ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆ ವಿರೋಧಿ ಎಂದೇ ಪರಿಗಣಿಸಲಾಗಿರುವ ‘ಒಂದು ದೇಶ – ಒಂದು ಚುನಾವಣೆ’ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಮಸೂದೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಆದಾಗ್ಯೂ, ಲೋಕಸಭೆಯಲ್ಲಿ ಬಹುಮತ ಹೊಂದಿದ್ದ ಎನ್ಡಿಎ ಸರ್ಕಾರ, ಮಸೂದೆ ಪರವಾಗಿ ಹೆಚ್ಚು ಮತಗಳನ್ನು ಪಡೆದುಕೊಂಡಿದೆ.
ಮಂಗಳವಾರ ಮಸೂದೆಯನ್ನು ಮಂಡಿಸಲಾಗಿದೆ. ಮಸೂದೆಗೆ ಒಪ್ಪಿಗೆ ಪಡೆಯಲು ಮತಯಂತ್ರವನ್ನು ಬಳಸಿ ಮತ ಚಲಾವಣೆ ಪ್ರಕ್ರಿಯೆ ನಡೆಸಲಾಗಿದೆ. ಈ ಪೈಕಿ, ಮಸೂದೆ ಪರವಾಗಿ 269 ಮತಗಳು ಹಾಗೂ ಮಸೂದೆ ವಿರುದ್ಧ 198 ಮತಗಳು ಚಲಾವಣೆಯಾಗಿವೆ. ಮತ ಚಲಾವಣೆ ಬಳಿಕ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ.
ಮಸೂದೆಯನ್ನು ವಿರೋಧಿಸಿರುವ ವಿಪಕ್ಷ ನಾಯಕರು, “ಒಂದು ದೇಶ ಒಂದು ಚುನಾವಣೆ ಕಲ್ಪನೆಯು ಸಂವಿಧಾನವನ್ನು ಬುಡಮೇಲು ಮಾಡುತ್ತದೆ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಎಲ್ಲ ರಾಜ್ಯಗಳು ತಮ್ಮದೇ ವೈವಿಧ್ಯತೆ ಹೊಂದಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಒಕ್ಕೂಟ ವ್ಯವಸ್ಥೆ ರಚನೆಯಾಗಿದೆ. ಕೇಂದ್ರ ಮತ್ತು ರಾಜ್ಯದ ಅವಧಿಯನ್ನು ಹೇಗೆ ಏಕ ಕಾಲದಲ್ಲಿ ಮಾಡಲು ಸಾಧ್ಯ? ಭಾರತ ಒಕ್ಕೂಟ ದೇಶ, ಕೇಂದ್ರೀಕರಣ ಮಾಡುವುದು ಸರಿಯಲ್ಲ. ಇದು ಸಂವಿಧಾನ ವಿರೋಧಿ ತಿದ್ದುಪಡಿ” ಎಂದು ಸಂಸದ ಮನೀಶ್ ತಿವಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.