ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಘಟನೆಯು ಒಡಿಶಾದ ರಾಜಧಾನಿ ಭುವನೇಶ್ವರಲ್ಲಿ ನಡೆದಿದ್ದು ಪೊಲೀಸರು ಮಂಗಳವಾರ ಕಾಮುಕ ಯುವಕನ ಬಂಧನ ಮಾಡಿದ್ದಾರೆ.
ಆರೋಪಿ 23 ವರ್ಷದ ಸಂತೋಷ್ ಖುಂಟಿಯಾನನ್ನು ಏರ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಚಾಲಕನಾಗಿದ್ದು, ಮಗುವಿನ ಮೇಲೆ ಅತ್ಯಾಚಾರ ಮಾಡಿದ ಬಳಿಕ ತಲೆಮರೆಸಿಕೊಂಡಿದ್ದ. ಇನ್ನು ಮಗುವಿನ ಆರೋಗ್ಯ ಸ್ಥಿತಿ ಸದ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ.
“ಮಗುವನ್ನು ಸೋಮವಾರ ಸಂಜೆ ಆಸ್ಪತ್ರೆಗೆ ಕರೆತರಲಾಗಿದೆ. ಪರೀಕ್ಷೆ ನಡೆಸಲಾಗಿತ್ತು. ಪೋಷಕರು ಇಂದು ಅಲ್ಟ್ರಾಸೌಂಡ್ ಮಾಡಿಸಲು ಬಂದಿದ್ದಾರೆ” ಎಂದು ಕ್ಯಾಪಿಟಲ್ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಮಗು ಸಂತೋಷ್ ಮನೆಗೆ ಆಟವಾಡಲು ಬಂದಿದ್ದಾಗ ಈ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇರಲಿಲ್ಲ. ಆರೋಪಿ ಸಂತೋಷ್ ಖುಂಟಿಯಾ ಮದ್ಯದ ಅಮಲಿನಲ್ಲಿ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ವರದಿಯಾಗಿದೆ.
ಆರೋಪಿಯ ವೈದ್ಯಕೀಯ ಪರೀಕ್ಷೆಯನ್ನು ಕ್ಯಾಪಿಟಲ್ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ಅತ್ಯಾಚಾರಕ್ಕೊಳಗಾದ 13 ವರ್ಷದ ಬಾಲಕಿ ಗರ್ಭಿಣಿ : ಆಸ್ಪತ್ರೆಯಲ್ಲಿ ಸಾವು
ಈ ಬಗ್ಗೆ ಮಾಹಿತಿ ನೀಡಿರುವ ಭುವನೇಶ್ವರ ಪೊಲೀಸ್ ಉಪ ಕಮಿಷನರ್ (ಡಿಸಿಪಿ) ಪ್ರತೀಕ್ ಸಿಂಗ್, “ಸಂತ್ರಸ್ತೆಯ ಕುಟುಂಬವು ಸಂಜೆ ತಡವಾಗಿ ಮನೆಗೆ ಬಂದಿದ್ದು, ಮಗುವಿಗಾಗಿ ಹುಡುಕಾಡಿದೆ. ನಂತರ ಆರೋಪಿಯ ಮನೆಯಿಂದ ಬಾಲಕಿಯನ್ನು ರಕ್ಷಿಸಿ ಏರ್‌ಫೀಲ್ಡ್ ಪೊಲೀಸರಿಗೆ ದೂರು ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
ವಿಶೇಷ ತಂಡವನ್ನು ರಚಿಸಲಾಗಿದ್ದು, ಆರೋಪಿಗಳು ಪುರಿ ಜಿಲ್ಲೆಯ ಪಿಪಿಲಿ ಪ್ರದೇಶಕ್ಕೆ ತೆರಳಿರುವುದು ಪತ್ತೆಯಾಗಿದೆ. ಆದರೆ, ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದನು. ಬಳಿಕ ಶೋಧ ಕಾರ್ಯಚರಣೆ ನಡೆಸಿ ಆರೋಪಿಯ ಬಂಧನ ಮಾಡಲಾಗಿದೆ.
“ಆರೋಪಿಯನ್ನು 24 ಗಂಟೆಗಳ ಒಳಗೆ ಬಂಧಿಸಲಾಗಿದೆ. ವಿಧಿವಿಜ್ಞಾನ ತಂಡವು ಎಲ್ಲಾ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದೆ. ಸಂತ್ರಸ್ತರಿಗೆ ವೈದ್ಯಕೀಯ ಆರೈಕೆಯನ್ನು ನೀಡಲಾಗಿದೆ. ಆರೋಪಿಗಳ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ” ಎಂದು ಪ್ರತೀಕ್ ಸಿಂಗ್ ಹೇಳಿದರು.
“ಆರೋಪಿ ಸಂತ್ರಸ್ತೆಯ ತಾಯಿಗೂ ಬೆದರಿಕೆ ಹಾಕಿದ್ದು ನಾವು ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ತನಿಖೆಗೆ ಮುಖ್ಯವಾದ ಉಡುಪುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದರು.