ಮಹಾರಾಷ್ಟ್ರದಲ್ಲಿ ಯೂಟ್ಯೂಬರ್‌ಗಳು ನಡೆಸುವ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಸ್ಪರ್ಧಿಯೊಬ್ಬರಿಗೆ ಅಶ್ಲೀಲ ಮತ್ತು ಅಸಹ್ಯಕರವಾಗಿ ಪ್ರಶ್ನೆ ಕೇಳಿದ್ದ ಯೂಟ್ಯೂಬರ್ ರಣವೀರ್ ಸೇರಿದಂತೆ 40 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರ ಸೈಬರ್ ಕ್ರೈಮ್ ಘಟಕದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಣವೀರ್ ಅಲ್ಲಾಬಾಡಿಯಾ ಸೇರಿದಂತೆ ಹಲವರಿಗೆ ಮಹಿಳಾ ಆಯೋಗವು ಸಮನ್ಸ್ ಕೂಡ ಜಾರಿ ಮಾಡಿದೆ.
ಹಾಸ್ಯನಟ ಸಮಯ್ ರೈನಾ ನಡೆಸಿಕೊಡುವ ಕಾರ್ಯಕ್ರಮದಲ್ಲಿ ತೀರ್ಪುಗಾರಾಗಿದ್ದ ರಣವೀರ್ ಅಲ್ಲಾಬಾಡಿಯಾ ಸ್ಪರ್ಧಿಯೊಬ್ಬನಿಗೆ ಅಶ್ಲೀಲವಾಗಿ ಪ್ರಶ್ನೆ ಕೇಳಿದ್ದರು. “ನಿಮ್ಮ ತಂದೆ-ತಾಯಿ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುವ ಮೂಲಕ ದಿನ ದೂಡುತ್ತೀರಾ? ಅಥವಾ ನೀವು ಕೂಡ ಅವರೊಂದಿಗೆ ಸೇರಿಕೊಳ್ಳಲು ಇಚ್ಛಿಸುತ್ತೀರಾ?” ಎಂದು ಹೇಳಿದ್ದರು. ಅವರ ಪ್ರಶ್ನೆಯಿಂದ ಸ್ಪರ್ಧಿ ಮುಜುಗರಕ್ಕೊಳಗಾಗಿ, ತಲೆ ತಗ್ಗಿಸಿ ನಿಂತಿದ್ದರು. ಆದಾಗ್ಯೂ, ಉಳಿದ ತೀರ್ಪುಗಾರರ ರಣವೀರ್ ಪ್ರಶ್ನೆಗೆ ಚಪ್ಪಾಳೆ ತಟ್ಟಿ, ಹಾಸ್ಯ ಮಾಡಿ ರಂಜಿಸಿದ್ದರು.
ಆ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಯೂಟ್ಯೂಬರ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ, ಸೈಬರ್ ಕ್ರೈಮ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅಲ್ಲದೆ, ರಣವೀರ್ ಅಲ್ಲಾಬಾಡಿಯಾ, ಸಮಯ್ ರೈನಾ, ಅಪೂರ್ವ ಮುಖಿಜಾ, ಆಶಿಶ್ ಚಂಚಲಾನಿ, ಜಸ್ಪ್ರೀತ್ ಸಿಂಗ್ ಮತ್ತು ಕಾರ್ಯಕ್ರಮದ ನಿರ್ಮಾಪಕರಿಗೆ ಮಹಿಳಾ ಆಯೋಗವು ಸಮನ್ಸ್ ಜಾರಿ ಮಾಡಿದೆ.
“ಇಂತಹ ಹೇಳಿಕೆಯು ಸಮಾನತೆ ಮತ್ತು ಪರಸ್ಪರ ಗೌರವವನ್ನು ಎತ್ತಿಹಿಡಿಯುವ ಸಮಾಜದ ಮೌಲ್ಯಗಳನ್ನು ಉಲ್ಲಂಘಿಸುತ್ತದೆ. ಆರೋಪಿಗಳು ಫೆಬ್ರವರಿ 17ರಂದು ಖುದ್ದಾಗಿ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಬೇಕು” ಎಂದು ಆಯೋಗ ಸೂಚಿಸಿದೆ.
ಈವರೆಗೆ ಕಾರ್ಯಕ್ರಮವು 18 ಸಂಚಿಕೆಗಳಲ್ಲಿ ಪ್ರಸಾರವಾಗಿದ್ದು, ಆ ಎಲ್ಲ ಸಂಚಿಕೆಗಳನ್ನು ಯೂಟ್ಯೂಬ್‌ನಿಂದ ತೆಗೆದುಹಾಕುವಂತೆ ಸೈಬರ್ ಕ್ರೈಮ್ ಘಟಕವು ಸೂಚಿಸಿದೆ.