ಇದು ರಾಜಕೀಯ ಮಾಡುವ ಸಮಯವಲ್ಲ. ಮೃತಪಟ್ಟ ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರವಾಸಿಗರ ಹತ್ಯೆಯನ್ನು ಖಂಡಿಸಿದರು. ಉಗ್ರರು ಪ್ರವಾಸಿಗರನ್ನು ಹತ್ಯೆ ಮಾಡಿರುವ ದುರದೃಷ್ಟಕರ ಘಟನೆ ನಡೆದಿದೆ. ಉಗ್ರರು ಅಮಾಯಕರನ್ನ ಕೊಂದಿದ್ದಾರೆ. ಇದು ತುಂಬಾ ದುಃಖಕರ ಸಂಗತಿ, ಕಾಂಗ್ರೆಸ್ ಪಕ್ಷ ಉಗ್ರರ ಈ ಕೃತ್ಯವನ್ನು ಉಗ್ರವಾಗಿ ಖಂಡಿಸುತ್ತದೆ. ಈ ಘಟನೆ ದೇಶದ ಒಗ್ಗಟ್ಟು, ಐಕ್ಯತೆ ಮೇಲಿನ ದಾಳಿ ಎಂದಿದ್ದಾರೆ.
ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಹಾಗೂ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರೊಂದಿಗೆ ಮಾತನಾಡಿದ್ದೇನೆ. ಜಮ್ಮು ಮತ್ತು ಕಾಶ್ಮೀರದ ನಾಯಕರ ಜೊತೆಯೂ ಮಾತಾಡಿದ್ದೇನೆ. ಯಾರು ಈ ಕೃತ್ಯದ ಹಿಂದಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಅಮಿತ್ ಶಾ ಹೇಳಿದ್ದಾರೆ. ಇದು ರಾಜಕೀಯ ಮಾಡುವ ಸಮಯ ಅಲ್ಲ. ಮೃತಪಟ್ಟ ಅಮಾಯಕರಿಗೆ ನ್ಯಾಯ ಕೊಡಿಸುವ ಸಮಯ. ಹಾಗಾಗಿ ಈ ವಿಚಾರದಲ್ಲಿ ಒಟ್ಟಾಗಿ ಹೋರಾಡಬೇಕು ಎಂದು ಖರ್ಗೆ ಹೇಳಿದ್ದಾರೆ.
ಕರ್ನಾಟಕದ ಮಂಜುನಾಥ್ ರಾವ್, ಭರತ್ ಭೂಷಣ್ ಮೃತರಾಗಿದ್ದಾರೆ. ಅವರ ಪತ್ನಿಯರಾದ ಪಲ್ಲವಿ, ಸುಜಾತ ಅವರೊಂದಿಗೆ ಮಾತನಾಡಿದ್ದೇನೆ. ಘಟನಾ ಸ್ಥಳಕ್ಕೆ ಸಂತೋಷ್ ಲಾಡ್ ಕೂಡ ಹೋಗಿದ್ದಾರೆ. ಅವರ ಜೊತೆಯೂ ಮಾತನಾಡಿದ್ದೇನೆ. ಕರ್ನಾಟಕದಿಂದ 200 ಪ್ರವಾಸಿಗರು ಹೋಗಿದ್ದಾರೆ ಎನ್ನಲಾಗಿದೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಸರ್ಕಾರ ಕ್ರಮ ಕೈಗೊಂಡಿದೆ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ-ಜನಿವಾರಕ್ಕೆ ಜೋತುಬಿದ್ದ ‘ಜಾತ್ಯತೀತ’ ಸರ್ಕಾರ
ಘಟನೆಯ ಬಗ್ಗೆ ಒಮರ್ ಅಬ್ದುಲ್ಲಾ ಅವರ ಜೊತೆಯೂ ಮಾತಾಡಿದ್ದೇನೆ. ಕೇಂದ್ರ ಸರ್ಕಾರದ ಜವಾಬ್ದಾರಿಯೂ ಹೆಚ್ಚಿದೆ. ಉಗ್ರರನ್ನು ಬಗ್ಗುಬಡಿಯಬೇಕು. ಮೃತರಿಗೆ ಸಂತಾಪ ಸೂಚಿಸುತ್ತೇವೆ. ಕಾಂಗ್ರೆಸ್ ಪಕ್ಷ ಕುಟುಂಬದವರ ಜೊತೆ ಇದೆ. ಇದು ಭಾರತದ ಮೇಲಿನ ನೇರ ದಾಳಿಯಾಗಿದೆ. ಪಾಕಿಸ್ತಾನಿ ಪ್ರಾಯೋಜಿತ ಉಗ್ರ ಚಟುವಟಿಕೆಗಳನ್ನ ಬಗ್ಗು ಬಡಿಯಬೇಕು ಎಂದು ಹೇಳಿದ್ದಾರೆ.
ಕಾಶ್ಮೀರದಲ್ಲಿ ಪ್ರವಾಸಿಗರಿಗೆ ರಕ್ಷಣೆ ಒದಗಿಸಬೇಕು. ಕೇಂದ್ರ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಅಮರನಾಥ ಯಾತ್ರೆಯ ಭದ್ರತೆ ಕೂಡಾ ಬಿಗಿ ಮಾಡಬೇಕು. ಉಗ್ರರ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರ್ಕಾರದ ಜೊತೆ ನಾವು ಇರುತ್ತೇವೆ. ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯಲಿ. ಇದು ರಾಜಕೀಯ ಮಾಡಲು ಅಲ್ಲ. ಆದರೆ ಎಲ್ಲರಿಂದಲೂ ಸಲಹೆ ಪಡೆಯಿರಿ. ಎಲ್ಲರೂ ಒಂದಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ಖರ್ಗೆ ತಿಳಿಸಿದ್ದಾರೆ.