ಪ್ರಿಯಕರನ ಎದುರೇ 21 ವರ್ಷದ ಯುವತಿಯ ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಒಡಿಶಾದ ನಯಾಗರ್ ಜಿಲ್ಲೆಯ ಕಾಡು ಪ್ರದೇಶದಲ್ಲಿ ನಡೆದಿದೆ.
ಘಟನೆ ಅಕ್ಟೋಬರ್ 20ರಂದು ನಡೆದಿದ್ದರೂ ಸಂತ್ರಸ್ತ ಯುವತಿ ಶುಕ್ರವಾರ ಫತೇಗಢ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಮೂಹಿಕ ಅತ್ಯಾಚಾರಗೈದ ದುರುಳರು ಕೃತ್ಯದ ವಿಡಿಯೋ ಮಾಡಿದ್ದರು ಎಂದು ಹೇಳಲಾಗಿದೆ.
ಯುವತಿ ಮತ್ತು ಆಕೆಯ ಪ್ರಿಯಕರ ಅಕ್ಟೋಬರ್ 20ರ ಸಂಜೆ ಫತೇಗಢ ರಾಮ ಮಂದಿರಕ್ಕೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತು ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶದಲ್ಲಿ ಕಾಮುಕರ ಅಟ್ಟಹಾಸ; ಪತಿಯನ್ನು ಮರಕ್ಕೆ ಕಟ್ಟಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ
“ಮೂವರು ಅಪರಿಚಿತ ವ್ಯಕ್ತಿಗಳು ಪಿತಾಖೈ ಅರಣ್ಯ ಪ್ರದೇಶದ ಬಳಿ ಇಬ್ಬರನ್ನು ಅಡ್ಡಗಟ್ಟಿ ಕಾಡಿಗೆ ಎಳೆದೊಯ್ದಿದ್ದಾರೆ. ಕಾಡಿನಲ್ಲಿ ಯುವಕಿನಿಗೆ ಚಾಕು ತೋರಿಸಿ ಬೆದರಿಸಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ” ಎಂದು ಖಂಡಪದ ಉಪವಿಭಾಗದ ಪೊಲೀಸ್ ಅಧಿಕಾರಿ ಬಿಮಲ್ ಕುಮಾರ್ ಬಾರಿಕ್ ಸುದ್ದಿಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದಾರೆ.
“ಆರೋಪಿಗಳು ಘಟನೆಯನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂತ್ರಸ್ತೆಯ ಹೇಳಿಕೆ ದಾಖಲಿಸಲಾಗುತ್ತಿದ್ದು, ಆಕೆಯ ವೈದ್ಯಕೀಯ ಪರೀಕ್ಷೆಯನ್ನು ಸಹ ಮಾಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
