ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಇಂದು ಬಿಜೆಪಿ ಸಂಸದ ಓಂ ಬಿರ್ಲಾ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಕೆ ಸುರೇಶ್ ನಡುವೆ ತೀವ್ರ ಪೈಪೋಟಿ ನಡೆಯಲಿದೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿಪಕ್ಷಗಳ ಇಂಡಿಯಾ ಒಕ್ಕೂಟದ ನಡುವೆ ಸ್ಪೀಕರ್ ಸ್ಥಾನದ ಬಗ್ಗೆ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಇಂಡಿಯಾ ಒಕ್ಕೂಟವು ತನ್ನ ಅಭ್ಯರ್ಥಿಯನ್ನು ಸ್ಪೀಕರ್ ಚುನಾವಣೆಗೆ ನಿಲ್ಲಿಸಲು ನಿರ್ಧರಿಸಿದೆ.
ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ನೀಡಲು ಸರ್ಕಾರ ಒಪ್ಪದ ಕಾರಣ ಮಾತುಕತೆ ಮುರಿದು ಬಿದ್ದಿದೆ. ಲೋಕಸಭೆ ಸ್ಪೀಕರ್ ಸ್ಥಾನಕ್ಕೆ ಇಂದು (ಬುಧವಾರ) ಬೆಳಗ್ಗೆ 11 ಗಂಟೆಗೆ ಚುನಾವಣೆ ನಡೆಯಲಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಸ್ಪೀಕರ್ ಸ್ಥಾನ : ವಿಪಕ್ಷದಿಂದ ಕಾಂಗ್ರೆಸ್‌ನ ಕೆ ಸುರೇಶ್, ಎನ್‌ಡಿಎನಿಂದ ಓಂ ಬಿರ್ಲಾ ಪುನಃ ಕಣಕ್ಕೆ
ಗೆಲ್ಲಲು ಎಷ್ಟು ಮತ ಅಗತ್ಯ?
ಎನ್‌ಡಿಎ ಲೋಕಸಭೆಯಲ್ಲಿ ಬಹುಮತವನ್ನು ಹೊಂದಿದೆ. ಹೀಗಿರುವಾಗ ಓಂ ಬಿರ್ಲಾ ಅವರನ್ನು ಆಯ್ಕೆ ಮಾಡುವಲ್ಲಿ ಎನ್‌ಡಿಎ ತೊಂದರೆ ಇದ್ದಂತಿಲ್ಲ. ಆದರೆ ಇಂಡಿಯಾ ಒಕ್ಕೂಟಕ್ಕೆ ಸವಾಲಿನ ಹಾದಿಯಿದೆ. ಚುನಾವಣೆಯಲ್ಲಿ ಗೆಲ್ಲಲು 271 ಮತಗಳು ಅಗತ್ಯವಾಗಿದೆ. ಅಂದರೆ 542 ಸಂಸದರ ಅರ್ಧ ಭಾಗದಷ್ಟು ಮತಗಳು ಪಡೆಯುವುದು ಅಗತ್ಯ. ಕೆಳಮನೆಯಲ್ಲಿ ಎನ್‌ಡಿಎ 293 ಸದಸ್ಯರನ್ನು ಹೊಂದಿದ್ದರೆ, ಇಂಡಿಯಾ ಒಕ್ಕೂಟ 233 ಸದಸ್ಯರನ್ನು ಹೊಂದಿದೆ.
ಇಂಡಿಯಾ ಮೈತ್ರಿಕೂಟದ 5 ಮಂದಿ ಸೇರಿದಂತೆ ಇನ್ನೂ 7 ಸಂಸದರು ಪ್ರಮಾಣ ವಚನ ಸ್ವೀಕರಿಸಬೇಕಿದೆ. ಸ್ಪೀಕರ್ ಆಯ್ಕೆಯಾದ ನಂತರ ಈ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದಲ್ಲದೆ ರಾಹುಲ್ ಗಾಂಧಿ ರಾಯ್‌ಬರೇಲಿ ಮತ್ತು ವಯನಾಡು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ರಾಯ್‌ಬರೇಲಿಯಲ್ಲಿ ಸಂಸದರಾಗುವ ನಿರ್ಧಾರ ಮಾಡಿದ್ದರಿಂದ ವಯನಾಡು ಲೋಕಸಭಾ ಸ್ಥಾನವು ಈಗ ಖಾಲಿಯಾಗಿದೆ. ವಯನಾಡು ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ಇನ್ನಷ್ಟೇ ನಡೆಯಬೇಕಿದೆ.
ಇದನ್ನು ಓದಿದ್ದೀರಾ? ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣ ವಚನ: ವಿಪಕ್ಷಗಳ ವಿರೋಧ
ಆಡಳಿತಾರೂಢ ಎನ್‌ಡಿಎ ಅಥವಾ ವಿರೋಧ ಪಕ್ಷದ ಇಂಡಿಯಾ ಒಕ್ಕೂಟದ ಭಾಗವಲ್ಲದ ವೈಎಸ್‌ಆರ್‌ಸಿಪಿ ಚುನಾವಣೆಯಲ್ಲಿ ಓಂ ಬಿರ್ಲಾ ಅವರನ್ನು ಬೆಂಬಲಿಸಲು ನಿರ್ಧರಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಇದಲ್ಲದೆ ಟಿಎಂಸಿ ಜೊತೆ ಸ್ಪೀಕರ್ ಸ್ಥಾನಕ್ಕೆ ಕೆ ಸುರೇಶ್ ಅವರನ್ನು ಕಣಕ್ಕಿಳಿಸುವ ಮೊದಲು ಸಮಾಲೋಚನೆ ನಡೆಸದಿರುವ ಬಗ್ಗೆ ಅಸಮಾಧಾನವಿದೆ.
ಇದು ಕಾಂಗ್ರೆಸ್ ಪಕ್ಷದ ಏಕಪಕ್ಷೀಯ ನಿರ್ಧಾರ ಎಂದು ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. “ಈ ಬಗ್ಗೆ ನಮ್ಮನ್ನು ಸಂಪರ್ಕಿಸಿಲ್ಲ, ಯಾವುದೇ ಚರ್ಚೆ ನಡೆದಿಲ್ಲ. ದುರದೃಷ್ಟವಶಾತ್ ಇದು ಏಕಪಕ್ಷೀಯ ನಿರ್ಧಾರ” ಎಂದು ಬ್ಯಾನರ್ಜಿ ಹೇಳಿದ್ದಾರೆ.