ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಅನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ.
ಈ ಮಸೂದೆಯು ಇ-ಸ್ಪೋರ್ಟ್ಸ್ ಮತ್ತು ಸಾಮಾಜಿಕ ಆಟಗಳನ್ನು ಪ್ರೋತ್ಸಾಹಿಸುವಂತೆಯೇ, ಆನ್‌ಲೈನ್ ಹಣದ ಆಟಗಳನ್ನು ಸಂಪೂರ್ಣ ನಿಷೇಧಿಸುವ ಮೂಲಕ ಉದ್ಯಮಕ್ಕೆ ಕಡಿವಾಣ ಹಾಕಲಿದೆ. ಪ್ರಸ್ತುತ 3.7 ಬಿಲಿಯನ್ ಡಾಲರ್(31 ಸಾವಿರ ಕೋಟಿ ರೂ.) ಮೌಲ್ಯದ ಈ ಕ್ಷೇತ್ರವು 2029ರ ವೇಳೆಗೆ 9.1 ಬಿಲಿಯನ್ ಡಾಲರ್(76 ಸಾವಿರ ಕೋಟಿ) ತಲುಪುವ ನಿರೀಕ್ಷೆಯಲ್ಲಿದ್ದರೂ, ಹಣದ ಆಟಗಳು ಶೇ. 86 ರಷ್ಟು ಆದಾಯಕ್ಕೆ ಕಾರಣವಾಗಿರುವುದರಿಂದ, ಮಸೂದೆಯು ಉದ್ಯಮದ ಅಸ್ತಿತ್ವಕ್ಕೇ ಧಕ್ಕೆಯುಂಟುಮಾಡಬಹುದು.
ಮಸೂದೆಯು ಅಕ್ರಮ ಬೆಟ್ಟಿಂಗ್ ಮತ್ತು ವಂಚನೆಯನ್ನು ತಡೆಯುವ ಉದ್ದೇಶ ಹೊಂದಿದೆ. ಕೌಶಲ್ಯ ಅಥವಾ ಅದೃಷ್ಟ ಆಧಾರಿತ ಎಲ್ಲ ಹಣದ ಆಟಗಳನ್ನು ನಿಷೇಧಿಸುವುದು, ಅವುಗಳ ಜಾಹೀರಾತುಗಳನ್ನು ತಡೆಯುವುದು ಮತ್ತು ಬ್ಯಾಂಕುಗಳು ಸಂಬಂಧಿತ ವಹಿವಾಟುಗಳನ್ನು ನಿರ್ವಹಿಸದಂತೆ ಮಾಡುವುದು ಇದರ ಪ್ರಮುಖ ಅಂಶಗಳು. ಉಲ್ಲಂಘನೆಗೆ 3 ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ. ದಂಡ ಸೇರಿದಂತೆ ಕಠಿಣ ಶಿಕ್ಷೆಗಳಿವೆ. ಮಸೂದೆಯಿಂದ ಡ್ರೀಮ್11, ಗೇಮ್ಸ್24×7, ವಿನ್‌ಝೋ, ಗೇಮ್ಸ್‌ಕ್ರಾಫ್ಟ್, 99ಗೇಮ್ಸ್, ಖೇಲೋಫ್ಯಾಂಟಸಿ ಮತ್ತು ಮೈ11ಸರ್ಕಲ್‌ನಂತಹ ಕಂಪನಿಗಳಿಗೆ ನೇರವಾಗಿ ಪರಿಣಾಮ ಬೀರಲಿದೆ.
ಉದ್ಯಮದ ಮೌಲ್ಯ 2 ಲಕ್ಷ ಕೋಟಿ ರೂ.ಗಳಿಷ್ಟಿದ್ದು, ವಾರ್ಷಿಕ ಆದಾಯ 31,000 ಕೋಟಿ ರೂ. ಮತ್ತು ತೆರಿಗೆ ಸಂಗ್ರಹ 20,000 ಸಾವಿರ ಕೋಟಿ. ಶೇ. 20 ರಷ್ಟು ಸಿಎಜಿಆರ್ ಬೆಳವಣಿಗೆಯೊಂದಿಗೆ 2028ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಲ್ಲಿದ್ದ ಈ ಕ್ಷೇತ್ರಕ್ಕೆ ಈಗ ಸಂಕಷ್ಟದ ದಿನಗಳು ಬರಬಹುದು. ಈ ಮಸೂದೆಯಿಂದ ಯುವಕರು ಮತ್ತು ಕುಟುಂಬಗಳನ್ನು ಆರ್ಥಿಕ, ಮಾನಸಿಕ ಸಂಕಷ್ಟಗಳಿಂದ ರಕ್ಷಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೆಯಾಗಿದೆ.
ಇ-ಸ್ಪೋರ್ಟ್ಸ್ ಪ್ರೋತ್ಸಾಹಕರು ಈ ಮಸೂದೆಯನ್ನು ಸ್ವಾಗತಿಸಿದ್ದಾರೆ. “ಇದು ಇ-ಸ್ಪೋರ್ಟ್ಸ್‌ಗೆ ಐತಿಹಾಸಿಕ ತಿರುವು. ಕೌಶಲ್ಯಾಧಾರಿತ ಆಟಗಳನ್ನು ಬೆಟ್ಟಿಂಗ್‌ನಿಂದ ಬೇರ್ಪಡಿಸುವ ಮೂಲಕ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುತ್ತದೆ” ಎಂದು S8UL ಸಹಸ್ಥಾಪಕ ಅನಿಮೇಶ್ ಅಗರ್‌ವಾಲ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಳೆ ಸಮಸ್ಯೆಯಾಗಿದ್ದು ಯಾಕೆ ಮತ್ತು ಯಾರಿಗೆಲ್ಲ ಅನುಕೂಲ?
ಆದರೆ, ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ (AIGF) ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದೆ. “ನಿಷೇಧವು ಉದ್ಯಮಕ್ಕೆ ಮರಣಶಾಸನ. ನಿಯಂತ್ರಣವೇ ಸರಿಯಾದ ಮಾರ್ಗ; ಇದು ಉದ್ಯೋಗಗಳು, ತೆರಿಗೆಗಳನ್ನು ನಾಶಮಾಡುತ್ತದೆ” ಎಂದು AIGF ಹೇಳಿಕೆಯಲ್ಲಿ ತಿಳಿಸಿದೆ.
ಮಸೂದೆಯು ಆನ್‌ಲೈನ್ ಗೇಮಿಂಗ್ ಪ್ರಾಧಿಕಾರ ಸ್ಥಾಪಿಸಿ, ಆಟಗಳ ವರ್ಗೀಕರಣ, ನೋಂದಣಿ ಮತ್ತು ದೂರು ನಿರ್ವಹಣೆಗೆ ವ್ಯವಸ್ಥೆ ಮಾಡುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತಬ್ಬಲಿ ಅಲೆಮಾರಿಗಳನ್ನು ‘ಶವಪೆಟ್ಟಿಗೆ’ಗೆ ಹಾಕಿದ ಕಾಂಗ್ರೆಸ್ ಸರ್ಕಾರ
ಇ-ಸ್ಪೋರ್ಟ್ಸ್‌ಗೆ ತರಬೇತಿ ಅಕಾಡೆಮಿಗಳು, ಸಂಶೋಧನಾ ಕೇಂದ್ರಗಳು ಮತ್ತು ಪ್ರೋತ್ಸಾಹಧನ ಯೋಜನೆಗಳು ಬರುವಂತೆ ಮಾಡುವ ಮಸೂದೆ, ಸಾಮಾಜಿಕ ಆಟಗಳನ್ನು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳೊಂದಿಗೆ ಬೆಳೆಸುತ್ತದೆ. ಹಣದ ಆಟಗಳ ನಿಷೇಧದಿಂದ ವ್ಯಸನ, ಆರ್ಥಿಕ ನಷ್ಟ ಮತ್ತು ಆತ್ಮಹತ್ಯೆಗಳನ್ನು ತಡೆಯಬಹುದು ಎಂದು ನಂಬಲಾಗಿದೆ.
ಆನ್ ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ರ ಪ್ರಮುಖ ನಿಬಂಧನೆಗಳು
- ಇ-ಸ್ಪೋರ್ಟ್ಸ್‌ನ ಪ್ರೋತ್ಸಾಹ ಮತ್ತು ಮಾನ್ಯತೆ
• ಭಾರತದಲ್ಲಿ ಇ-ಸ್ಪೋರ್ಟ್ಸ್ ಅನ್ನು ಅಧಿಕೃತ ಸ್ಪರ್ಧಾತ್ಮಕ ಕ್ರೀಡೆಯಾಗಿ ಗುರುತಿಸುವುದು.
• ಇ-ಸ್ಪೋರ್ಟ್ಸ್ ಕಾರ್ಯಕ್ರಮಗಳನ್ನು ಆಯೋಜಿಸಲು ಬೇಕಾದ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು ಕ್ರೀಡಾ ಸಚಿವಾಲಯದಿಂದ ರೂಪಿಸುವುದು.
• ಇ-ಸ್ಪೋರ್ಟ್ಸ್‌ನ ಪ್ರಗತಿಗಾಗಿ ತರಬೇತಿ ಅಕಾಡೆಮಿಗಳು, ಸಂಶೋಧನಾ ಕೇಂದ್ರಗಳು ಮತ್ತು ತಂತ್ರಜ್ಞಾನ ವೇದಿಕೆಗಳನ್ನು ಸ್ಥಾಪಿಸುವುದು.
• ಪ್ರೋತ್ಸಾಹಧನ ಯೋಜನೆಗಳು, ಜಾಗೃತಿ ಅಭಿಯಾನಗಳನ್ನು ನಡೆಸುವುದು ಹಾಗೂ ವ್ಯಾಪಕವಾದ ಕ್ರೀಡಾ ನೀತಿ ಉಪಕ್ರಮಗಳಲ್ಲಿ ಇ-ಸ್ಪೋರ್ಟ್ಸ್ ಅನ್ನು ಸಂಯೋಜಿಸುವುದು.
- ಸಾಮಾಜಿಕ ಮತ್ತು ಶೈಕ್ಷಣಿಕ ಆಟಗಳ ಪ್ರಚಾರ
• ಆನ್‌ಲೈನ್ ಸಾಮಾಜಿಕ ಆಟಗಳಿಗೆ ಮಾನ್ಯತೆ ನೀಡುವುದು, ಅವುಗಳನ್ನು ವರ್ಗೀಕರಿಸುವುದು ಮತ್ತು ನೋಂದಾಯಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವುದು.
• ಸುರಕ್ಷಿತ, ವಯೋಮಾನಕ್ಕೆ ಸೂಕ್ತವಾದ ಸಾಮಾಜಿಕ ಮತ್ತು ಶೈಕ್ಷಣಿಕ ಆಟಗಳ ಅಭಿವೃದ್ಧಿ ಹಾಗೂ ವಿತರಣೆಗಾಗಿ ವೇದಿಕೆಗಳಿಗೆ ಅನುಕೂಲ ಕಲ್ಪಿಸುವುದು.
• ಮನರಂಜನೆ, ಕೌಶಲ್ಯ-ಅಭಿವೃದ್ಧಿ ಮತ್ತು ಡಿಜಿಟಲ್ ಸಾಕ್ಷರತೆಯಲ್ಲಿ ಸಾಮಾಜಿಕ ಆಟಗಳ ಸಕಾರಾತ್ಮಕ ಪಾತ್ರದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದು.
• ಭಾರತೀಯ ಮೌಲ್ಯಗಳಿಗೆ ಅನುಗುಣವಾದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಗೇಮಿಂಗ್ ವಿಷಯಗಳಿಗೆ ಬೆಂಬಲ ನೀಡುವುದು.
- ಹಾನಿಕಾರಕ ಆನ್‌ಲೈನ್ ಮನಿ ಗೇಮ್ ಗಳ ನಿಷೇಧ
• ಆಟಗಳು ಕೌಶಲ್ಯ, ಅದೃಷ್ಟ, ಅಥವಾ ಎರಡನ್ನೂ ಆಧರಿಸಿದೆಯೇ ಎಂಬುದನ್ನು ಪರಿಗಣಿಸದೆ, ಆನ್‌ಲೈನ್ ಹಣದ ಆಟಗಳನ್ನು ನೀಡುವುದು, ನಿರ್ವಹಿಸುವುದು ಅಥವಾ ಅದಕ್ಕೆ ಅನುವು ಮಾಡಿಕೊಡುವುದರ ಮೇಲೆ ಸಂಪೂರ್ಣ ನಿಷೇಧ.
• ಎಲ್ಲ ಮಾಧ್ಯಮ ಪ್ರಕಾರಗಳಲ್ಲಿ ಮನಿ ಗೇಮ್‌ಗಳ ಜಾಹೀರಾತು ಮತ್ತು ಪ್ರಚಾರದ ಮೇಲೆ ನಿಷೇಧ.
• ಆನ್ ಲೈನ್ ಮನಿ ಗೇಮ್‌ಗಳಿಗೆ ಸಂಬಂಧಿಸಿದ ಹಣಕಾಸು ವಹಿವಾಟುಗಳ ಮೇಲೆ ನಿಷೇಧ; ಅಂತಹ ಪಾವತಿಗಳನ್ನು ಪ್ರಕ್ರಿಯೆಗೊಳಿಸದಂತೆ ಬ್ಯಾಂಕುಗಳು ಮತ್ತು ಪಾವತಿ ವ್ಯವಸ್ಥೆಗಳ ಮೇಲೆ ನಿರ್ಬಂಧ.
• ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ರ ಅಡಿಯಲ್ಲಿ ಕಾನೂನುಬಾಹಿರ ಗೇಮಿಂಗ್ ವೇದಿಕೆಗಳ ಪ್ರವೇಶವನ್ನು ತಡೆಯಲು ಅಧಿಕಾರ ನೀಡುವುದು.
- ಆನ್ ಲೈನ್ ಗೇಮಿಂಗ್ ಪ್ರಾಧಿಕಾರದ ಸ್ಥಾಪನೆ
• ಮೇಲ್ವಿಚಾರಣೆಗಾಗಿ ರಾಷ್ಟ್ರಮಟ್ಟದ ಪ್ರಾಧಿಕಾರವನ್ನು ಸ್ಥಾಪಿಸಲು ಅಥವಾ ಅಸ್ತಿತ್ವದಲ್ಲಿರುವ ಯಾವುದೇ ಪ್ರಾಧಿಕಾರ ಅಥವಾ ಸಂಸ್ಥೆಯನ್ನು ನೇಮಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ.
• ಕಾರ್ಯಗಳು:
o ಆನ್ ಲೈನ್ ಆಟಗಳ ವರ್ಗೀಕರಣ ಮತ್ತು ನೋಂದಣಿ.
o ಒಂದು ಆಟವು ‘ಮನಿ ಗೇಮ್’ ಎಂದು ಅರ್ಹತೆ ಪಡೆಯುತ್ತದೆಯೇ ಎಂದು ನಿರ್ಧರಿಸುವುದು.
o ಆನ್ ಲೈನ್ ಆಟಗಳಿಗೆ ಸಂಬಂಧಿಸಿದ ದೂರುಗಳು ಮತ್ತು ಕುಂದುಕೊರತೆಗಳನ್ನು ನಿರ್ವಹಿಸುವುದು.
• ನಿಯಮಗಳ ಅನುಸರಣೆಯನ್ನು ಖಚಿತಪಡಿಸಲು ಮಾರ್ಗಸೂಚಿಗಳು, ಆದೇಶಗಳು ಮತ್ತು ನಡವಳಿಕೆ ಸಂಹಿತೆಗಳನ್ನು ಹೊರಡಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ.
- ಅಪರಾಧಗಳು ಮತ್ತು ದಂಡನೆಗಳು
• ಆನ್ ಲೈನ್ ಮನಿ ಗೇಮಿಂಗ್ ಗೆ ಅವಕಾಶ ನೀಡುವುದು ಅಥವಾ ಅದಕ್ಕೆ ಅನುವು ಮಾಡಿಕೊಡುವುದು: 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ 1 ಕೋಟಿ ರೂವರೆಗೆ ದಂಡ.
• ಮನಿ ಗೇಮ್‌ಗಳ ಜಾಹೀರಾತು: 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ ₹50 ಲಕ್ಷದವರೆಗೆ ದಂಡ.
• ಮನಿ ಗೇಮ್ ಗಳಿಗೆ ಸಂಬಂಧಿಸಿದ ಹಣಕಾಸು ವಹಿವಾಟುಗಳು: 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು/ಅಥವಾ ₹1 ಕೋಟಿಯವರೆಗೆ ದಂಡ.
• ಅಪರಾಧದ ಪುನರಾವರ್ತನೆಗೆ ಕಠಿಣ ದಂಡನೆ ವಿಧಿಸಲಾಗುವುದು. ಇದರಲ್ಲಿ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ₹2 ಕೋಟಿಯವರೆಗೆ ದಂಡ ಸೇರಿದೆ.
• ಪ್ರಮುಖ ಕಲಮುಗಳ ಅಡಿಯಲ್ಲಿ ಬರುವ ಅಪರಾಧಗಳು ವಾರಂಟ್ ಇಲ್ಲದೆ ಬಂಧಿಸಬಹುದಾದ ಮತ್ತು ಜಾಮೀನು ರಹಿತ ಅಪರಾಧಗಳಾಗಿರುತ್ತವೆ
- ಕಾರ್ಪೊರೇಟ್ ಮತ್ತು ಸಾಂಸ್ಥಿಕ ಹೊಣೆಗಾರಿಕೆ
• ತಾವು ‘ಸೂಕ್ತ ಜಾಗರೂಕತೆ’ ವಹಿಸಿದ್ದೇವೆ ಎಂದು ಸಾಬೀತುಪಡಿಸದ ಹೊರತು, ಈ ಕಾಯ್ದೆಯ ಅಡಿಯಲ್ಲಿ ಬರುವ ಅಪರಾಧಗಳಿಗೆ ಕಂಪನಿಗಳು ಮತ್ತು ಅವುಗಳ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು.
• ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಭಾಗಿಯಾಗಿರದ ಸ್ವತಂತ್ರ ನಿರ್ದೇಶಕರು ಅಥವಾ ಕಾರ್ಯನಿರ್ವಾಹಕೇತರ ನಿರ್ದೇಶಕರಿಗೆ ರಕ್ಷಣೆ ನೀಡಲಾಗಿದೆ
- ತನಿಖೆ ಮತ್ತು ಜಾರಿಗೊಳಿಸುವ ಅಧಿಕಾರಗಳು
• ಅಪರಾಧಗಳಿಗೆ ಸಂಬಂಧಿಸಿದ ಡಿಜಿಟಲ್ ಅಥವಾ ಭೌತಿಕ ಆಸ್ತಿಯನ್ನು ತನಿಖೆ ಮಾಡಲು, ಶೋಧಿಸಲು ಮತ್ತು ವಶಪಡಿಸಿಕೊಳ್ಳಲು ಅಧಿಕಾರಿಗಳಿಗೆ ಅಧಿಕಾರ ನೀಡುವ ಹಕ್ಕು ಕೇಂದ್ರ ಸರ್ಕಾರಕ್ಕೆ ಇರುತ್ತದೆ.
• ಕೆಲವು ಶಂಕಿತ ಅಪರಾಧ ಪ್ರಕರಣಗಳಲ್ಲಿ, ಅಧಿಕಾರಿಗಳು ವಾರಂಟ್ ಇಲ್ಲದೆ ಸ್ಥಳ ಪ್ರವೇಶಿಸಲು, ಶೋಧ ನಡೆಸಲು ಮತ್ತು ಬಂಧಿಸಲು ಅಧಿಕಾರ ಹೊಂದಿರುತ್ತಾರೆ.
• ಈ ಕಾಯ್ದೆಯ ಅಡಿಯಲ್ಲಿ ನಡೆಯುವ ತನಿಖೆಗಳಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ನಿಬಂಧನೆಗಳು ಅನ್ವಯವಾಗುತ್ತವೆ.
- ನಿಯಮ-ರಚನಾ ಅಧಿಕಾರಗಳು ಮತ್ತು ನಿಯೋಜಿತ ಶಾಸನ
• ಈ ಕೆಳಗಿನ ವಿಷಯಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ:
o ಇ-ಸ್ಪೋರ್ಟ್ಸ್ ಮತ್ತು ಸಾಮಾಜಿಕ ಗೇಮಿಂಗ್ ಗಳ ಪ್ರೋತ್ಸಾಹ.
o ಆನ್ ಲೈನ್ ಆಟಗಳ ಮಾನ್ಯತೆ, ವರ್ಗೀಕರಣ ಮತ್ತು ನೋಂದಣಿ.
o ಪ್ರಾಧಿಕಾರದ ಅಧಿಕಾರಗಳು ಮತ್ತು ಕಾರ್ಯನಿರ್ವಹಣೆ.
o ಈ ಕಾಯ್ದೆಯ ಅಡಿಯಲ್ಲಿ ಸೂಚಿಸಲು ಅಗತ್ಯವಿರುವ ಅಥವಾ ಅನುಮತಿಸಲಾದ ಯಾವುದೇ ಇತರ ವಿಷಯ.
ಮಸೂದೆಯ ಸಕಾರಾತ್ಮಕ ಪರಿಣಾಮಗಳು
• ಸೃಜನಾತ್ಮಕ ಆರ್ಥಿಕತೆಗೆ ಉತ್ತೇಜನ: ಜಾಗತಿಕ ಗೇಮಿಂಗ್ ರಫ್ತು, ಉದ್ಯೋಗ ಸೃಷ್ಟಿ ಮತ್ತು ನಾವೀನ್ಯತೆಯಲ್ಲಿ ಭಾರತದ ಪಾತ್ರವನ್ನು ಹೆಚ್ಚಿಸುತ್ತದೆ.
• ಯುವ ಸಬಲೀಕರಣ: ಇ-ಸ್ಪೋರ್ಟ್ಸ್ ಮತ್ತು ಕೌಶಲ್ಯಾಧಾರಿತ ಡಿಜಿಟಲ್ ಆಟಗಳ ಮೂಲಕ ರಚನಾತ್ಮಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ.
• ಸುರಕ್ಷಿತ ಡಿಜಿಟಲ್ ಪರಿಸರ: ಶೋಷಕ ಆನ್‌ಲೈನ್ ಮನಿ ಗೇಮಿಂಗ್ ಪದ್ಧತಿಗಳಿಂದ ಕುಟುಂಬಗಳಿಗೆ ರಕ್ಷಣೆ ನೀಡುತ್ತದೆ.
• ಜಾಗತಿಕ ನಾಯಕತ್ವ: ಜವಾಬ್ದಾರಿಯುತ ಗೇಮಿಂಗ್ ನಾವೀನ್ಯತೆ ಮತ್ತು ಡಿಜಿಟಲ್ ನೀತಿ-ರಚನೆಯಲ್ಲಿ ಭಾರತವನ್ನು ನಾಯಕನನ್ನಾಗಿ ಇರಿಸುತ್ತದೆ.
ಆನ್ ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಒಂದು ಸಮತೋಲಿತ ಮಾರ್ಗವನ್ನು ಅನುಸರಿಸುತ್ತದೆ. ಸುರಕ್ಷಿತ ಮತ್ತು ಸಕಾರಾತ್ಮಕ ಆನ್ ಲೈನ್ ಗೇಮಿಂಗ್ ಮೂಲಕ ನಾವೀನ್ಯತೆ ಹಾಗೂ ಯುವಕರ ಭಾಗವಹಿಸುವಿಕೆಯನ್ನು ಇದು ಪ್ರೋತ್ಸಾಹಿಸುತ್ತದೆ, ಅದೇ ಸಮಯದಲ್ಲಿ ಹಾನಿಕಾರಕ ಆನ್ ಲೈನ್ ಹಣದ ಆಟಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
ಇದು ಸುರಕ್ಷಿತ, ಭದ್ರ ಮತ್ತು ನಾವೀನ್ಯತೆ-ಚಾಲಿತ ಡಿಜಿಟಲ್ ಭಾರತದ ಕಡೆಗೆ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಇದು ಸೃಜನಶೀಲತೆಯನ್ನು ಹೆಚ್ಚಿಸುವುದು, ನಾಗರಿಕರನ್ನು ರಕ್ಷಿಸುವುದು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವುದನ್ನು ಗುರಿಯಾಗಿಸಿಕೊಂಡಿದೆ.