ಅಧಿಕ ಮಳೆಯಿಂದಾಗಿ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ ಒಂದರ ಛಾವಣಿ ಕುಸಿದು ಒಬ್ಬರು ಮೃತಪಟ್ಟು, 5 ಮಂದಿ ಗಾಯಗೊಂಡಿರುವ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಚ್ಚು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮಾರ್ಚ್‌ನಲ್ಲಿ ಟರ್ಮಿನಲ್ 1 ಅನ್ನು ವಿಸ್ತರಿಸುವ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಳೆದ 10 ವರ್ಷಗಳಲ್ಲಿ ಕಳಪೆ ಮೂಲ ಸೌಕರ್ಯದಿಂದಾಗಿ ಮೋದಿ ಸರ್ಕಾರದ ಕಾಮಗಾರಿಗಳು ಇಸ್ಪೀಟ್ ಎಲೆಗಳಂತೆ ಕಳೆಗೆ ಬೀಳುತ್ತಿವೆ. ಭ್ರಷ್ಟಾಚಾರ ಹಾಗೂ ಅಪರಾಧಿ ಭಾವನೆಯ ನಿರ್ಲಕ್ಷ್ಯದ ಬೇಜವಾಬ್ದಾರಿಯೆ ಇದಕ್ಕೆ ಕಾರಣವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ದೆಹಲಿ ವಿಮಾನ ಟರ್ಮಿನಲ್1ರ ನಿಲ್ದಾಣ ಹಾಗೂ ಮಧ್ಯ ಪ್ರದೇಶದ ವಿಮಾನ ನಿಲ್ದಾಣದ ಛಾವಣಿ ಕುಸಿತ ,ಅಯೋಧ್ಯೆಗಳ ರಸ್ತೆಗಳ ಸ್ಥಿತಿ, ರಾಮ ಮಂದಿರ ಸೋರಿಕೆ, ಮುಂಬೈನ ಹಾರ್ಬರ್ ಲಿಂಕ್ ರೋಡ್ ಬಿರುಕು ಬಿಟ್ಟಿರುವುದು, ಬಿಹಾರದಲ್ಲಿ 13 ಸೇತುವೆಗಳು ಕುಸಿತ, ಗುಜರಾತ್‌ನಲ್ಲಿ ಮೋಬ್ರಿ ಸೇತುವೆ ಕುಸಿತಗಳು ಮೋದಿ ಸರ್ಕಾರ ವಿಶ್ವ ದರ್ಜೆಯ ಮೂಲಸೌಕರ್ಯ ಎಂದು ಹೇಳಿಕೊಳ್ಳುವ ಪೊಳ್ಳು ಮಾತಿನ ನಿದರ್ಶನವಾಗಿವೆ ಎಂದು ಖರ್ಗೆ ಖಂಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೆಹಲಿ ವಿಮಾನ ನಿಲ್ದಾಣದ ಛಾವಣಿ ಕುಸಿದು ಒಬ್ಬರು ಸಾವು, 5 ಮಂದಿಗೆ ಗಾಯ
ಇವೆಲ್ಲವೂ ಚುನಾವಣೆಗೂ ಮುನ್ನ ರಿಬ್ಬನ್ ಕತ್ತರಿಸುವ ಸಮಾರಂಭದಲ್ಲಿ ತ್ವರಿತವಾಗಿ ತೊಡಗಿಸಿಕೊಳ್ಳುವುದಕ್ಕಾಗಿ ಮಾಡಿದ ಸುಳ್ಳು ಹಾಗೂ ವಾಕ್ಚಾತುರ್ಯದ ಪ್ರದರ್ಶನವಾಗಿದೆ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಮಡಿದ ಸಂತ್ರಸ್ತರಿಗೆ ಸಂತಾಪಗಳು. ಸಂಸ್ತ್ರಸ್ತ ಕುಟುಂಬ ಭ್ರಷ್ಟ, ಅಸಮರ್ಥ ಹಾಗೂ ಸ್ವಾರ್ಥ ಸರ್ಕಾರದ ಭಾರವನ್ನು ಹೊತ್ತಿಕೊಂಡಿದೆ ಎಂದು ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಘೋಷಣೆಯಾಗುವ ಮುನ್ನ ಮಾರ್ಚ್ 10ರಂದು ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ 9800 ಕೋಟಿ ರೂ. ವೆಚ್ಚದಲ್ಲಿ 15 ವಿಮಾನ ನಿಲ್ದಾಣ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇವುಗಳಲ್ಲಿ ಇಂದು ಮೇಲ್ಚಾವಣಿ ಕುಸಿತಗೊಂಡಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೂಡ ಒಂದಾಗಿದೆ.
ಚುನಾವಣೆಗಾಗಿ ಅಪೂರ್ಣಗೊಂಡ ಕಾಮಗಾರಿಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿರುವುದರಿಂದ ದುರ್ಘಟನೆಗಳು ಸಂಭವಿಸಿವೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
