ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಲು ಹಾಗೂ ಭಯೋತ್ಪಾದನೆ ವಿರುದ್ಧದ ಕ್ರಮಗಳ ಕುರಿತು ಚರ್ಚಿಸಲು ಸಂಸತ್ ವಿಶೇಷ ಅಧಿವೇಶನ ಕರೆಯಬೇಕೆಂಬ ಆಗ್ರಹಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ, ಮಿತ್ರಪಕ್ಷಗಳು ಮತ್ತು ವಿಪಕ್ಷಗಳ ಸಲಹೆಗಳನ್ನು ಪಡೆಯಲು ಮತ್ತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವರದಿಯಾಗಿದೆ.
ಶುಕ್ರವಾರ ಪಹಲ್ಗಾಮ್ ದಾಳಿಯ ಬಗ್ಗೆ ಮಾತನಾಡಿದ್ದ ಹಿರಿಯ ವಕೀಲ, ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, “ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಇಡೀ ಜಗತ್ತಿಗೆ ಒಗ್ಗಟ್ಟಿನ ಸಂದೇಶ ಸಾರಬೇಕಿತ್ತು. ಅದಕ್ಕಾಗಿ, ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕು ಮತ್ತು ದೇಶದ ಭಾವನೆಯನ್ನು ವಿಶ್ವದ ಮುಂದೆ ವ್ಯಕ್ತಪಡಿಸಲು ಸಂಸತ್ತಿನಲ್ಲಿ ಸರ್ವಾನುಮತದಿಂದ ನಿರ್ಣಯವನ್ನು ಅಂಗೀಕರಿಸಬೇಕು” ಎಂದು ಒತ್ತಾಯಿಸಿದ್ದರು.
“ಸರ್ಕಾರ ಮತ್ತು ವಿಪಕ್ಷಗಳ ಸಂಸದರ ನಿಯೋಗಗಳನ್ನು ರಚಿಸಿ, ಆ ನಿಯೋಗಗಳನ್ನು ವಿವಿಧ ದೇಶಗಳಿಗೆ ಕಳಿಸಿ, ಪಾಕಿಸ್ತಾನದ ಮೇಲೆ ರಾಜತಾಂತ್ರಿಕ ಒತ್ತಡ ಹೇರಬೇಕಿದೆ. ಅಮೆರಿಕ ನಿರ್ಬಂಧ ವಿಧಿಸಿರುವ ರೀತಿಯಲ್ಲಿ ಪಾಕಿಸ್ತಾನಕ್ಕೆ ಭಾರತ ನಿರ್ಬಂಧ ಹೇರಬೇಕು. ಜೊತೆಗೆ, ಪಾಕಿಸ್ತಾನನೊಂದಿಗೆ ವ್ಯಾಪಾರ ವ್ಯವಹಾರ ಇರುವ ಎಲ್ಲ ಪ್ರಮುಖ ರಾಷ್ಟ್ರಗಳಿಗೂ ನಮ್ಮ ಮಾರುಕಟ್ಟೆಗೆ ಬರಲು ಸಾಧ್ಯವಿಲ್ಲ ಎಂಬ ಸಂದೇಶ ರವಾನಿಸಬೇಕಿದೆ” ಎಂದು ಆಗ್ರಹಿಸಿದ್ದರು.
ಸಿಬಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಸರ್ಕಾರ ಈ ಬಗ್ಗೆ ಚಿಂತನೆ ನಡೆಸಲಿದೆ ಎಂದಿದ್ದಾರೆ. “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾಮೂಹಿಕ ಏಕತೆಯನ್ನು ಬಯಸುತ್ತಾರೆ. ಅವರು ಸಾಮೂಹಿಕ ಏಕತೆಯೊಂದಿಗೆ ರಾಷ್ಟ್ರಕ್ಕಾಗಿ ಕಾರ್ಯನಿರ್ವಹಿಸುವ ಗುರಿ ಹೊಂದಿದ್ದಾರೆ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಬಿಕ್ಕಟ್ಟಿನ ಕಾರಣದಿಂದಾಗಿ, ಸರ್ಕಾರ ಇದನ್ನು ಪರಿಗಣಿಸುವ ಸಾಧ್ಯತೆ ಇದೆ” ಎಂದು ಹೇಳಿರುವುದಾಗಿ ವರದಿಯಾಗಿದೆ.
ಸರ್ಕಾರವು ವಿಶೇಷ ಅಧಿವೇಶನ ಕರೆಯಲು ಶೀಘ್ರವೇ ದಿನಾಂಕ ನಿಗದಿ ಮಾಡಲಾಗಿದೆ. ರಾಷ್ಟ್ರಪತಿಗಳ ಅನುಮೋದನೆ ಪಡೆದು, ಅಧಿವೇಶನ ಕರೆಯಲಿದೆ ಎಂದು ಬಿಜೆಪಿ ಹೇಳಿರುವುದಾಗಿ ತಿಳಿದುಬಂದಿದೆ.