ಹರಿಯಾಣದಲ್ಲಿ ಮುಂದಿನ ತಿಂಗಳು (ಅಕ್ಟೋಬರ್) ವಿಧಾನಸಭಾ ಚುನಾವಣೆ ನಡೆಯಲಿದೆ. ಕಳೆದ 200 ದಿನಗಳಿಂದ ರೈತರು ಎಂಎಸ್‌ಪಿ ಜಾರಿಗಾಗಿ ಒತ್ತಾಯಿಸಿ ಪಂಚಾಜ್ ಮತ್ತು ಹರಿಯಾಣ ನಡುವಿನ ಶಂಭು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾನಿರತ ರೈತರನ್ನು ಒಲಿಂಪಿಕ್ ಕುಸ್ತಿಪಟು ವಿನೇಶ್ ಫೋಗಟ್ ಭೇಟಿ ಮಾಡಿದ್ದಾರೆ. ರೈತ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. “ನಿಮ್ಮ ಮಗಳು, ನಿಮ್ಮೊಂದಿಗಿದ್ದೇನೆ” ಎಂದು ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಜಾರಿಗೊಳಿಸಬೇಕು. ಎಂಎಸ್‌ಪಿಗೆ ಕಾನೂನು ಖಾತರಿ ನೀಡಬೇಕು. ಈ ಹಿಂದೆ ನಡೆದ ರೈತ ಹೋರಾಟದ ಸಮಯದಲ್ಲಿ ಕೇಂದ್ರ ಸರ್ಕಾರವು ರೈತರಿಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರೈತರು ‘ದೆಹಲಿ ಚಲೋ’ ಆಂದೋಲನ ನಡೆಸುತ್ತಿದ್ದಾರೆ. ಕಳೆದ 7 ತಿಂಗಳ ಹಿಂದೆ ದೆಹಲಿಗೆ ಹೊರಟಿದ್ದ ರೈತರನ್ನು ಹರಿಯಾಣ ಪೊಲೀಸರು ಶಂಭು ಗಡಿಯಲ್ಲಿ ತಡೆದಿದ್ದು, ಅಂದಿನಿಂದಲೇ ರೈತರು ಅಲ್ಲಿಯೇ ಪ್ರತಿಭಟನೆ ನಡೆಸುತತಿದ್ದಾರೆ. ರೈತ ಹೋರಾಟವನ್ನು 50 ಕೆಜಿ ವಿಭಾಗದಲ್ಲಿ 100 ಗ್ರಾಂ ಅಧಿಕ ತೂಕದ ಕಾರಣಕ್ಕಾಗಿ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಿಂದ ಅನರ್ಹಗೊಂಡ ಫೋಗಟ್ ಅಭಿನಂದಿಸಿದ್ದಾರೆ.
“ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ನಾನು ನಿಮ್ಮ ಮಗಳು. ನಿಮ್ಮೊಂದಿಗಿದ್ದೇನೆ. ರೈತರ ಸಮಸ್ಯೆಗಳು ಬಗೆಹರಿಯದೆ ಉಳಿದಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನೀವೆಲ್ಲರೂ (ರೈತರು) ಇಷ್ಟು ದಿನ ಪ್ರತಿಭಟನೆ ನಡೆಸುತ್ತಿರುವುದನ್ನು ನೋಡಲು ನೋವಾಗುತ್ತದೆ. ಕೆಲವೊಮ್ಮೆ ನಾವು ನಿಮಗಾಗಿ ಏನನ್ನೂ ಮಾಡಲು ಸಾಧ್ಯವಾಗದೆ ಅಸಹಾಯಕರಾಗಿದ್ದೇವೆ. ನಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತೇವೆ. ಆದರೆ ನಮ್ಮ ಸ್ವಂತ ಕುಟುಂಬಕ್ಕಾಗಿ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ರೈತರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು” ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.