ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪದಕ ಕಳವು ಮಾಡಿದ್ದಾರೆ. ಸ್ಮರಣಿಕೆಗಳನ್ನೂ ಕದ್ದಿದ್ದಾರೆ ಎಂದು ಮಾಜಿ ಈಜುಗಾರ್ತಿ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬುಲಾ ಚೌಧರಿ ಆರೋಪಿಸಿದ್ದಾರೆ.
ದಕ್ಷಿಣ ಏಷ್ಯಾ ಫೆಡರೇಶನ್ (SAF) ಕ್ರೀಡಾಕೂಟದಲ್ಲಿ ಆರು ಬಾರಿ ಚಿನ್ನದ ಪದಕ ವಿಜೇತೆ ಚೌಧರಿ, “ನಾನು ಜೀವನದಲ್ಲಿ ಪಡೆದ ಎಲ್ಲವನ್ನೂ ಕಳೆದುಕೊಂಡೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪದ್ಮಶ್ರೀ ಪ್ರಶಸ್ತಿ ಹಿಂತಿರುಗಿಸಿ ಪ್ರಧಾನಿಗೆ ಪತ್ರ ಬರೆದ ಬಜರಂಗ್ ಪೂನಿಯ
“ನನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ನನ್ನ ಇಡೀ ಜೀವನದಲ್ಲಿ ಗಳಿಸಿದ ಎಲ್ಲವನ್ನೂ ಕಳ್ಳರು ಕದ್ದಿದ್ದಾರೆ. ಎಸ್‌ಎಎಫ್ ಕ್ರೀಡಾಕೂಟದಲ್ಲಿ ನಾನು ಗೆದ್ದ ಆರು ಚಿನ್ನದ ಪದಕಗಳು ಮತ್ತು ಪದ್ಮಶ್ರೀ ಪದಕ ಸೇರಿದಂತೆ ಎಲ್ಲಾ ಪದಕಗಳನ್ನು ಕದ್ದಿದ್ದಾರೆ” ಎಂದು ತಿಳಿಸಿದ್ದಾರೆ.
ಕಳ್ಳರು ಹಲವು ಸ್ಮರಣಿಕೆಗಳನ್ನು ಕದ್ದಿದ್ದಾರೆ ಆದರೆ ಅರ್ಜುನ ಪ್ರಶಸ್ತಿ ಮತ್ತು ಟೆನ್ಸಿಂಗ್ ನಾರ್ಗೆ ಪ್ರಶಸ್ತಿ ಪದಕಗಳನ್ನು ಬಿಟ್ಟು ಹೋಗಿದ್ದಾರೆ. ಅವು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಅದನ್ನು ನೋಡಿಲ್ಲ ಅನಿಸುತ್ತದೆ ಎಂದು ಚೌಧರಿ ಹೇಳಿದ್ದಾರೆ.
“ಅವರು ಪದಕಗಳನ್ನು ಏಕೆ ತೆಗೆದುಕೊಳ್ಳುತ್ತಾರೆ? ಅದರಿಂದ ಹಣ ಸಿಗುವುದಿಲ್ಲ. ಅವುಗಳು ನನ್ನ ಜೀವನದ ಸಂಪತ್ತು, ನನ್ನ ವೃತ್ತಿಜೀವನದ ಫಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ದಿನದಂದು ಚೌಧರಿಯವರು ತಮ್ಮ ಸಹೋದರ ಹಿಂದ್‌ಮೋಟರ್‌ನಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂದಿನ ಗೇಟ್ ಮುರಿದು ಕೊಠಡಿಗೆ ನುಗ್ಗಿ ಲೂಟಿ ಮಾಡಲಾಗಿದೆ.
