ಸಾವಯವ ಕೃಷಿಗೆ ಹೆಚ್ಚು ಉತ್ತೇಜನ ನೀಡಿ ಹೆಸರುವಾಸಿಯಾದ ಪದ್ಮಶ್ರೀ ಪುರಸ್ಕೃತೆ ಕಮಲಾ ಪೂಜಾರಿ ಶನಿವಾರ ಬೆಳಗ್ಗೆ 5.45ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕಮಲಾ ಗುರುವಾರದಿಂದ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
74 ವರ್ಷದ ಕಮಲಾ ಪೂಜಾರಿ ಅವರು ಜ್ವರ ಮತ್ತು ವಯೋಸಹಜ ಕಾಯಿಲೆಯಿಂದ ಮಂಗಳವಾರ ಕೊರಾಪುಟ್ ಜಿಲ್ಲೆಯ ಜೇಪೋರ್‌ನಲ್ಲಿರುವ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಗುರುವಾರ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಕಮಲಾ ಪೂಜಾರಿ ಒಡಿಶಾದ ಪರಾಜ ಬುಡಕಟ್ಟು ಸಮುದಾಯದವರಾಗಿದ್ದಾರೆ. ಒಡಿಶಾದ ಜೇಪೋರ್ ಬ್ಲಾಕ್‌ನ ಪತ್ರಾಪುಟ್ ಗ್ರಾಮದವರಾದ ಪೂಜಾರಿ ಕೃಷಿ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ 2019ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ನೂರಾರು ಸ್ಥಳೀಯ ಭತ್ತದ ತಳಿಗಳನ್ನು ಸಂರಕ್ಷಿಸುವಲ್ಲಿ ಕಮಲಾ ಪೂಜಾರಿ ಹೆಸರುವಾಸಿಯಾಗಿದ್ದಾರೆ.
ಇದನ್ನು ಓದಿದ್ದೀರಾ? ಎರಡು ವರ್ಷದ ಹಿಂದೆ ಪದ್ಮಶ್ರೀ ಪ್ರಶಸ್ತಿ ಪಡೆದ ಕಲಾವಿದ ಇಂದು ದಿನಗೂಲಿ ನೌಕರ
2002ರಲ್ಲಿ ಕಮಲಾ ಪೂಜಾರಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಈಕ್ವಟರ್ ಇನಿಶಿಯೇಟಿವ್ ಪ್ರಶಸ್ತಿಯನ್ನು ಪಡೆದಿದ್ದಾರೆ.
We lost a rare talent of the state today morning. Padmashree Kamala Pujari is no more. Passed away @70 after a cardiac arrest at 5.45 am. 🙏🙏 pic.twitter.com/6Setjj6fs7
— Prof Jayant Panda (@DrJayantKPanda) July 20, 2024
ಕಮಲಾ ಪೂಜಾರಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಕೋರಾಪುಟ್ ಜಿಲ್ಲಾಧಿಕಾರಿ ಕೀರ್ತಿ ವಾಸನ್ ವಿ, “ಪೂಜಾರಿ ಅವರ ಕುಟುಂಬ ಸದಸ್ಯರಿಗೆ ತಿಳಿಸಲಾಗಿದ್ದು, ಕುಟುಂಬದವರ ಇಚ್ಛೆ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಅಂತ್ಯಕ್ರಿಯೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು” ಎಂದು ತಿಳಿಸಿದ್ದಾರೆ.
“ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರ ಅಂತ್ಯಸಂಸ್ಕಾರಕ್ಕೆ ಯಾವುದೇ ನಿರ್ದಿಷ್ಟ ಮಾರ್ಗಸೂಚಿಯಿಲ್ಲ. ಸರ್ಕಾರದ ನಿರ್ದೇಶನದಂತೆ ವ್ಯವಸ್ಥೆ ಮಾಡಲಾಗುವುದು” ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಕಮಲಾ ಪೂಜಾರಿ ನಿಧನಕ್ಕೆ ಮುಖ್ಯಮಂತ್ರಿ ಮೋಹನ್ ಮಾಝಿ ಸಂತಾಪ ಸೂಚಿಸಿದ್ದಾರೆ. “ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಅವರ ಕೊಡುಗೆಯನ್ನು ರಾಜ್ಯ ಮತ್ತು ದೇಶ ಮರೆಯಲು ಸಾಧ್ಯವಿಲ್ಲ. ದೇಶಿ ತಳಿಯ ಭತ್ತ ಹಾಗೂ ಇತರೆ ಧಾನ್ಯಗಳನ್ನು ಸಂರಕ್ಷಿಸುವ ನಿಸ್ವಾರ್ಥ ಕಾರ್ಯ ಶ್ಲಾಘನೀಯ” ಎಂದರು.