ಪಹಲ್ಗಾಮ್ ದಾಳಿಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆಯ ವರದಿಗೆ ತೆರಳಿದ್ದ ಪತ್ರಕರ್ತರೊಬ್ಬರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಭದ್ರತಾ ಲೋಪದ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತ್ರಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.
ದೈನಿಕ್ ಜಾಗರಣ್ ಪತ್ರಿಕೆಯ ವರದಿಗಾರ ರಾಕೇಶ್ ಶರ್ಮಾ ಮತ್ತು ಇತರ ಪತ್ರಕರ್ತರು ವರದಿಗಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳಿದ್ದರು. ಈ ವೇಳೆ, “ಜಮ್ಮು-ಕಾಶ್ಮೀರದ ಭದ್ರತಾ ವ್ಯವಸ್ಥೆಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಮಂಗಳವಾರ ನಡೆದ ಭಯೋತ್ಪಾದಕ ದಾಳಿಗೆ ಭದ್ರತಾ ಲೋಪಗಳೂ ಕಾರಣವಲ್ಲವೇ. ಉಗ್ರಗಾಮಿಗಳ ಚಲನವಲನ ಮತ್ತು ಗಡಿಯಾಚೆಯಿಂದ ಒಳನುಸುಳುವಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆಯೇ” ಎಂದು ರೇಕೇಶ್ ಶರ್ಮಾ ಪ್ರಶ್ನಿಸಿದ್ದಾರೆ. ಅವರ ಪ್ರಶ್ನೆಯಿಂದ ಬಿಜೆಪಿ ಶಾಸಕರು ಸೇರಿದಂತೆ ಪಕ್ಷದ ಕಾರ್ಯಕರ್ತರು ಕುಪಿತಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಹಿಮಾನ್ಶು ಶರ್ಮಾ, ರವೀಂದರ್ ಸಿಂಗ್, ಅಶ್ವನಿ ಶರ್ಮಾ, ಮಂಜಿತ್ ಸಿಂಗ್, ಟೋನಿ ಮತ್ತು ಪರ್ವೀನ್ ಚುನಾ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಿಜೆಪಿ ಶಾಸಕರಾದ ದೇವಿಂದರ್ ಮಾನ್ಯಲ್, ರಾಜೀವ್ ಜಸ್ರೋಟಿಯಾ ಮತ್ತು ಭರತ್ ಭೂಷಣ್ ಕೂಡ ಹಾಜರಿದ್ದರು.
A journalist from Kathua worked with @JagranNews Rakesh Sharma said he was thrashed and slapped by BJP workers during a protest at Kalibari Chowk in #Kathua, Now he was admitted at GMC Kathua for treatment on The incident has sparked outrage and raised concerns about press… pic.twitter.com/dLg9Wtx5nl
— Harpreet Singh Sethi (@Harpreetsethi95) April 23, 2025
ಪತ್ರಕರ್ತರು ಪ್ರಶ್ನೆ ಕೇಳಿದ್ದಕ್ಕಾಗಿ, ಅವರನ್ನು ‘ಪ್ರತ್ಯೇಕವಾದಿಗಳು’ ಎಂದು ಬಿಜೆಪಿ ಮುಖಂಡ ಹಿಮಾನ್ಶು ಶರ್ಮಾ ಬಣ್ಣಿಸಿದ್ದಾರೆ.
ಹಲ್ಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಪತ್ರಕರ್ತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಪಕ್ಷವು ಕ್ರಮ ಕೈಗೊಳ್ಳುವವರೆಗೂ ಪಕ್ಷದ ಯಾವುದೇ ಕಾರ್ಯಕ್ರಮವನ್ನು ವರದಿ ಮಾಡುವುದಿಲ್ಲ. ಬಹಿಷ್ಕರಿಸುತ್ತೇವೆ ಎಂದು ಜಮ್ಮು-ಕಾಶ್ಮೀರ ಪತ್ರಕರ್ತರು ಘೋಷಿಸಿದ್ದಾರೆ.