ಪಾಕ್-ಅಫ್ಘಾನ್ ಯುದ್ಧ | ಕಾರಣವೇನು? ಉಭಯ ರಾಷ್ಟ್ರಗಳ ಸವಾಲುಗಳೇನು?

Date:

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ದಶಕಗಳಿಂದ ಹೊಗೆಯಾಡುತ್ತಿದ್ದ ಉದ್ವಿಗ್ನತೆಯು ಈಗ ವಿವಾದಿತ ‘ಡ್ಯುರಾಂಡ್ ಲೈನ್’ ಗಡಿಯಲ್ಲಿ ಸಂಘರ್ಷವಾಗಿ ಸ್ಫೋಟಗೊಂಡಿದೆ. ಒಂದು ಕಾಲದಲ್ಲಿ ಪರಸ್ಪರರ ವಿರುದ್ಧ ಗುಪ್ತ ತಂತ್ರಗಳನ್ನು ಬಳಸುತ್ತಿದ್ದ ಈ ಪ್ರದೇಶವು, ಈಗ ಉಭಯ ರಾಷ್ಟ್ರಗಳ ನಡುವಿನ ಹಗೆತನಕ್ಕೆ ಸಾಕ್ಷಿಯಾಗಿದೆ. ಫೆಬ್ರವರಿ 21ರಂದು ಪಾಕಿಸ್ತಾನವು ನಂಗರ್‌ಹಾರ್, ಪಕ್ತಿಯಾ ಹಾಗೂ ಖೋಸ್ಟ್‌ನಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ತಾನು ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ (TTP) ಮತ್ತು ಐಸಿಸ್-ಕೆ (ISIS-K) ಗುಂಪುಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿಕೊಂಡಿತು. ಇದಕ್ಕೆ ಪ್ರತಿಯಾಗಿ, ಫೆಬ್ರವರಿ 26ರಂದು ಅಫ್ಘಾನ್‌ ಪಾಕಿಸ್ತಾನದ ಆರು ಪ್ರಾಂತ್ಯಗಳ ಮೇಲೆ ಭೂಸೇನಾ ದಾಳಿ ನಡೆಸಿತು. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ‘ನಮ್ಮ ತಾಳ್ಮೆಯ ಅಣೆಕಟ್ಟು ಒಡೆದಿದೆ’ ಎಂದು ಘೋಷಿಸಿದರು. ‘ಆಪರೇಷನ್ ಘಜಬ್ ಲಿಲ್ ಹಕ್’ ಮೂಲಕ ಕಾಬೂಲ್ ಮತ್ತು ಕಂದಹಾರ್ ಮೇಲೆ ದಾಳಿಗಳನ್ನು ತೀವ್ರಗೊಳಿಸಿದರು.

- Advertisement -

ಉಭಯ ರಾಷ್ಟ್ರಗಳ ನಡುವಿನ ಸಂಘರ್ಷದಲ್ಲಿನ ಹಾನಿಯ ಅಂಕಿಅಂಶಗಳು ವಿವಾದಾಸ್ಪದವಾಗಿವೆ. 274 ತಾಲಿಬಾನ್ ಹೋರಾಟಗಾರರು ಹತರಾಗಿದ್ದಾರೆ ಮತ್ತು ತನ್ನ 12 ಸೈನಿಕರು ಮೃತಪಟ್ಟಿದ್ದಾರೆ ಎಂದು ಪಾಕ್ ಹೇಳಿದರೆ, 55 ಪಾಕಿಸ್ತಾನಿ ಸೈನಿಕರು ಸತ್ತಿದ್ದಾರೆ ಮತ್ತು ತನ್ನ 13 ತಾಲಿಬಾನಿಗಳು ಮೃತಪಟ್ಟಿದ್ದಾರೆ ಎಂದು ಅಫ್ಘಾನ್ ಹೇಳಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಆದರೆ, ಈ ಅಂಕಿಅಂಶಗಳು ಮತ್ತು ಗಡಿ ಸಮಸ್ಯೆಯ ಬಿಕ್ಕಟ್ಟನ್ನು ಕೇವಲ ಸಣ್ಣ ಹಿಂಸಾಚಾರ ಎಂದು ಪರಿಗಣಿಸಲಾಗದು. ಯಾಕೆಂದರೆ, ಈ ಸಂಘರ್ಷವು 1893ರಲ್ಲಿ ರೂಪುಗೊಂಡ 2,600 ಕಿ. ಮೀ. ಉದ್ದದ ‘ಡ್ಯುರಾಂಡ್ ಲೈನ್’ ಗಡಿಯೊಂದಿಗೆ ಬೆಸೆದುಕೊಂಡಿದೆ. ಈ ಗಡಿರೇಖೆಯನ್ನು ಅಫ್ಘಾನಿಸ್ತಾನದ ಯಾವುದೇ ಸರ್ಕಾರಗಳು ಈವರೆಗೆ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಈ ರೇಖೆಯು ಪಶ್ತೂನ್ ಬುಡಕಟ್ಟು ಭೂಮಿಯನ್ನು ಇಬ್ಭಾಗ ಮಾಡಿದ್ದು, ಪೂರ್ಣ ಪಶ್ತೂನ್ ಪ್ರದೇಶವು ಅಫ್ಘಾನ್‌ಗೆ ಸೇರಬೇಕೆಂದು ಅಫ್ಘಾನಿಸ್ತಾನವು ವಾದಿಸುತ್ತಿದೆ.

ತಾನೇ ಬೆಳೆಸಿದ ತಾಲಿಬಾನ್‌, 2021ರಲ್ಲಿ ಅಫ್ಘಾನ್‌ ಅಧಿಕಾರವನ್ನು ಕಸಿಡುಕೊಂಡಾಗ, ತನಗೆ ಅನುಕೂಲವಾಗುತ್ತದೆ ಎಂದು ಪಾಕಿಸ್ತಾನ ಭಾವಿಸಿತ್ತು. ಅಫ್ಘಾನ್ ತಾಲಿಬಾನ್‌ನೊಂದಿಗೆ ಸೈದ್ಧಾಂತಿಕ ಭಿನ್ನತೆ ಹೊಂದಿರುವ ಟಿಟಿಪಿಯನ್ನು (TTP) ಅಫ್ಘಾನ್‌ ಆಡಳಿತ ಹತ್ತಿಕ್ಕುತ್ತದೆ ಎಂದು ಪಾಕಿಸ್ತಾನ ನಿರೀಕ್ಷಿಸಿತ್ತು.  ಆದರೆ, ಟಿಟಿಪಿ ವಿರುದ್ಧ ಅಫ್ಘಾನ್ ತಾಲಿಬಾನ್ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲ. ಬದಲಾಗಿ, ಟಿಟಿಪಿಯೇ ಪಾಕಿಸ್ತಾನದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿತು. ಪರಿಣಾಮ, 2025ರಲ್ಲೇ 2,400ಕ್ಕೂ ಹೆಚ್ಚು ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಹತರಾಗಿದ್ದಾರೆ. ಇದು ಕಳೆದ ದಶಕದಲ್ಲೇ ಸಂಭವಿಸಿದ ಗರಿಷ್ಠ ಸಾವು-ನೋವಾಗಿದೆ. ಈ ಬೆನ್ನಲ್ಲೇ, ತಾಲಿಬಾನ್ ಮೇಲಿನ ತನ್ನ ಪ್ರಭಾವ ಕುಸಿಯುತ್ತಿದೆ ಎಂಬ ಆತಂಕ ಪಾಕಿಸ್ತಾನವನ್ನು ಕಾಡುತ್ತಿದೆ.

ಪಾಕಿಸ್ತಾನದ ಇಸ್ಲಾಮಾಬಾದ್, ಬಜೌರ್ ಹಾಗೂ ಬನ್ನೂನಲ್ಲಿ ನಡೆದ ಇತ್ತೀಚಿನ ದಾಳಿಗಳು ಪಾಕ್-ಅಫ್ಘಾನ್‌ ಸಂಘರ್ಷಕ್ಕೆ ಕಿಚ್ಚು ಹಚ್ಚಿವೆ. ಈ ದಾಳಿಗಳು ಅಫ್ಘಾನಿಸ್ತಾನ ಮೂಲದ ಉಗ್ರರಿಂದ ನಡೆದಿವೆ ಎಂದು ಪಾಕಿಸ್ತಾನ ದೂರಿದೆ. ಉಭಯ ರಾಷ್ಟ್ರಗಳ ನಡುವೆ 2025ರ ಅಕ್ಟೋಬರ್‌ನಲ್ಲಿ ಪ್ರಾದೇಶಿಕ ಮಧ್ಯಸ್ಥಿಕೆಯೊಂದಿಗೆ ನಡೆದ ಕದನ ವಿರಾಮ ಪ್ರಯತ್ನಗಳು ವಿಫಲವಾದವು. ಟಿಟಿಪಿ ವಿರುದ್ಧ ಕ್ರಮ ಕೈಗೊಳ್ಳಲು ತಾಲಿಬಾನ್ ಹಿಂಜರಿಯುತ್ತಿರುವುದಕ್ಕೆ ಪಶ್ತೂನ್ ಒಗ್ಗಟ್ಟು ಕುಸಿಯಬಹುದು ಮತ್ತು ತಮ್ಮವರು ಐಸಿಸ್-ಕೆ ಸೇರಬಹುದು ಎಂಬ ಭಯವೇ ಕಾರಣವಾಗಿದೆ.

ಈ ಲೇಖನ ಓದಿದ್ದೀರಾ?: ಇರಾನಿನ ಕ್ಷಿಪಣಿ ಶಕ್ತಿ ಪ್ರಚಂಡ; ಇಸ್ರೇಲ್ ಈಗಾಗಲೇ ರುಚಿ ಕಂಡಿದೆ

ಇದರ ಜೊತೆಗೆ ಭೌಗೋಳಿಕ ರಾಜಕೀಯ ಬದಲಾವಣೆಗಳೂ ಸೇರಿವೆ. ಅಫ್ಘಾನಿಸ್ತಾನವು ‘ಭಾರತದ ವಸಾಹತು’ ಆಗಿ ಬದಲಾಗುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಕಳೆದ ವರ್ಷ, ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ನವದೆಹಲಿಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ, ಭಯೋತ್ಪಾದನೆಯನ್ನು ಖಂಡಿಸಿ ಭಾರತ-ಅಫ್ಘಾನ್‌ ಜಂಟಿ ಹೇಳಿಕೆ ನೀಡಿದವು. ಇದು ಪಾಕಿಸ್ತಾನದ ಕೆಂಗಣ್ಣಿಗೆ ಕಾರಣವಾಗಿದೆ. ಕಾಬೂಲ್ ಮತ್ತು ನವದೆಹಲಿಯ ನಡುವಿನ ಈ ರಾಜತಾಂತ್ರಿಕ ಸ್ನೇಹವು ತನ್ನನ್ನು ಸುತ್ತುವರಿಯುವ ತಂತ್ರವೆಂದು ಪಾಕಿಸ್ತಾನ ಭಾವಿಸಿದೆ.

ಆದಾಗ್ಯೂ, ಈ ಸಂಘರ್ಷವು ಅಫ್ಘಾನಿಸ್ತಾನಕ್ಕೆ ಆರ್ಥಿಕ ತಕ್ಷಣವೇ ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ. ಯಾಕೆಂದರೆ, ಅಫ್ಘಾನಿಸ್ತಾನವು ವ್ಯಾಪಾರಕ್ಕಾಗಿ ಪಾಕಿಸ್ತಾನದ ಬಂದರುಗಳ ಮೇಲೆ ಅವಲಂಬಿತವಾಗಿದೆ. ಗಡಿ ಮುಚ್ಚುವುದರಿಂದ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳ್ಳುವ ಅಪಾಯವಿದೆ. ಟಿಎಪಿಐ (TAPI) ಗ್ಯಾಸ್ ಪೈಪ್‌ಲೈನ್‌ನಂತಹ ಬೃಹತ್ ಯೋಜನೆಗಳು ಅನಿಶ್ಚಿತತೆಗೆ ಸಿಲುಕಿವೆ. ಚೀನಾದ ಹೂಡಿಕೆಗಳು, ವಿಶೇಷವಾಗಿ ಸಿಪಿಇಸಿ (CPEC), ಭದ್ರತಾ ಭೀತಿಯನ್ನು ಎದುರಿಸುವ ಸಾಧ್ಯತೆಗಳಿವೆ.

ಜೊತೆಗೆ, ನಾಗರಿಕರ ಸಾವು-ನೋವು ಮತ್ತು ನಿರಾಶ್ರಿತರ ಸಮಸ್ಯೆ ಅಫ್ಘಾನಿಸ್ತಾನದ ಸಾಮಾಜಿಕ-ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ದೀರ್ಘಕಾಲದ ಅಸ್ಥಿರತೆಯು ಬಲೂಚಿ ಪ್ರತ್ಯೇಕತಾವಾದಿಗಳಿಗೆ ಮತ್ತು ಐಸಿಸ್-ಕೆ ಗುಂಪಿಗೆ ಬಲ ತುಂಬುವ ಸಾಧ್ಯತೆಗಳೂ ಇವೆ. ಆದರೂ, ಉಭಯ ರಾಷ್ಟ್ರಗಳ ನಡುವೆ ಪೂರ್ಣ ಪ್ರಮಾಣದ ಯುದ್ಧದ ಸಾಧ್ಯತೆ ಕಡಿಮೆ ಇದೆಯೆಂದೇ ಹೇಳಲಾಗುತ್ತಿದೆ. ಏಕೆಂದರೆ, ಅಫ್ಘಾನಿಸ್ತಾನಕ್ಕೆ ವಾಯುಪಡೆಯ ಬಲವಿಲ್ಲ ಮತ್ತು ಪಾಕಿಸ್ತಾನವು ಎರಡು ಕಡೆಗಳಲ್ಲಿ (ಭಾರತ ಮತ್ತು ಅಫ್ಘಾನ್) ಸಂಘರ್ಷವನ್ನು ಎದುರಿಸುವಷ್ಟು ಆರ್ಥಿಕ ಸ್ಥಿತಿಯಲ್ಲಿಲ್ಲ.

ಪಾಕಿಸ್ತಾನವು ತನ್ನ ಪಶ್ಚಿಮ ಗಡಿಯಲ್ಲಿ ಶಾಂತಿ ಬಯಸಿದರೆ, ಅದು ತನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳಬೇಕು. ಉಗ್ರಗಾಮಿಗಳನ್ನು ಬಳಸಿಕೊಳ್ಳುವ ತಂತ್ರವನ್ನು ಕೈಬಿಟ್ಟು, ಕಾಬೂಲ್‌ನೊಂದಿಗೆ ರಾಜಕೀಯ ಮಾತುಕತೆ ನಡೆಸಬೇಕು. ತನ್ನದೇ ದೇಶದ ಒಳಗಿರುವ ಮೂಲಭೂತವಾದದ ಬೇರುಗಳನ್ನು ಕಿತ್ತೊಗೆಯಬೇಕು. ಮುಖ್ಯವಾಗಿ, ಪಾಕಿಸ್ತಾನವು ಆತ್ಮಾವಲೋಕನ ಮಾಡಿಕೊಳ್ಳದ ಹೊರತು ತಾನೇ ಸೃಷ್ಟಿಸಿಕೊಂಡ ಈ ಅಸುರಕ್ಷತೆಯ ಚಕ್ರದಿಂದ ಹೊರಬರಲು ಸಾಧ್ಯವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಭಾವಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ ಬೆಳಗಿದ ರೋಚಕ ಕತೆ ಗೊತ್ತೇ?

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ...

‘ಲೆಹರಾ ದೋ ತಿರಂಗಾ’ ಮಾರ್ಚ್‌ಗೆ ಮುನ್ನ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ದೆಹಲಿ ಪೊಲೀಸರಿಂದ ವಶಕ್ಕೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಶುಕ್ರವಾರ...

ಸಿಎಂಆರ್‌ಎಲ್ ಲಂಚ ಪ್ರಕರಣ: ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್‌ಗೆ ಇ.ಡಿ ಸಮನ್ಸ್

ಬಹುಚರ್ಚಿತ ಕೊಚ್ಚಿನ್ ಮಿನರಲ್ಸ್ ಅಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಅಕ್ರಮ ಹಣ...