2020 ರಿಂದ 2024ರ ನಡುವೆ ರಾಷ್ಟ್ರೀಯ ಭದ್ರತಾ ಪಡೆ(ಎನ್ಎಸ್‌ಜಿ) ಮತ್ತು ಅಸ್ಸಾಂ ರೈಫಲ್ಸ್ (ಎಆರ್) ಸೇರಿದಂತೆ ಏಳು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) ಒಟ್ಟು 730 ಮಂದಿ ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೆ, ಇದೇ ಅವಧಿಯಲ್ಲಿ ಬರೋಬ್ಬರಿ 55,555 ಸಿಬ್ಬಂದಿಗಳು ಸ್ವಯಂ ನಿವೃತ್ತಿ ಅಥವಾ ರಾಜೀನಾಮೆ ನೀಡಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಪ್ರಸ್ತುತ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಅರೆಸೇನಾ ಸಿಬ್ಬಂದಿಗಳ ಆತ್ಮಹತ್ಯೆ ಮತ್ತು ಸ್ವಯಂ ನಿವೃತ್ತಿ ಬಗ್ಗೆ ಕಾಂಗ್ರೆಸ್ ಸಂಸದ ಮುಕುಲ್ ವಾಸ್ನಿಕ್ ಪ್ರಶ್ನೆ ಕೇಳಿದ್ದರು. ಅವರ ಪ್ರಶ್ನೆಗೆ ರಾಜ್ಯಸಭೆಯಲ್ಲಿ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಉತ್ತರ ನೀಡಿದ್ದಾರೆ. ಅವರು ನೀಡಿರುವ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಅರೆಸೇನಾ ಪಡೆಗಳ 47,891 ಸಿಬ್ಬಂದಿಗಳು ಸ್ವಯಂ ನಿವೃತ್ತಿ ಪಡೆದಿದ್ದಾರೆ. 7,664 ಸಿಬ್ಬಂದಿಗಳು ರಾಜೀನಾಮೆ ನೀಡಿದ್ದಾರೆ. ಅಲ್ಲದೆ, 730 ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿಆರ್‌ಪಿಎಫ್‌ನಲ್ಲಿ 2020ರಲ್ಲಿ 7,684, 2021ರಲ್ಲಿ 12,013, 2022ರಲ್ಲಿ 12,371, 2023ರಲ್ಲಿ 12,302 ಹಾಗೂ 2024ರಲ್ಲಿ ಈವರೆಗೆ 11,185 ಸಿಬ್ಬಂದಿಗಳು ಸ್ವಯಂ ನಿವೃತ್ತಿ ಅಥವಾ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, 2020ರಲ್ಲಿ 144 ಮಂದಿ, 2021ರಲ್ಲಿ 157 ಮಂದಿ, 2022ರಲ್ಲಿ 138 ಮಂದಿ, 2023ರಲ್ಲಿ 157 ಮಂದಿ ಹಾಗೂ 2024ರ ಈವರೆಗೆ 134 ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಉಲ್ಲೇಖಿಸಲಾಗಿದೆ.