ಬಿರಿಯಾನಿ ತಿನ್ನಲು ಹಣ ಕದಿಯುವುದಕ್ಕಾಗಿ 16 ವರ್ಷದ ಬಾಲಕನೊಬ್ಬ ಮತ್ತೊಬ್ಬ ಅಪ್ರಾಪ್ತನೊಬ್ಬನನ್ನು 60 ಬಾರಿ ಚಾಕುವಿನಿಂದ ಇರಿದು ಕೊಂದ ನಂತರ ಮೃತದೇಹದ ಮೇಲೆ ನೃತ್ಯವಾಡಿದ ಭೀಕರ ಘಟನೆ ಈಶಾನ್ಯ ದೆಹಲಿ ಸ್ವಾಗತ ಪ್ರದೇಶದಲ್ಲಿ ನಡೆದಿದೆ.
350 ರೂ.ಗಳಿಗೆ ದರೋಡೆ ನಡೆದಿದ್ದು, ಹದಿಹರೆಯದ ದಾಳಿಕೋರ ಬಾಲಕನನ್ನು ಮೊದಲು ಕತ್ತು ಹಿಸುಕಿ ಪ್ರಜ್ಞೆ ತಪ್ಪಿಸಿದ್ದಾನೆ. ನಂತರ ವ್ಯಕ್ತಿಯ ದೇಹಕ್ಕೆ 60 ಬಾರಿ ಇರಿದು ಕೊಂದು ಶವದ ಮೇಲೆ ನೃತ್ಯವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಬ್ಬರಿಗೂ ಪರಿಚಯವಿರಲಿಲ್ಲ. ಹತ್ಯೆಯ ಆರೋಪಿಯು ಮತ್ತೊಬ್ಬ ಬಾಲಕನನ್ನು ಮೊದಲು ದರೋಡೆ ಮಾಡಿದ್ದಾನೆ. ಆತ ವಿರೋಧಿಸಿದ ನಂತರ ಕೊಲೆ ಮಾಡಿದ್ದಾನೆ.
ಆರೋಪಿ ಅಪ್ರಾಪ್ತನ ಶವವನ್ನು ಕಿರಿದಾದ ರಸ್ತೆಯಲ್ಲಿ ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವನು ಸತ್ತಿದ್ದಾನೆ ಎಂದು ಖಚಿತಪಡಿಸಿಕೊಳ್ಳಲು ಬಾಲಕನ ಕುತ್ತಿಗೆಗೆ ಪದೇ ಪದೇ ಇರಿದಿದ್ದಾನೆ. ಕೆಲವು ಬಾರಿ ತಲೆಯನ್ನು ಒದ್ದಿದ್ದಾನೆ. ನಂತರ ಮೃತದೇಹದ ಮೇಲೆ ನಿಂತು ನೃತ್ಯ ಮಾಡಲು ಪ್ರಾರಂಭಿಸುತ್ತಾನೆ. ಘಟನೆಯ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬ್ರ್ಯಾಂಡ್ ಬೆಂಗಳೂರಿನಲ್ಲಿ ಬಡವರ ಪ್ರಾಣಕ್ಕೆ ಗ್ಯಾರಂಟಿಯಿಲ್ಲ
“ಮಂಗಳವಾರ ರಾತ್ರಿ 11.15 ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಕರೆ ಬಂತು. ಈಶಾನ್ಯ ದೆಹಲಿ ಸ್ವಾಗತ ಪ್ರದೇಶದ ಜಂತಾ ಮಜ್ದೂರ್ ಕಾಲೋನಿಯಲ್ಲಿ ದರೋಡೆ ಮಾಡುವ ಉದ್ದೇಶದಿಂದ ಸುಮಾರು 17 ವರ್ಷ ವಯಸ್ಸಿನ ಅಪ್ರಾಪ್ತನನ್ನು ಮತ್ತೊಬ್ಬ ಚಾಕುವಿನಿಂದ ಇರಿದು ಕೊಂದಿದ್ದಾನೆ” ಎಂದು ಪೊಲೀಸ್ ಉಪ ಆಯುಕ್ತರಾದ (ಈಶಾನ್ಯ) ಜಾಯ್ ಟಿರ್ಕಿ ಹೇಳಿದ್ದಾರೆ.
ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಯು ಬಿರಿಯಾನಿ ತಿನ್ನಲು 350 ರೂ.ಗಳಿಗಾಗಿ ಕಳ್ಳತನ ಮಾಡಿದ್ದು, ಇಲ್ಲಿಯವರೆಗೆ ಆತನ ಹಿನ್ನೆಲೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಫೋರೆನ್ಸಿಕ್ ತಂಡವೂ ಸ್ಥಳಕ್ಕೆ ಭೇಟಿ ನೀಡಿದೆ.