ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳ ಮೇಲೆ ಭಾರತ ಸೇನೆಯು ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಕುರಿತು ಬುಧವಾರ ಸುದ್ದಿಗೋಷ್ಟಿಯಲ್ಲಿ ವಿವರಿಸಿದವರಲ್ಲಿ ಕರ್ನಲ್ ಸೋಫಿಯಾ ಖುರೇಶಿ ಕೂಡ ಒಬ್ಬರು. ಹೆಮ್ಮೆಯ ಸಂಗತಿ ಎಂದರೆ, ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಸೊಸೆ.
ಸೋಫಿಯಾ ಅವರ ಪತಿ ತಾಜುದ್ದೀನ್ ಬಾಗೇವಾಡಿ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದವರು ಅವರು ತಿಳಿದುಬಂದಿದೆ. ಸೋಫಿಯಾ ಮತ್ತು ತಾಜುದ್ದೀನ್ ಇಬ್ಬರೂ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಸೋಫಿಯಾ ಅವರು ಮೂಲತಃ ಗುಜರಾತ್ ರಾಜ್ಯದ ಬರೋಡಾದವರು. ಸೋಫಿಯಾ ಮತ್ತು ತಾಜುದ್ದೀನ್ ಪರಿಸ್ಪರ ಪ್ರೀತಿಸಿ, 2015ರಲ್ಲಿ ವಿವಾಹವಾಗಿದ್ದಾರೆ.
ಸೋಫಿಯಾ ಅವರು ಭಾರತೀಯ ಸೇನಾ ತರಬೇತಿ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಕಾರ್ಪ್ಸ್ ಆಫ್ ಸಿಗ್ನಲ್ಸ್‌ನ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಅವರು 2016ರಲ್ಲಿ ಈ ಇತಿಹಾಸವನ್ನು ಬರೆದಿದ್ದಾರೆ. ಏಷ್ಯನ್ ಪ್ಲಸ್ ಬಹುರಾಷ್ಟ್ರೀಯ ಕ್ಷೇತ್ರ ತರಬೇತಿಯಲ್ಲಿ ಭಾಗಿಯಾದ ಮಹಿಳಾ ಅಧಿಕಾರಿ ಖುರೇಷಿ. ಈ ತರಬೇತಿಯಲ್ಲಿ ವಿವಿಧ ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಆದರೆ ಏಕೈಕ ಮಹಿಳಾ ಕಮಾಂಡರ್ ಖುರೇಷಿ ಆಗಿದ್ದರು. ಆಗ ಅವರ ವಯಸ್ಸು 35 ಆಗಿತ್ತು. ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ತರಬೇತಿ ಮಾಹಿತಿಗಳನ್ನು ಒದಗಿಸುವಲ್ಲಿ ಅವರ ಪಾತ್ರ ಮಹತ್ತರ. ಕರ್ನಲ್ ಸೋಫಿಯಾ ಖುರೇಷಿ ಹಲವು ವರ್ಷಗಳ ಕಾಲ ಸೇನೆಯಲ್ಲಿ ತರಬೇತಿ ಅನುಭವ ಹೊಂದಿದ್ದಾರೆ.
ಪಹಲ್ಗಾಮ್ ದಾಳಿ ನಡೆಸಿದ ಭಯೋತ್ಪಾದಕರು ಧರ್ಮವನ್ನು ಕೇಳಿ ಪತ್ನಿ, ಮಕ್ಕಳ ಎದುರೇ ಪುರುಷರನ್ನು ಕೊಂದಿದ್ದಾರೆ. ಈ ದಾಳಿಯ ಬಳಿಕ ನವವಿಹಾಹಿತೆ ಸೇರಿ 25 ಮಹಿಳೆಯರು ವಿಧವೆಯರಾಗಿದ್ದಾರೆ. ಈ ಮಹಿಳೆಯರ ಸಿಂಧೂರವನ್ನು ಅಳಿಸಲಾಗಿದೆ ಎಂಬ ಬಿಂಬವಾಗಿ ಈ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಗಿದೆ.