ವಿದ್ಯಾರ್ಥಿಯ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ಸುಮಾರು 7 ನಿಮಿಷಗಳ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಮ್ರೋಹಾ ಪೊಲೀಸರು, “ಜಿಲ್ಲಾ ಶಾಲಾ ಇನ್ಸ್‌ಪೆಕ್ಟರ್ (ಡಿಐಎಸ್) ಕ್ರಮ ಕೈಗೊಳ್ಳಲಿದ್ದಾರೆ. ಈ ವಿಷಯದ ಬಗ್ಗೆ ತನಿಖೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ತನಿಖೆಗಾಗಿ ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ” ಎಂದು ಹೇಳಿದ್ದಾರೆ.