ಪಾಕಿಸ್ತಾನವು ತನ್ನನ್ನು ತಾನು ಸಂತ್ರಸ್ತ ರಾಷ್ಟ್ರವೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದೆ. ಅದಕ್ಕಾಗಿ, ತನ್ನದೇ ಆದ ನಿರೂಪಣೆಗಳನ್ನು ರೂಪಿಸುತ್ತಿದೆ. ಆದರೆ, ಭಯೋತ್ಪಾದನೆಯನ್ನು ಪಾಕಿಸ್ತಾನವೇ ಸಾಕುತ್ತಿದೆ. ಭಾರತದ ನಾಗರಿಕರ ಮೇಲೆ ದಾಳಿ ನಡೆಸಿ, ಕ್ರೌರ್ಯ ಮೆರೆಯುತ್ತಿದೆ ಎಂಬುದನ್ನು ನಿಯೋಗ ಮಿತ್ರ ರಾಷ್ಟ್ರಗಳಿಗೆ ತಿಳಿಸಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ವಿರಾಮ ಬಿದ್ದಿದೆ. ಉಭಯ ರಾಷ್ಟ್ರಗಳು ಕದನ ವಿರಾಮಕ್ಕೆ ತಲೆ ಬಾಗಿವೆ. ಭಾರತವು ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಆಪರೇಷನ್ ಸಿಂಧೂರ ವಿಚಾರವಾಗಿ ವಿದೇಶಗಳಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಮತ್ತು ಮನವರಿಕೆ ಮಾಡಿಕೊಡಲು 7 ಸರ್ವಪಕ್ಷ ನಿಯೋಗಗಳನ್ನು ಕಳಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ʼʼಪಾಕಿಸ್ತಾನದ ನೆರವಿನೊಂದಿಗೆ ಹುಟ್ಟಿಕೊಂಡಿರುವ ಗಡಿಯಾಚೆಯ ಭಯೋತ್ಪಾದನೆ ಮತ್ತು ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ನಮ್ಮ ನಿಲುವನ್ನು ಮಿತ್ರ ರಾಷ್ಟ್ರಗಳಿಗೆ ತಿಳಿಸುವ ಅಗತ್ಯವಿದೆ. ಭಾರತ ಸರ್ಕಾರದ ರಾಜತಾಂತ್ರಿಕ ಸಂಪರ್ಕದ ಭಾಗವಾಗಿ ಮಿತ್ರ ರಾಷ್ಟ್ರಗಳ ರಾಜತಾಂತ್ರಿಕರನ್ನು ಭೇಟಿ ಮಾಡಲು ಏಳು ನಿಯೋಗಗಳು ವಿದೇಶಗಳಿಗೆ ತೆರಳಿವೆʼʼ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಪಾಕಿಸ್ತಾನದಿಂದ ಹುಟ್ಟಿಕೊಂಡ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎತ್ತಿ ತೋರಿಸುವುದು ನಿಯೋಗಗಳ ಪ್ರಾಥಮಿಕ ಉದ್ದೇಶವಾಗಿದೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಗಡಿಯಾಚೆಗಿನ ಭಯೋತ್ಪಾದನೆಯೇ ಪ್ರಮುಖ ಕಾರಣ ಮತ್ತು ಪ್ರಚೋದನಾಕಾರಿ ಅಂಶವೆಂದು ಭಾರತ ಹೇಳುತ್ತಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಕುರಿತು ಈ ಹಿಂದೆ ಮಾತನಾಡಿದ್ದ ಮಿಶ್ರಿ, ʼʼಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಯ ನೆಲೆಯ ಮೇಲೆ ಭಾರತ ದಾಳಿ ನಡೆಸಿದೆ. ಈ ದಾಳಿಯು ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರ ಡೇನಿಯಲ್ ಪರ್ಲ್ ಹತ್ಯೆಗೆ ಪ್ರತಿರೋಧವಾಗಿ ನಡೆದದ್ದಾಗಿದೆʼʼ ಎಂದು ಹೇಳಿದ್ದರು.
ಪಾಕಿಸ್ತಾನವನ್ನು ಭಯೋತ್ಪಾದನೆಯ ‘ಕೇಂದ್ರಬಿಂದು’ ಎಂದು ಭಾರತವು ನಿರಂತರವಾಗಿ ಬಣ್ಣಿಸುತ್ತಿದೆ. ಆದರೂ, ಇದನ್ನು ಇತರ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಿಲ್ಲ. ತನ್ನ ಧೋರಣೆಗಳಲ್ಲಿ ಇದನ್ನು ಅಳವಡಿಸಿಕೊಂಡಿಲ್ಲ. ‘ಭಯೋತ್ಪಾದನೆಯ ಕೇಂದ್ರ’ ಎಂಬ ಪದದನ್ನು ಹಲವು ದೇಶಗಳು ತಮ್ಮದೇ ಆದ ಕಾರ್ಯತಂತ್ರದ ಭಾಗವಾಗಿ ಬಳಸಿಕೊಳ್ಳುತ್ತಿವೆ. ಉದಾಹರಣೆಗೆ, ಅಮೆರಿಕವು ಇರಾನ್ ಅನ್ನು ಭಯೋತ್ಪಾದನೆಯ ಕೇಂದ್ರವೆಂದು ಕರೆಯುತ್ತಿದೆ.
ಗಡಿಯಾಚೆಗಿನ ಭಯೋತ್ಪಾದಕ ದಾಳಿಯ ಬೆದರಿಕೆಗಳನ್ನು ಎದುರಿಸಲು ‘ಆಪರೇಷನ್ ಸಿಂಧೂರ’ ಮುಂದುವರೆಯುತ್ತದೆ ಎಂದು ಭಾರತ ಸರ್ಕಾರವು ಸಾರ್ವಜನಿಕವಾಗಿ ಹೇಳುತ್ತಿದೆ. ಇದನ್ನೇ ವಿದೇಶಗಳಿಗೂ ತಿಳಿಸಲು ಭಾರತ ಮುಂದಾಗಿದೆ.
ಮಂಗಳವಾರ ನಡೆದ ಬ್ರೀಫಿಂಗ್‌ನಲ್ಲಿ ಸಂಸದರು ವಿವರಿಸಿದಂತೆ; ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದನೆ ಮತ್ತು ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ನೀಡಿದ ಬೆಂಬಲಗಳ ಕುರಿತು ವಿದೇಶಗಳಲ್ಲಿ ನಿಯೋಗಗಳು ಮಾತನಾಡಲಿವೆ.
ಜೊತೆಗೆ, ಭಾರತವು ಆಪರೇಷನ್ ಸಿಂಧೂರ ಅಡಿಯಲ್ಲಿ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿದೆಯೇ ಹೊರತು, ನಾಗರಿಕರು ಅಥವಾ ಮಿಲಿಟರಿ ನೆಲೆಗಳ ಮೇಲೆ ಯಾವುದೇ ದಾಳಿ ನಡೆಸಿಲ್ಲವೆಂದು ವಿದೇಶಿ ರಾಜತಾಂತ್ರಿಕರಿಗೆ ನಿಯೋಗದಲ್ಲಿನ ಸಂಸದರು ಮಾಹಿತಿ ನೀಡಲಿದ್ದಾರೆ.
ಅಲ್ಲದೆ, ಭಯೋತ್ಪಾದಕ ನೆಲೆಗಳ ಮೇಲೆ ಮಾತ್ರವೇ ಭಾರತ ದಾಳಿ ಮಾಡಿದ್ದರ ಹೊರತಾಗಿಯೂ, ಪಾಕಿಸ್ತಾನವು ಭಾರತದ ಮೇಲೆ ಪ್ರತಿದಾಳಿ ಮಾಡಿದೆ. ಅಲ್ಲದೆ, ಗಡಿ ಭಾಗದಲ್ಲಿ ನಾಗರಿಕರನ್ನು ಕೊಂದಿದೆ ಎಂದು ವಿವರಿಸಲಿದ್ದಾರೆ.
ಪಾಕಿಸ್ತಾನವು ತನ್ನನ್ನು ತಾನು ಸಂತ್ರಸ್ತ ರಾಷ್ಟ್ರವೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದೆ. ಅದಕ್ಕಾಗಿ, ತನ್ನದೇ ಆದ ನಿರೂಪಣೆಗಳನ್ನು ರೂಪಿಸುತ್ತಿದೆ. ಆದರೆ, ಭಯೋತ್ಪಾದನೆಯನ್ನು ಪಾಕಿಸ್ತಾನವೇ ಸಾಕುತ್ತಿದೆ. ಭಾರತದ ನಾಗರಿಕರ ಮೇಲೆ ದಾಳಿ ನಡೆಸಿ, ಕ್ರೌರ್ಯ ಮೆರೆಯುತ್ತಿದೆ ಎಂಬುದನ್ನು ನಿಯೋಗ ಮಿತ್ರ ರಾಷ್ಟ್ರಗಳಿಗೆ ತಿಳಿಸಲಿದೆ.
ನಿಯೋಗಗಳು ವಿದೇಶಿ ರಾಜತಾಂತ್ರಿಕರನ್ನು ಭೇಟಿ ಮಾಡಿ ಮಾತನಾಡುವುದಲ್ಲದೆ, ಅಲ್ಲಿನ ಶೈಕ್ಷಣಿಕ ಸಂಸ್ಥೆಗಳು, ಚಿಂತಕರ ಚಾವಡಿಗಳು, ಮಾಧ್ಯಮಗಳು ಹಾಗೂ ನಾಗರಿಕ ಸಮಾಜದೊಂದಿಗೂ ಚರ್ಚೆ ನಡೆಸಲು ಸಾಧ್ಯತೆಗಳಿವೆ. ಈ ವೇಳೆ, ಭಯೋತ್ಪಾದನೆ ಬಗ್ಗೆ ಭಾರತದ ಕಳವಳಗಳನ್ನು ತಿಳಿಸಲು ಯೋಜಿಸಿವೆ ಎಂದು ವರದಿಯಾಗಿದೆ.
ಪಾಕಿಸ್ತಾನಕ್ಕಿಂತ ಭಿನ್ನವಾಗಿ ಭಾರತವು ಉತ್ತಮ ಪ್ರಜಾಪ್ರಭುತ್ವವನ್ನು ಹೊಂದಿದೆ. ಆದರೆ, ಪಾಕಿಸ್ತಾನವು ದೀರ್ಘಕಾಲದಿಂದ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುತ್ತಿದೆ ಎಂಬುದನ್ನೂ ತಿಳಿಸಲಾಗುವುದು ಎಂದು ಮಿಶ್ರಿ ಹೇಳಿದ್ದಾರೆ.
ಆದಾಗ್ಯೂ, ಸಿಂಧು ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಸದಂತೆ ತಡೆಯಲು ಭಾರತ ನಿರ್ಧರಿಸಿದೆ. ‘ಸಿಂಧು ಜಲ ಒಪ್ಪಂದ’ವನ್ನು ಭಾರತದ ಸ್ಥಗಿತಗೊಳಿಸಿದೆ. ಆದರೆ, ಒಪ್ಪಂದವನ್ನು ಏಕಪಕ್ಷೀಯವಾಗಿ ಸ್ಥಗಿತಗೊಳಿಸುವ ಅಥವಾ ಒಪ್ಪಂದದ ನಿಬಂದನೆಗಳನ್ನು ಉಲ್ಲಂಘಿಸಲು ಅವಕಾಶವಿಲ್ಲ. ಹೀಗಾಗಿ, ನೀರಿನ ವಿಚಾರದಲ್ಲಿ ವಿದೇಶಿ ಮಧ್ಯಸ್ಥಿಕೆಗೆ ಪಾಕಿಸ್ತಾನ ಕರೆಕೊಡುತ್ತಿದೆ. ಇದು ಕೆಲ ರಾಷ್ಟ್ರಗಳು ಪಾಕಿಸ್ತಾನಕ್ಕೆ ನೀರು ಹರಿಸುವಂತೆ ಒತ್ತಡ ಹೇರಬಹುದಾದ ಸಾಧ್ಯತೆಗಳಿವೆ. ಆದರೂ, ಭಾರತದ ನಿರ್ಧಾರದ ಬಗ್ಗೆ ಮಿತ್ರ ರಾಷ್ಟ್ರಗಳಿವೆ ವಿವರವಾಗಿ ತಿಳಿಸುವಂತೆ ತರಬೇತಿ ನೀಡಲಾಗಿದೆ ಎಂದು ವರದಿಯಾಗಿದೆ.
ಏಳು ಸರ್ವಪಕ್ಷ ನಿಯೋಗಗಳ ಭೇಟಿಗಾಗಿ ಆಯ್ಕೆ ಮಾಡಲಾದ ರಾಷ್ಟ್ರಗಳ ಪೈಕಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ದೇಶಗಳು, G7 ರಾಷ್ಟ್ರಗಳು, G20 ದೇಶಗಳು ಒಳಗೊಂಡಿವೆ.