ಅಂದು “ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಸಾಮಾನ್ಯ ನಾಗರಿಕನಿಗೆ ಸುಪ್ರೀಂ ಕೋರ್ಟ್ನ ಬಾಗಿಲುಗಳು ಸಂಪೂರ್ಣವಾಗಿ ಮುಚ್ವೆಚಿದ್ದವು” ಎಂಬ ಸಂದೇಶವೊಂದಿತ್ತು. ಇಂದು SIR ಕುರಿತಾದ ಸುಪ್ರೀಂ ಕೋರ್ಟ್ ಆದೇಶವೂ ಸಹ ಇದೇ ರೀತಿಯ ಅತ್ಯಂತ ಆಘಾತಕಾರಿ ಸಂದೇಶವನ್ನೇ ರವಾನಿಸುತ್ತಿದೆ.
ಇತ್ತೀಚಿನ ADR ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, 1975ರ ತುರ್ತು ಪರಿಸ್ಥಿತಿಯ ಕರಾಳ ‘ಎಡಿಎಂ ಜಬಲ್ಪುರ್’ (ADM Jabalpur) ತೀರ್ಪು ನೀಡಿದ್ದ ಆಘಾತವನ್ನೇ ನೆನಪಿಸುತ್ತಿದೆ. ಅಂದು ನಾಗರಿಕರ ಮೂಲಭೂತ ಬದುಕುವ ಹಕ್ಕನ್ನೇ ಕಸಿದುಕೊಂಡ ಆದೇಶಕ್ಕೆ ಅಂದಿನ ಶ್ರೇಷ್ಠ ಕಾನೂನು ತಜ್ಞರು ಯಾವ ಕಾರಣಕ್ಕಾಗಿ ಸಹಿ ಹಾಕಿದರು ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಆದರೆ, ಅಂದು ಆ ತೀರ್ಪಿನ ಹಿಂದಿನ ಉದ್ದೇಶ ಏನೇ ಇರಲಿ, ಆದರೆ, “ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಸಾಮಾನ್ಯ ನಾಗರಿಕನಿಗೆ ಸುಪ್ರೀಂ ಕೋರ್ಟ್ನ ಬಾಗಿಲುಗಳು ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ” ಎಂಬ ಸಂದೇಶವೊಂದನ್ನ ನೀಡಿತ್ತು. ಇಂದು SIR ಕುರಿತಾದ ಸುಪ್ರೀಂ ಕೋರ್ಟ್ ಆದೇಶವೂ ಸಹ ಇದೇ ರೀತಿಯ ಅತ್ಯಂತ ಆಘಾತಕಾರಿ ಸಂದೇಶವನ್ನೇ ರವಾನಿಸುತ್ತಿದೆ.
ನ್ಯಾಯಾಲಯವು ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ಮತದಾನದ ಹಕ್ಕನ್ನು ಕಸಿದುಕೊಳ್ಳುವ ನಿರ್ಧಾರಕ್ಕೆ ಕೇವಲ ಸಹಿ ಹಾಕಿಲ್ಲ; ಈ ಪ್ರಕ್ರಿಯೆಯಿಂದ ಯಾರನ್ನು ವ್ಯವಸ್ಥೆಯಿಂದ ಹೊರಗಿಡಲಾಗಿದೆ ಮತ್ತು ಆ ಹೊರಗಿಡುವಿಕೆಯ ನಿಜವಾದ ಅರ್ಥವೇನು ಎಂಬುದನ್ನು ಲೆಕ್ಕಹಾಕಲು ಸಹ ನಿರಾಕರಿಸಿದೆ. ಕಾನೂನು ತಜ್ಞ ರುದ್ರಾಕ್ಷ ಲಕ್ರಾ ಅವರ ಕಾನೂನು ವಿಶ್ಲೇಷಣೆಯನ್ನು ಉಲ್ಲೇಖಿಸುವುದಾದರೆ, “ಈ ತೀರ್ಪಿನ ಹೃದಯಭಾಗದಲ್ಲೇ ಒಂದು ದೊಡ್ಡ ಪಾಪ ಅಡಗಿದೆ”. ಎಲ್ಲದಕ್ಕಿಂತ ಮಿಗಿಲಾಗಿ, ಸಂವಿಧಾನದ ನಿಜವಾದ ರಕ್ಷಕನಾಗಿರಬೇಕಾದ ಅತ್ಯುನ್ನತ ನ್ಯಾಯಾಲಯ, ರಾಜಕೀಯವಾಗಿ ಸೂಕ್ಷ್ಮವಾಗಿರುವ ಇಂತಹ ವಿಷಯಗಳಲ್ಲಿ ಕಾನೂನಾತ್ಮಕ ಪರಿಹಾರಗಳನ್ನು ಹುಡುಕುವ ನಾಗರಿಕರ ಹಾದಿಯನ್ನು ಸಂಪೂರ್ಣವಾಗಿ ಬಂದ್ ಮಾಡಿದೆ ಎಂಬುದಕ್ಕೆ ಈ ತೀರ್ಪೇ ಸಾಕ್ಷಿ.
ಈ ಪ್ರಕರಣದ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಜಾಯ್ಮಾಲಾ ಬಾಗ್ಚಿ, “ಒಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, “ನ್ಯಾಯಾಲಯವು ಸಮಾಜದಿಂದ ದೂರ ಉಳಿದು ಒಂಟಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ” ಎಂದು ಹೇಳಿದ್ದರು. ಬಿಹಾರ ಚುನಾವಣೆಯ ಸಮಯದಲ್ಲಿ ಮತದಾರರ ಪಟ್ಟಿಯಿಂದ ಕೆಲವು ಮತದಾರರನ್ನು ಕೈಬಿಟ್ಟಾಗ, ಅದರ ವಿರುದ್ಧ ಸಾರ್ವಜನಿಕರು ಯಾವುದೇ ದೊಡ್ಡ ಪ್ರತಿಭಟನೆ ಮಾಡಲಿಲ್ಲ ಎಂಬುದನ್ನು ಅವರು ಗಮನಿಸಿ ಈ ಮಾತು ಹೇಳಿದ್ದರು.
ಆದರೆ, ನ್ಯಾಯಾಲಯವು ನಿಜವಾಗಿಯೂ ಸಮಾಜದ ಪರಿಸ್ಥಿತಿಯನ್ನು ಗಮನಿಸುವುದೇ ಹೌದಾದರೆ, ಕೇವಲ ಪ್ರತಿಭಟನೆ ನಡೆಯಲಿಲ್ಲ ಎಂಬುದನ್ನಷ್ಟೇ ಅಲ್ಲದೆ, ಸಾರ್ವಜನಿಕರು ಪ್ರತಿಭಟನೆ ಮಾಡದ ಹಿಂದಿರುವ ಜನರ ಅಸಹಾಯಕತೆ ಅಥವಾ ಭಯವನ್ನು ಕೂಡ ನ್ಯಾಯಾಲಯ ಅರ್ಥ ಮಾಡಿಕೊಳ್ಳಬೇಕಿತ್ತು. ಆಡಳಿತ ಪಕ್ಷವು ಹೇಗಾದರೂ ಮಾಡಿ ಗೆಲ್ಲಲೇಬೇಕಾಗಿದ್ದ ಚುನಾವಣೆಯ ಮುನ್ನವೇ ಎಸ್ಐಆರ್ ಪ್ರಕ್ರಿಯೆಯನ್ನು ಇಷ್ಟು ಅವಸರವಾಗಿ ಜಾರಿಗೊಳಿಸಿದ್ದರ ಹಿಂದಿನ ರಾಜಕೀಯ ಆತುರವನ್ನು ಕೋರ್ಟ್ ಗಮನಿಸಬಹುದಿತ್ತು. ಚುನಾವಣಾ ಆಯುಕ್ತರ ನೇಮಕಾತಿಯಲ್ಲಿ ಸರ್ಕಾರವು ಸುಪ್ರೀಂ ಕೋರ್ಟ್ನ ಆದೇಶಗಳನ್ನೇ ಬದಿಗೊತ್ತಿ ತನಗೆ ಬೇಕಾದವರನ್ನು ತಂದಿದ್ದನ್ನು ಕೋರ್ಟ್ ನೆನಪಿಸಿಕೊಳ್ಳಬಹುದಿತ್ತು. ಮುಖ್ಯ ಚುನಾವಣಾ ಆಯುಕ್ತರ ಬಹಿರಂಗ ಪಕ್ಷಪಾತದ ನಡವಳಿಕೆ ಮತ್ತು ಆಡಳಿತಾರೂಢ ಬಿಜೆಪಿ ಹಾಗೂ ಚುನಾವಣಾ ಆಯೋಗದ ನಡುವಿನ ಜುಗಲ್ಬಂದಿಯನ್ನು ಕೋರ್ಟ್ ಗುರುತಿಸಬಹುದಿತ್ತು. ಆದರೆ ನ್ಯಾಯಾಲಯ ಇವ್ಯಾವುದನ್ನೂ ಮಾಡಲಿಲ್ಲ. ಬದಲಿಗೆ, ಚುನಾವಣಾ ಆಯೋಗದ ವಿಶ್ವಾಸಾರ್ಹತೆ ಇತಿಹಾಸದಲ್ಲೇ ಅತ್ಯಂತ ತಳಮಟ್ಟಕ್ಕೆ ಕುಸಿದಿರುವ ಈ ಸಮಯದಲ್ಲಿ ನ್ಯಾಯಾಲಯವು ಆ ಸಂಸ್ಥೆಗೆ ಅತಿಯಾದ ಮನ್ನಣೆ ಮತ್ತು ಸಂಪೂರ್ಣ ಶರಣಾಗತಿಯನ್ನು ಪ್ರದರ್ಶಿಸಿದೆ.
ನ್ಯಾಯಾಲಯಗಳು ಇಂದಿನ ಪರಿಸ್ಥಿತಿಗೆ ತಕ್ಕಂತೆ ನಡೆದುಕೊಳ್ಳುತ್ತಿರುವುದನ್ನು ನೋಡಿ ಸಾಮಾನ್ಯ ಜನರಿಗೆ ಭಯ ಶುರುವಾಗಿದೆ. ಈ ಆದೇಶವು ಜನರಲ್ಲಿ ಒಂದು ಆತಂಕಕಾರಿ ಸಂದೇಶವನ್ನು ರವಾನಿಸಿದೆ.. ಒಮ್ಮೆ ಪ್ರಸ್ತುತ ಸರ್ಕಾರವು ಯಾವುದೇ ವಿಷಯದಲ್ಲಿ ಹಠಕ್ಕೆ ಬಿದ್ದರೆ, ನ್ಯಾಯಾಲಯಗಳು ನಾಗರಿಕರಿಗೆ ಸಂವಿಧಾನ ನೀಡಿದ ಹಕ್ಕುಗಳನ್ನು ರಕ್ಷಿಸಲು ಮುಂದೆ ಬರುವುದಿಲ್ಲ ಮತ್ತು ಸಹಾಯದ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿಬಿಡುತ್ತವೆ. ಇನ್ನು ಮುಂದೆ ಸಾಮಾನ್ಯ ಜನರು ಕೇವಲ ಜಾಮೀನಿನಂತಹ ತುರ್ತು ವಿಷಯಗಳಿಗಾಗಿ ಮಾತ್ರ ಕೋರ್ಟ್ಗೆ ಹೋಗಬಹುದು. ಅಲ್ಲಿಯೂ ಸಹ ತಮಗೆ ನ್ಯಾಯ ಸಿಗುತ್ತದೋ ಇಲ್ಲವೋ ಎಂಬುದು, ಅಂದು ಯಾವ ನ್ಯಾಯಾಧೀಶರ ಪೀಠದ ಮುಂದೆ ಕೇಸ್ ವಿಚಾರಣೆಗೆ ಬರುತ್ತದೆ ಎಂಬ ‘ಅದೃಷ್ಟ’ದ ಮೇಲೆ ನಿರ್ಧಾರವಾಗುತ್ತದೆ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲದ ಸಣ್ಣಪುಟ್ಟ ವಿಷಯಗಳಲ್ಲಿ ಕೋರ್ಟ್ಗಳು ಇಂದಿಗೂ ಒಳ್ಳೆಯ ತೀರ್ಪುಗಳನ್ನು ನೀಡಬಹುದು. ಆದರೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳುಮಾಡುವ ದೊಡ್ಡ ವಿಷಯಗಳಲ್ಲಿ ನ್ಯಾಯಾಂಗವು ತಡೆಗೋಡೆಯಾಗಿ ನಿಲ್ಲುತ್ತದೆ ಎಂದು ನಂಬುವುದು ಕೇವಲ ಮುಗ್ಧತೆಯಷ್ಟೇ ಆಗುತ್ತದೆ.
ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ (Emergency) ಇದ್ದಾಗ ಏನಾಯಿತೋ, ಅದೇ ಪರಿಸ್ಥಿತಿ ಈಗ ಮರುಕಳಿಸಿದೆ. ಇಡೀ ದೇಶಕ್ಕೆ ನ್ಯಾಯಾಲಯದ ಬೆಂಬಲ ಅತ್ಯಂತ ತುರ್ತಾಗಿ ಬೇಕಾಗಿರುವ ಇಂತಹ ಸಮಯದಲ್ಲಿ, ದೇಶದ ಅತ್ಯುನ್ನತ ನ್ಯಾಯಾಲಯವು ತನ್ನ ಸಾಂವಿಧಾನಿಕ ಜವಾಬ್ದಾರಿಯಿಂದ ಸಂಪೂರ್ಣವಾಗಿ ವಿಮುಖವಾಗಿ ಸಾಗುತ್ತಿದೆ.
ಈ ಇಡೀ ಆದೇಶದ ಅತ್ಯಂತ ಆಘಾತಕಾರಿ ಅಂಶವೆಂದರೆ, ಕಾನೂನಿನ ಸ್ಪಷ್ಟ ಉಲ್ಲಂಘನೆಗಳನ್ನು ಕಣ್ಣಾರೆ ಕಂಡೂ ಕಾಣದಂತೆ ನಟಿಸಲು ನ್ಯಾಯಾಲಯವು ಒಪ್ಪಿಕೊಂಡಿರುವುದು. SIR ಪ್ರಕ್ರಿಯೆಯು ಕಾನೂನು, ನಿಯಮಗಳು ಮತ್ತು ಸ್ವತಃ ಚುನಾವಣಾ ಆಯೋಗದ ಸ್ಥಾಪಿತ ಕಾರ್ಯವಿಧಾನಗಳನ್ನು ಹಾಗೂ ಅದರದ್ದೇ ಆದ ‘ಮತದಾರರ ಪಟ್ಟಿ ಕೈಪಿಡಿ’ಯನ್ನು ಸಹ ಸಂಪೂರ್ಣವಾಗಿ ಗಾಳಿಗೆ ತೂರಿತ್ತು. ಈ ಗಂಭೀರ ಕಾನೂನು ದೋಷವನ್ನು ಎದುರಿಸಲು ಚುನಾವಣಾ ಆಯೋಗವು ಅತ್ಯಂತ ಚಾಣಾಕ್ಷ ಮತ್ತು ತಾಂತ್ರಿಕ ವಾದವನ್ನು ಮುಂದಿಟ್ಟಿತು. ಯಾವುದೋ ಒಂದು ನಿರ್ದಿಷ್ಟ ಕ್ಷೇತ್ರದ ಅಸಾಧಾರಣ ಪರಿಸ್ಥಿತಿಯನ್ನು ನಿಭಾಯಿಸಲು ಬಳಸಬೇಕಾದ ಅತ್ಯಂತ ಅಪರೂಪದ ವಿನಾಯಿತಿಯ ನಿಯಮವನ್ನು, ಇಡೀ ದೇಶದಾದ್ಯಂತ ಸಾರ್ವತ್ರಿಕವಾಗಿ ಅನ್ವಯಿಸಲು ಆಯೋಗ ಮುಂದಾಯಿತು. ಆಶ್ಚರ್ಯವೆಂದರೆ, ಜನರ ಸಾಮಾನ್ಯ ವಲಸೆ ಮತ್ತು ನಗರೀಕರಣದಂತಹ ದಿನನಿತ್ಯದ ಪ್ರಕ್ರಿಯೆಗಳನ್ನು ಅಸಾಧಾರಣ ಸಂದರ್ಭಗಳೆಂದು ಬಿಂಬಿಸಿದ ಆಯೋಗದ ವಾದಕ್ಕೆ ನ್ಯಾಯಾಲಯವೂ ಸಂಪೂರ್ಣವಾಗಿ ತಲೆಯಾಡಿಸಿತು. ಇದು ಆಯೋಗ ಕೇಳಿದ್ದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಆನೆಯನ್ನು ಸೂಜಿಯ ಕಣ್ಣಿನಿಂದ ತೂರಿಸಲು ನ್ಯಾಯಾಲಯವೇ ಯತ್ನಿಸಿದ ಹಾಗಿತ್ತು.
ಕಾನೂನು ತಜ್ಞ ವಾಸುದೇವ್ ದೇವದಾಸನ್ ಹೇಳುವಂತೆ, ಈ ಆದೇಶವು ಸಂಪೂರ್ಣವಾಗಿ ತಪ್ಪಾದ ಸಿದ್ಧಾಂತಗಳು, ಪೂರ್ವನಿದರ್ಶನಗಳ ನಿರ್ಲಕ್ಷ್ಯ ಮತ್ತು ತರ್ಕ ಹಾಗೂ ಸತ್ಯಗಳ ಸಂಪೂರ್ಣ ನಿರಾಕರಣೆಯ ಮೇಲೆ ನಿಂತಿದೆ. ಈ SIR ಪ್ರಕ್ರಿಯೆಯಿಂದಾಗಿ ದೇಶದ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಸುಮಾರು 10 ಕೋಟಿ ಮತದಾರರು ಹೊರಗುಳಿಯಲಿದ್ದಾರೆ. ಈ ಬೃಹತ್ ಪ್ರಮಾಣದ ಕಡಿತವು ಸರ್ಕಾರದ ಅಧಿಕೃತ ವಯಸ್ಕ ಜನಸಂಖ್ಯೆಯ ದತ್ತಾಂಶಕ್ಕೆ ಎಲ್ಲಿಯೂ ಹೊಂದುವುದಿಲ್ಲ, ಎಲ್ಲೆಡೆ ಮಹಿಳಾ ಮತದಾರರ ಅನುಪಾತವು ಕುಸಿದಿದೆ ಮತ್ತು ಬಿಹಾರದ ಪರಿಷ್ಕೃತ ಪಟ್ಟಿಯಲ್ಲಿ ಮೊದಲಿಗಿಂತಲೂ ಹೆಚ್ಚು ತಪ್ಪುಗಳು, ಗೊಂದಲಮಯ ಹೆಸರುಗಳು ಹಾಗೂ ನಕಲಿ ಹೆಸರುಗಳು ತುಂಬಿಕೊಂಡಿವೆ. ಈ ಸತ್ಯಗಳ ಬಗ್ಗೆ ತೀರ್ಪಿನಲ್ಲಿ ಒಂದು ಸಣ್ಣ ಉಲ್ಲೇಖವೂ ಇಲ್ಲ. ನ್ಯಾಯಾಲಯವು ಈ ಎಲ್ಲ ಸತ್ಯಗಳ ವಿಷಯದಲ್ಲಿ ಉದ್ದೇಶಪೂರ್ವಕವಾಗಿ ಕಣ್ಣು ಮುಚ್ಚಿಕೊಂಡಿದೆ ಎನಿಸುತ್ತದೆ.
ಇದನ್ನೂ ಓದಿ: ಸೌರವ್, ವಿಜೇತಾ, ಆಶುತೋಷ್: ಯಾರೀ ʼಕಾಕ್ರೋಚ್ʼ ಸೇನಾನಿಗಳು?
ಸುಪ್ರೀಂ ಕೋರ್ಟ್ ಬಯಸಿದ್ದರೆ, ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ತನ್ನಿಷ್ಟದಂತೆ ಬದಲಾಯಿಸುವುದನ್ನು ತಡೆಯಬಹುದಿತ್ತು ಮತ್ತು ಆಯೋಗದ ಕೈಪಿಡಿಯಲ್ಲಿರುವ ಕೆಲವು ನಿಯಮಗಳನ್ನು ಕಡ್ಡಾಯಗೊಳಿಸಬಹುದಿತ್ತು. ಚುನಾವಣೆ ಹತ್ತಿರವಿರುವಾಗ SIR ನಡೆಸಬಾರದು ಎಂಬ ಕಾಲಮಿತಿಯನ್ನು ಹೇರಬಹುದಿತ್ತು, ದಾಖಲೆಗಳ ಪರಿಶೀಲನೆಗೆ ಕಟ್ಟುನಿಟ್ಟಿನ ಪ್ರೋಟೋಕಾಲ್ ನೀಡಬಹುದಿತ್ತು, ತಪ್ಪಾಗಿ ಹೊರದಬ್ಬಲ್ಪಟ್ಟ ಮತದಾರರಿಗೆ ಸರಿಪಡಿಸಿಕೊಳ್ಳಲು ಪಾರದರ್ಶಕ ವ್ಯವಸ್ಥೆ ಮತ್ತು ಸಾರ್ವಜನಿಕ ವಿಚಾರಣೆಗಳನ್ನು ಕಡ್ಡಾಯಗೊಳಿಸಬಹುದಿತ್ತು. ಅಲ್ಲದೆ, ಪ್ರತಿಯೊಂದು ಹಂತದಲ್ಲೂ ಕಂಪ್ಯೂಟರ್ ಮೂಲಕ ಸುಲಭವಾಗಿ ಪರಿಶೀಲಿಸಬಹುದಾದ ಮತದಾರರ ಪಟ್ಟಿಯನ್ನು ಪ್ರಕಟಿಸುವುದನ್ನು ಕಡ್ಡಾಯಗೊಳಿಸುವ ಮೂಲಕ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬಹುದಿತ್ತು. ಆದರೆ ನ್ಯಾಯಾಲಯ ಇವ್ಯಾವುದನ್ನೂ ಮಾಡದೆ ಚುನಾವಣಾ ಆಯೋಗದ ಕೈಗೆ ಒಂದು ‘ಬ್ಲಾಂಕ್ ಚೆಕ್’ ನೀಡಿದೆ. ತೀರ್ಪಿನಲ್ಲಿ ನೀಡಲಾಗಿರುವ ಎರಡು ಸಣ್ಣ ಪರಿಹಾರಗಳು (ತಪ್ಪಾದ ಹೆಸರು ಬರೆದಿದ್ದರೆ ನ್ಯಾಯಾಲಯಕ್ಕೆ ಹೋಗುವುದು ಮತ್ತು ವಿದೇಶಿ ಪ್ರಜೆ ಎಂಬ ಶಂಕೆಯಿದ್ದರೆ ಸಕ್ಷಮ ಪ್ರಾಧಿಕಾರಕ್ಕೆ ಉಲ್ಲೇಖಿಸುವುದು) ಕೇವಲ ಕಣ್ಣೊರೆಸುವ ತಂತ್ರಗಳಾಗಿದ್ದು, ಇವು ದೇಶದ ಅತ್ಯಂತ ಬಡ, ಹಿಂದುಳಿದ ಮತ್ತು ಅನಕ್ಷರಸ್ಥ ನಾಗರಿಕರನ್ನು ಮತ್ತೊಂದು ಅಪಾಯಕಾರಿ ‘ಶಂಕೆ ಮತ್ತು ಭಯದ’ ಪರಿಸ್ಥಿತಿಗೆ ತಳ್ಳಲಿವೆ. ತಾವೊಬ್ಬ ಭಾರತೀಯರು ಎಂದು ಸಾಬೀತುಪಡಿಸಲು ದಿನನಿತ್ಯ ಸರ್ಕಾರಿ ಕಚೇರಿಗಳಿಗೆ ಅಲೆಯುವಂತೆ ಮಾಡುವ ಒಂದು ಅಪಾಯಕಾರಿ ‘ಮಾಟಗಾತಿಯರ ಬೇಟೆ’ಗೆ (ಸಮಾಜದಲ್ಲಿ ಬರುವ ಕಾಯಿಲೆಗಳು, ಬೆಳೆ ನಾಶ ಅಥವಾ ಯಾವುದೇ ಅಹಿತಕರ ಘಟನೆಗಳಿಗೆ ಕೆಲವು ಮಹಿಳೆಯರೇ ಕಾರಣ ಎಂದು ನಂಬುವುದು) ಈ ತೀರ್ಪು ನಾಂದಿ ಹಾಡಿದೆ.
ಯಾವುದೇ ಸಾಂವಿಧಾನಿಕ ತಿದ್ದುಪಡಿ ಅಥವಾ ಕಾಯ್ದೆಗಳ ಬದಲಾವಣೆ ಇಲ್ಲದೆಯೇ ದೇಶದ 10 ಕೋಟಿ ಮತದಾರರನ್ನು ವ್ಯವಸ್ಥೆಯಿಂದ ಹೊರಹಾಕಲು ಈ ಆದೇಶವು ದಾರಿ ಮಾಡಿಕೊಟ್ಟಿದೆ. ಇದು ಪ್ರಾತಿನಿಧಿಕ ಪ್ರಜಾಪ್ರಭುತ್ವದ ಮೂಲ ತತ್ವವನ್ನೇ ಬುಡಮೇಲು ಮಾಡುವ ಒಂದು ಆಯುಧವನ್ನು ಆಡಳಿತ ಪಕ್ಷದ ಕೈಗಿಟ್ಟಿದೆ. ಈಗ ಚುನಾವಣಾ ಆಯೋಗ ಮತ್ತು ಆಡಳಿತಾರೂಢ ಸರ್ಕಾರ ತಮಗೆ ಬೇಡದ, ತಮಗೆ ಮತ ಹಾಕುವುದಿಲ್ಲ ಎಂದು ಅನಿಸುವ ಯಾವುದೇ ವರ್ಗ, ಸಮುದಾಯ ಅಥವಾ ಪ್ರದೇಶದ ಜನರನ್ನು ಮತದಾರರ ಪಟ್ಟಿಯಿಂದ ಮುಕ್ತವಾಗಿ ಹೊರಗಿಡಬಹುದು.
ಹಿಂದೊಮ್ಮೆ ಜರ್ಮನ್ ಕವಿ ಮತ್ತು ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ಬರೆದ ಕವಿತೆಯ ಸಾಲುಗಳು ಇಂದು ಭಾರತದಲ್ಲಿ ಅಕ್ಷರಶಃ ನಿಜವಾಗುತ್ತಿವೆ; ಅದೆಂದರೆ “ಇನ್ನು ಮುಂದೆ ಜನರು ತಮ್ಮ ಆಡಳಿತಗಾರರನ್ನು ಆರಿಸಿಕೊಳ್ಳುವುದಲ್ಲ, ಬದಲಿಗೆ ಆಡಳಿತಗಾರರೇ ತಮಗೆ ಬೇಕಾದ ಜನರನ್ನು ಆರಿಸಿಕೊಳ್ಳಲು ಸಂಪೂರ್ಣ ಸ್ವತಂತ್ರರಾಗಿದ್ದಾರೆ.” ಇದು ಪ್ರಜೆಗಳೇ ಪ್ರಭುಗಳಾಗಿರುವ ವ್ಯವಸ್ಥೆಯನ್ನು ಉಲ್ಟಾ ಮಾಡಿ, ಆಡಳಿತಗಾರರೇ ಸರ್ವಾಧಿಕಾರಿಗಳಾಗಲು ಸುಪ್ರೀಂ ಕೋರ್ಟ್ ಮಾಡಿಕೊಟ್ಟ ಹೆದ್ದಾರಿ.
ಇದು ಖ್ಯಾತ ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರ ಲೇಖನವೊಂದರ ಒಳತಿರುಳು
https://indianexpress.com/article/opinion/columns/yogendra-yadav-writes-now-rulers-are-free-to-elect-their-people-10726335/





