2025ರ ಜನವರಿಯಲ್ಲಿ ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ ಈವರೆಗೆ 4,600ಕ್ಕೂ ಹೆಚ್ಚು ಭಾರತೀಯರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಈ ಬಗ್ಗೆ ಸ್ವತಃ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವೇ ಮಾಹಿತಿ ನೀಡಿದೆ.
ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿದ್ದು, “2025ರಲ್ಲಿ ಒಟ್ಟು 3,567 ಭಾರತೀಯ ಪ್ರಜೆಗಳನ್ನು ಅಮೆರಿಕದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು. ಈ ವರ್ಷದಲ್ಲಿ (2026) ಇದುವರೆಗೆ ಒಟ್ಟು 1,076 ಮಂದಿಯನ್ನು ಗಡಿಪಾರು ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
“ಅಮೆರಿಕಕ್ಕೆ ಕಾನೂನುಬಾಹಿರವಾಗಿ ಪ್ರವೇಶಿಸಿದ, ವೀಸಾ ಅವಧಿ ಮುಗಿದ ನಂತರವೂ ಅಲ್ಲಿಯೇ ಉಳಿದುಕೊಂಡ ಅಥವಾ ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ಅಮೆರಿಕದಲ್ಲಿ ವಾಸಿಸುತ್ತಿರುವುದು ಪತ್ತೆಯಾದ ವ್ಯಕ್ತಿಗಳ ಗಡಿಪಾರು ಪ್ರಕ್ರಿಯೆಯಲ್ಲಿ ಭಾರತ ಸರ್ಕಾರವು ಅಮೆರಿಕ ಆಡಳಿತದೊಂದಿಗೆ ನಿಕಟ ಸಮನ್ವಯದೊಂದಿಗೆ ಕೆಲಸ ಮಾಡುತ್ತಿದೆ” ಎಂದು ಸಚಿವಾಲಯ ಹೇಳಿದೆ.
“ಅಮೆರಿಕದ ಕಡೆಯಿಂದ ಗಡಿಪಾರಿಗಾಗಿ ಗುರುತಿಸಲಾದ ವ್ಯಕ್ತಿಗಳ ಪಟ್ಟಿಯನ್ನು ಸಂಬಂಧಪಟ್ಟ ಭಾರತೀಯ ಸಂಸ್ಥೆಗಳು ಸೂಕ್ಷ್ಮವಾಗಿ ಪರಿಶೀಲಿಸಿ, ದೃಢೀಕರಿಸುತ್ತವೆ. ಭಾರತೀಯ ಪ್ರಜೆಗಳು ಎಂದು ಖಚಿತಪಟ್ಟ ವ್ಯಕ್ತಿಗಳನ್ನು ಮಾತ್ರ ಭಾರತಕ್ಕೆ ಮರಳಿ ಕರೆತರಲು ಅನುಮತಿಸಲಾಗುತ್ತದೆ” ಎಂದು ಸಚಿವಾಲಯ ಹೇಳಿಕೊಂಡಿದೆ.




