ಪಡಿತರ ಅಂಗಡಿಯಲ್ಲಿ ಘರ್ಷಣೆ ನಡೆದು 19 ವರ್ಷದ ದಲಿತ ಯುವಕನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದಿದೆ. ಆತನ ಸಹೋದರನ ಮೇಲೂ ಗುಂಡು ಹಾರಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಈ ಘಟನೆಯನ್ನು ಖಂಡಿಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, 19 ವರ್ಷದ ಪಂಕಜ್ ಪ್ರಜಾಪತಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಲ್ಲಲಾಗಿದೆ. ದಲಿತನಾಗಿ ತನ್ನ ಪಾಲನ್ನು ಕೇಳಿದ ಕಾರಣಕ್ಕೆ ಈ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | ದಲಿತ ವ್ಯಕ್ತಿಯ ಹತ್ಯೆ; ಆತನ ತಾಯಿಯನ್ನು ನಗ್ನಗೊಳಿಸಿ ಅವಮಾನ
ಛತ್ತರ್‌ಪುರ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ನೌಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಲ್ಹಾರಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಪಡಿತರ ಅಂಗಡಿಯಲ್ಲಿ ಖರೀದಿ ಮಾಡುವಾಗ ಪಂಕಜ್ ಪ್ರಜಾಪತಿ ಮತ್ತು ಇತರ ಮೂವರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಗುಂಡು ಹಾರಿಸಿ ಪಂಕಜ್‌ಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ನೌಗಾಂವ್ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ(ಎಸ್‌ಡಿಪಿಒ) ಅಮಿತ್ ಮೆಶ್ರಮ್, “ಪಂಕಜ್ ಪ್ರಜಾಪತಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು, ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧಿಸಿ ಪ್ರವೀಣ್ ಅಲಿಯಾಸ್ ಕಟ್ಟು ಪಟೇರಿಯಾ, ನವೀನ್ ಪಟೇರಿಯಾ ಮತ್ತು ಪಡಿತರ ಮಾರಾಟಗಾರ ರಾಮಸೇವಕ್ ಅರ್ಜಾರಿಯಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ(BNS), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.
ಆರೋಪಿಗಳ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಸದ್ಯ ಅವರ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
मध्यप्रदेश में 19 साल के पंकज प्रजापति को सिर्फ़ इसलिए सरेआम गोली मार दी गई – क्योंकि उसने दलित होकर अपने हिस्से का हक़ मांगा।
— Rahul Gandhi (@RahulGandhi) June 9, 2025
FIR दर्ज नहीं की गई, पोस्टमार्टम टाल दिया गया – क्योंकि गुनहगार नेता सत्ता की गोद में बैठा है और सत्ता मनुवादी और बहुजन विरोधी BJP की है।
मोदी सरकार के… https://t.co/8rlTvCnMIV
ಇನ್ನು ಈ ಘಟನೆಯನ್ನು ಖಂಡಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ ಅವರು, “ಎಫ್‌ಐಆರ್ ದಾಖಲಿಸಲಾಗಿಲ್ಲ, ಮರಣೋತ್ತರ ಪರೀಕ್ಷೆಯನ್ನು ಮುಂದೂಡಲಾಗಿದೆ. ಏಕೆಂದರೆ ತಪ್ಪಿತಸ್ಥನು ಅಧಿಕಾರ ಹೊಂದಿರುವವರ ಮಡಿಲಲ್ಲೇ ಸುರಕ್ಷಿತವಾಗಿ ಕುಳಿತಿದ್ದಾನೆ. ಈ ಅಧಿಕಾರವು ಮನುವಾದಿ ಮತ್ತು ಬಹುಜನ ವಿರೋಧಿ ಬಿಜೆಪಿಗೆ ಸೇರಿದೆ” ಎಂದು ಟೀಕಿಸಿದ್ದಾರೆ.
“ಮೋದಿ ಸರ್ಕಾರದ 11 ವರ್ಷಗಳ ಅವಧಿಯು ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ಅವಮಾನ, ಹಿಂಸೆ ಮತ್ತು ತಾರತಮ್ಯದಿಂದ ತುಂಬಿವೆ. ದಲಿತರನ್ನು ಸಾಂಸ್ಥಿಕವಾಗಿ ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಿ ಮುಖ್ಯವಾಹಿನಿಯಿಂದ ದೂರವಿಡುವ ನಿರಂತರ ಪಿತೂರಿ ನಡೆಯುತ್ತಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
“ಅಪರಾಧಿಗಳನ್ನು ತಕ್ಷಣವೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ನಾನು ಪ್ರಜಾಪತಿ ಕುಟುಂಬ ಮತ್ತು ದೇಶದ ಪ್ರತಿಯೊಬ್ಬ ಬಹುಜನರೊಂದಿಗೆ ನಿಲ್ಲುತ್ತೇನೆ. ಈ ಹೋರಾಟ ಗೌರವ, ನ್ಯಾಯ ಮತ್ತು ಸಮಾನತೆಗಾಗಿ ಮತ್ತು ನಾವು ಈ ಹೋರಾಟವನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲುತ್ತೇವೆ” ಎಂದಿದ್ದಾರೆ.
