ಸುಮಾರು 30 ವರ್ಷದ ಮಹಿಳೆ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ನಡೆಸಿ ಕೊಂದ ಘಟನೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಅರ್ಜುನ್ ದುಮ್ರಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಮೃತ ಮಹಿಳೆಯನ್ನು ಮಾಧುರಿ ಎಂದು ಗುರುತಿಸಲಾಗಿದೆ. ಹಾಗೆಯೇ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗಿದೆ. ಮಾಧುರಿಯ ಶವವು ಗ್ರಾಮ ಪಂಚಾಯತ್ ಕಟ್ಟಡದ ಬಳಿಯ ಭತ್ತದ ಗದ್ದೆಯಲ್ಲಿ ಬಿದ್ದಿದ್ದು, ಬೀದಿ ನಾಯಿಗಳು ದಾಳಿ ನಡೆಸುತ್ತಿರುವುದು ಕಂದುಬಂದಿದೆ. ಈ ಬಗ್ಗೆ ನನಗೆ ಕರೆ ಬಂದಿತ್ತು ಎಂದು ಹಟಾ ಎಸ್‌ಎಚ್‌ಒ ರಾಮ್‌ಸಹಾಯ್ ಚೌಹಾಣ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಹಾಸನ l ಬೀದಿ ನಾಯಿಗಳ ಹಾವಳಿ: ಬಾಲಕನ ಮೇಲೆ ದಾಳಿ
ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಧಾವಿಸಿದ್ದು, ಕೋಲುಗಳಿಂದ ನಾಯಿಗಳನ್ನು ಓಡಿಸಿ ಶವವನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆ ಆಗಾಗ್ಗೆ ಗ್ರಾಮದಲ್ಲಿ ಸುತ್ತಾಡುತ್ತಿದ್ದಳು ಮತ್ತು ಸೋಮವಾರ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬಸ್ಥರು ಹುಡುಕಾಡಿದಾಗ ಆಕೆ ಪತ್ತೆಯಾಗಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಆಕೆಯ ಮೃತದೇಹ ಭತ್ತದ ಗದ್ದೆಯಲ್ಲಿ ಪತ್ತೆಯಾಗಿದೆ. ಆಕೆಯ ದೇಹದ ಕೆಲವು ಭಾಗಗಳನ್ನು ನಾಯಿಗಳು ತಿಂದು ಹಾಕಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹಾಗೆಯೇ ಈ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಒಂದು ವರ್ಷದ ಹಿಂದೆ ಹಸುವನ್ನು ಮತ್ತು ಎಂಟು ತಿಂಗಳ ಹಿಂದೆ ಮೇಕೆಯನ್ನು ನಾಯಿಗಳು ಸೇರಿ ದಾಳಿ ನಡೆಸಿ ಕೊಂದು ಹಾಕಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ವರದಿಯ ಬಳಿಕ ಸಾವಿಗೆ ನಿಖರವಾಗಿ ಕಾರಣ ತಿಳಿದುಬರಲಿದೆ.
