ಮೇ 7 ರಂದು ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಪುಲ್ವಾಮಾ ದಾಳಿಕೋರರು ಸೇರಿದಂತೆ 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಏರ್ ಮಾರ್ಷಲ್ ಎ ಕೆ ಭಾರ್ತಿ ಮಾಹಿತಿ ನೀಡಿದರು.
ಭಾನುವಾರ ಸಂಜೆ ನಡೆದ ರಕ್ಷಣಾ ಪಡೆಗಳ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಖಚಿತ ಮಾಹಿತಿ ಮೇರೆಗೆ ಉಗ್ರರ ನೆಲೆಗಳನ್ನು ಧ್ವಂಸ ಮಾಡಿದ್ದೇವೆ. ನಮ್ಮ ಗುರಿ ಕೇವಲ ಉಗ್ರರ ಅಡುಗುತಾಣವಾಗಿತ್ತು” ಎಂದು ತಿಳಿಸಿದರು.
“ಮೇ 7ರ ರಾತ್ರಿ ನಡೆದ ಆಪರೇಷನ್ ಸಿಂಧೂರ ಪಾಕಿಸ್ತಾನಕ್ಕೆ ಸಂಪೂರ್ಣ ಅಚ್ಚರಿಯಾಗಿತ್ತು. ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ಇದರಲ್ಲಿ ಐಸಿ -814 ಅಪಹರಣ ಮತ್ತು ಪುಲ್ವಾಮಾ ಸ್ಫೋಟದಲ್ಲಿ ಭಾಗಿಯಾಗಿದ್ದ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸೀರ್ ಅಹ್ಮದ್ ಅವರಂತಹ ಪ್ರಮುಖ ಉಗ್ರರಿದ್ದರು. ಭಾರತದಲ್ಲಿ ನಡೆದ ಇತರ ಮಾರಕ ಭಯೋತ್ಪಾದಕ ಘಟನೆಗಳಲ್ಲಿ ಇವರು ಭಾಗಿಯಾಗಿದ್ದರು” ಎಂದುಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಹೇಳಿದರು.
“ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತೀಯ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಪಾಕಿಸ್ತಾನ 35-40 ಸಿಬ್ಬಂದಿಯನ್ನು ಕಳೆದುಕೊಂಡಿತು. ಕೆಲವು ವಾಯುನೆಲೆಗಳು ಮತ್ತು ಡಂಪ್‌ಗಳ ಮೇಲೆ ಪದೇ ಪದೇ ದಾಳಿ ನಡೆಸಲಾಯಿತು. ಅವೆಲ್ಲವನ್ನೂ ವಿಫಲಗೊಳಿಸಲಾಯಿತು. ಮೇ 7 ಮತ್ತು 10 ರ ನಡುವೆ ನಿಯಂತ್ರಣ ರೇಖೆಯಲ್ಲಿ ಫಿರಂಗಿ ಮತ್ತು ಸಣ್ಣ ಶಸ್ತ್ರಾಸ್ತ್ರಗಳ ಗುಂಡಿನ ದಾಳಿಯಲ್ಲಿ ಪಾಕಿಸ್ತಾನ ಸೇನೆಯು ಸುಮಾರು 35 ರಿಂದ 40 ಸಿಬ್ಬಂದಿಯನ್ನು ಕಳೆದುಕೊಂಡಿದೆ” ಎಂದು ವರದಿಯಾಗಿದೆ ಎಂದು ತಿಳಿಸಿದರು.
ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (DGMO) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನೌಕಾಪಡೆ, ವಾಯುಪಡೆ ಅಧಿಕಾರಿಗಳು ಉಪಸ್ಥಿತರಿದ್ದಾರೆ.