‘ನನಗೀಗ ಕಾಶ್ಮೀರದಲ್ಲಿ ಇಬ್ಬರು ಸಹೋದರಿದ್ದಾರೆ. ಅಲ್ಲಾಹು ಅವರನ್ನು ಅನುಗ್ರಹಿಸಲಿ’ ಎಂದು ಪಹಲ್ಗಾಮ್‌ನಿಂದ ತನ್ನೂರಿಗೆ ಮರಳಿರುವ ಕೇರಳದ ಕೊಚ್ಚಿಯ ಆರತಿ ಆರ್ ಮೆನನ್ ಪ್ರಾರ್ಥಿಸಿದ್ದಾರೆ.
ಮಂಗಳವಾರ, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಆರತಿ ತನ್ನ ತಂದೆ ಎನ್. ರಾಮಚಂದ್ರನ್ ಅವರನ್ನು ಕಳೆದುಕೊಂಡಿದ್ದಾರೆ. ತಂದೆಯನ್ನು ಕಳೆದುಕೊಂಡು ದಿಕ್ಕು ಕಾಣದಂತಾಗಿದ್ದ ಆರತಿ ಅವರಿಗೆ ಇಬ್ಬರು ಸ್ಥಳೀಯ ಮುಸ್ಲಿಮರು ನೆರವು ನೀಡಿದ್ದಾರೆ. ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಕರೆತಂದಿದ್ದಾರೆ. ಇದೀಗ, ಆರತಿ ಕೊಚ್ಚಿಗೆ ಮರಳಿದ್ದು, ಅಲ್ಲಿ ತಾವು ಎದುರಿಸಿದ ಸಂದರ್ಭದ ಬಗ್ಗೆ ಹಂಚಿಕೊಂಡಿದ್ದಾರೆ.
“ಇಬ್ಬರು ಕಾಶ್ಮೀರಿ ಮುಸ್ಲಿಮರು ನನ್ನನ್ನು ಸಹೋದರಿಯಂತೆ ನೋಡಿಕೊಂಡು ನನಗೆ ಬಹಳಷ್ಟು ಸಹಾಯ ಮಾಡಿದರು. ಈಗ ನನಗೆ ಕಾಶ್ಮೀರದಲ್ಲಿ ಇಬ್ಬರು ಸಹೋದರರು ಇದ್ದಾರೆ. ಅಲ್ಲಾಹನು ಅವರಿಬ್ಬರನ್ನೂ ರಕ್ಷಿಸಲಿ” ಎಂದು ಭಾವುಕರಾಗಿ ಹೇಳಿದ್ದಾರೆ.
”ನಾನು ನನ್ನ ತಂದೆ ಮತ್ತು ಮಕ್ಕಳೊಂದಿಗೆ ಬೈಸರನ್‌ನ ಹುಲ್ಲುಗಾವಲಿನ ಮೂಲಕ ನಡೆದುಕೊಂಡು ಹೋಗುತ್ತಿದ್ದಾಗ ಉಗ್ರರು ದಾಳಿ ಮಾಡಿದರು. ಮೊದಲಿಗೆ ಅದು ಪಟಾಕಿ ಎಂದು ನಾವು ಭಾವಿಸಿದ್ದೆವು… ಆದರೆ ಮುಂದಿನ ಗುಂಡೇಟಿನೊಂದಿಗೆ, ಅದು ಭಯೋತ್ಪಾದಕ ದಾಳಿ ಎಂಬುದು ತಿಳಿಯಿತಿ…” ಎಂದು ಆರತಿ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ನಾವು ತಪ್ಪಿಸಿಕೊಳ್ಳಲು ಬೇಲಿಯ ಕೆಳಗೆ ತೆವಳಿದೆವು. ಜನರು ಎಲ್ಲ ದಿಕ್ಕುಗಳಲ್ಲಿಯೂ ಚದುರಿಹೋದರು. ನಾವು ತಪ್ಪಿಕೊಂಡು ಹೋಗುವಾಗ, ಕಾಡಿನಿಂದ ಒಬ್ಬ ವ್ಯಕ್ತಿ ಹೊರಬಂದನು. ಅವನು ನಮ್ಮತ್ತ ನೇರವಾಗಿ ನೋಡಿದನು. ಆ ಅಪರಿಚಿತ ವ್ಯಕ್ತಿ ನಮಗೆ ಅರ್ಥವಾಗದ ಮಾತುಗಳನ್ನು ಹೇಳಿದರು. ನಮಗೆ ಗೊತ್ತಿಲ್ಲ ಎಂದು ನಾವು ಉತ್ತರಿಸಿದೆವು. ಮರುಕ್ಷಣವೇ ಅವನು ಗುಂಡು ಹಾರಿಸಿದ, ಈ ವೇಳೆ ನನ್ನ ತಂದೆ ನಮ್ಮ ಪಕ್ಕದಲ್ಲಿ ಕುಸಿದುಬಿದ್ದರು,” ಎಂದು ಆರತಿ ಹೇಳಿದ್ದಾರೆ.
“ನನ್ನ ಮಕ್ಕಳು ಕಿರುಚಲು ಪ್ರಾರಂಭಿಸಿದರು, ಮತ್ತು ಆ ವ್ಯಕ್ತಿ ಹೊರಟುಹೋದನು. ನನ್ನ ತಂದೆ ಮೃತಪಟ್ಟಿದ್ದಾರೆಂದು ನನಗೆ ತಿಳಿದಿತ್ತು. ನಾನು ಎಲ್ಲಿಗೆ ಹೋಗುತ್ತಿದ್ದೇನೆಂದು ತಿಳಿಯದೆ, ನನ್ನ ಅವಳಿ ಮಕ್ಕಳನ್ನು ಹಿಡಿದುಕೊಂಡು ಕಾಡಿಗೆ ಓಡಿಹೋದೆ. ಸುಮಾರು ಒಂದು ಗಂಟೆಗಳ ಕಾಲ ಅರಣ್ಯದ ಮೂಲಕ ಅಲೆದಾಡಿದೆ” ಎಂದು ಅವರು ವಿವರಿಸಿದ್ದಾರೆ.
“ಕೊನೆಗೆ ಫೋನ್‌ಗೆ ಸಿಗ್ನಲ್ ಸಿಕ್ಕಾಗ ಕಾಶ್ಮೀರದಲ್ಲಿ ನಮ್ಮನ್ನು ಪ್ರಯಾಣವನ್ನು ನಿರ್ವಹಿಸುತ್ತಿದ್ದ ನಮ್ಮ ಚಾಲಕ ಮುಸಾಫಿರ್‌ಗೆ ಕರೆ ಮಾಡಿದೆ. ಮುಸಾಫಿರ್ ಮತ್ತು ಇನ್ನೊಬ್ಬ ವ್ಯಕ್ತಿ ಸಮೀರ್ ನಮ್ಮ ಸಹಾಯಕ್ಕೆ ಧಾವಿಸಿದರು. ಅವರ ಕುಟುಂಬದವರಂತೆ ನಮ್ಮನ್ನು ನೋಡಿಕೊಂಡರು. ಈಗ ಅವರು ಅವರು ನನ್ನ ಸಹೋದರರು. ಅವರು ಎಲ್ಲದರಲ್ಲೂ ನನ್ನೊಂದಿಗೆ ನಿಂತರು. ನನ್ನನ್ನು ಶವಾಗಾರಕ್ಕೆ ಕರೆದೊಯ್ದರು, ಔಪಚಾರಿಕತೆಗಳಿಗೆ ಸಹಾಯ ಮಾಡಿದರು” ಎಂದು ತಿಳಿಸಿದ್ದಾರೆ.
ತನ್ನ ತಂದೆ ರಾಮಚಂದ್ರನ್ ಅವರ ಜೀವವನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಯ ನಂತರ ತನ್ನ ತಂದೆಯ ದೇಹವನ್ನು ಕೊಚ್ಚಿಗೆ ಮರಳಿ ತರುವ ಜವಾಬ್ದಾರಿಯನ್ನು ಅರತಿ ವಹಿಸಿಕೊಂಡರು. ಆದರೆ ಅವರ ತಾಯಿಗೆ ಈ ದುರಂತದ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. “ನಾನು ಬಲಶಾಲಿಯಂತೆ ನಟಿಸಬೇಕಾಗಿತ್ತು” ಎಂದು ಅವರು ಹೇಳಿದ್ದಾರೆ.
“ನನ್ನ ತಾಯಿ ಮತ್ತು ಮಕ್ಕಳನ್ನು ನಾನು ನಿರ್ವಹಿಸಬೇಕಾಗಿರುವುದರಿಂದ ನಾನು ಕುಸಿದು ಹೋಗಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದ್ದಾರೆ. ರಾಮಚಂದ್ರನ್ ಗಾಯಗೊಂಡಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ತಮ್ಮ ತಾಯಿಗೆ ಹೇಳಿದ್ದಾಗಿ ಹೇಳಿಕೊಂಡಿದ್ದಾರೆ. “ಬುಧವಾರ ಸಂಜೆ ನಾವು ಕೊಚ್ಚಿಯಲ್ಲಿ ಇಳಿದ ನಂತರವೇ ನಾನು ಅವರಿಗೆ ಸತ್ಯವನ್ನು ಹೇಳಿದೆ” ಎಂದು ಅವರು ಹೇಳಿದ್ದಾರೆ.
ದುಬೈನಲ್ಲಿ ಕೆಲಸ ಮಾಡುತ್ತಿರುವ ಮತ್ತು ಪ್ರಸ್ತುತ ಭಾರತದಲ್ಲಿ ಅಲ್ಪಾವಧಿಗೆ ನೆಲೆಸಿರುವ ಆರತಿ ಅವರು ತಮ್ಮ ಕುಟುಂಬದ ಜೊತೆಗೆ ಕಾಶ್ಮೀರಕ್ಕೆ ರಜೆಯನ್ನು ಕಳೆಯಲು ಯೋಜಿಸಿದ್ದರು. ಅವರು ಏಪ್ರಿಲ್ 21 ರ ಸಂಜೆ ಕಣಿವೆಗೆ ಬಂದಿದ್ದರು. “ನಾನು ಆಗಾಗ್ಗೆ ಪ್ರವಾಸಗಳಿಗೆ ಹೋಗುತ್ತೇನೆ. ಆದರೆ ಕಾಶ್ಮೀರಕ್ಕೆ ಭೇಟಿ ನೀಡಿದ್ದು ಇದೇ ಮೊದಲು” ಎಂದು ಅವರು ಹೇಳಿದ್ದಾರೆ.