- ಸಿಕ್ಕಿಂ ರಾಜ್ಯದ ಲಾಚೆನ್, ಲಾಚುಂಗ್ ಪ್ರದೇಶದಲ್ಲಿ ಭೂಕುಸಿತ
- ಪ್ರವಾಸಿಗರಲ್ಲಿ 60 ಮಂದಿ ನಾಮ್ಚಿ ಕಾಲೇಜು ವಿದ್ಯಾರ್ಥಿಗಳು
ಸಿಕ್ಕಿಂ ರಾಜ್ಯದ ಉತ್ತರ ಭಾಗದಲ್ಲಿ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾದ ಪರಿಣಾಮ ಸಿಕ್ಕಿಹಾಕಿಕೊಂಡಿದ್ದ 2,464 ಮಂದಿ ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ (ಜೂನ್ 18) ತಿಳಿಸಿದ್ದಾರೆ.
ರಾಜ್ಯದಲ್ಲಿ ಶನಿವಾರ ಹಠಾತ್ತನೆ ಸುರಿದ ಮಳೆಯಿಂದಾಗಿ ಲಾಚೆನ್ ಮತ್ತು ಲಾಚುಂಗ್ ಪ್ರದೇಶದಲ್ಲಿ ಪ್ರವಾಸಿಗರು ಸಿಕ್ಕಿಹಾಕಿಕೊಂಡಿದ್ದರು.
ಭಾರೀ ಮಳೆಯಿಂದ ಪೆಗಾಂಗ್-ಚುಂಗ್ತಾಂಗ್ನಲ್ಲಿ ಭೂಕುಸಿತದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಹಾನಿಗೊಳಗಾದ ರಸ್ತೆಯನ್ನು ಸರಿಪಡಿಸುವ ಕಾರ್ಯ ಭರದಿಂದ ಸಾಗಿದ್ದು ಹವಾಮಾನ ವೈಪರೀತ್ಯದ ಹಿನ್ನೆಲೆ ಈ ಪ್ರದೇಶಗಳಿಗೆ ಪ್ರವಾಸಿಗರ ಭೇಟಿ ನಿರ್ಬಂಧಿಸಲಾಗಿದೆ ಎಂದು ಉತ್ತರ ಸಿಕ್ಕಿಂ ಜಿಲ್ಲಾಧಿಕಾರಿ ಹೇಮ್ ಕುಮಾರ್ ಚೆಟ್ರಿ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜನರಲ್ ರಿಸರ್ವ್ ಎಂಜಿನಿಯರ್ ಫೋರ್ಸ್ (ಜಿಆಇಎಫ್), ಚುಂಗ್ತಾಂಗ್ ಉಪವಿಭಾಗೀಯ ಅಧಿಕಾರಿಗಳು, ಸೇನೆಯ ಅಧಿಕಾರಿಗಳು ಮತ್ತು ಪಂಚಾಯತ್ನ ಸ್ಥಳೀಯ ಸದಸ್ಯರು ಮೂರು ದಿನಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 2,464 ಪ್ರವಾಸಿಗರನ್ನು ರಕ್ಷಿಸಲಾಗಿದೆ.
ರಾಜ್ಯ ಸರ್ಕಾರದ ವಾಹನಗಳಲ್ಲಿ ಅವರನ್ನು ರಾಜಧಾನಿ ಗ್ಯಾಂಗ್ಟಕ್ಗೆ ಕರೆತರಲಾಗಿದೆ. ಪ್ರವಾಸಿಗರಿಗೆ ಬೇಕಾದ ತುರ್ತು ವೈದ್ಯಕೀಯ ನೆರವನ್ನು ಒದಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಜರಾತ್ | ಅತಿಕ್ರಮಣ ವಿರೋಧಿ ಕಾರ್ಯಾಚರಣೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆ: ಒಬ್ಬ ಸಾವು
ಪ್ರವಾಸಿಗರಲ್ಲಿ 60 ಮಂದಿ ನಾಮ್ಚಿ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
“ಸಿಕ್ಕಿಂ ರಾಜ್ಯದಲ್ಲಿ ಮಳೆ, ಭೂಕುಸಿತದಿಂದ ಹಾನಿಯಾಗಿರುವ ರಸ್ತೆಗಳನ್ನು ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ. ಬಳಿಕ ಪ್ರವಾಸಿಗರ ಭೇಟಿಗೆ ಅನುಮತಿ ನೀಡಲಾಗುವುದು” ಎಂದು ಹೇಮ್ ಕುಮಾರ್ ತಿಳಿಸಿರುವುದಾಗಿ ವರದಿಯಾಗಿದೆ.