ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ನಂತರ ಗಡಿ ಪ್ರದೇಶವಾದ ಉರಿಯಲ್ಲಿ ಪಾಕಿಸ್ತಾನ ಪಡೆಗಳು ಮೋರ್ಟಾರ್ ಮತ್ತು ಫಿರಂಗಿ ಗುಂಡಿನ ದಾಳಿ ನಡಸಿದ್ದವು. ಪಾಕ್ ಪಡೆಗಳ ದಾಳಿಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದ್ದು, ಮೂರು ಕುಟುಂಬಗಳ ಮನೆ ಸಂಪೂರ್ಣವಾಗಿ ನಾಶವಾಗಿತ್ತು. ಘಟನೆ ನಡೆದು ಹಲವು ದಿನಗಳು ಉರುಳಿದರೂ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಈವರೆಗೆ ಯಾವುದೇ ಪರಿಹಾರ ದೊರೆತಿಲ್ಲ. ಹೀಗಾಗಿ, ಆ ಕುಟುಂಬಗಳಿಗೆ ಉರಿ ಗ್ರಾಮಸ್ಥರೇ ನೆರವಾಗಿದ್ದು, ಮನೆ ಕಟ್ಟಿಸಿಕೊಡಲು ಮುಂದಾಗಿದ್ದಾರೆ.
ಉರಿ ಪ್ರದೇಶದ ಸಲಾಮಾಬಾದ್ ಗ್ರಾಮವು ಭಾರತ-ಪಾಕ್ ಎಲ್‌ಒಸಿಯಲ್ಲಿದೆ. ಗ್ರಾಮದ ಮೇಲೆ ಪಾಕಿಸ್ತಾನವು ಶೆಲ್ ದಾಳಿ ನಡೆಸಿದ್ದರಿಂದ ಮೂರು ಕುಟುಂಬಗಳ ಮನೆ ಸಂಪೂರ್ಣವಾಗಿ ನಾಶವಾಗಿದೆ. ಆ ಕುಟುಂಬಗಳು ನಿರ್ಗತಿಕರಾಗಿದ್ದಾರೆ. ಅವರಿಗೆ ಪರಿಹಾರ ನೀಡುವಂತೆ ಸರ್ಕಾರವನ್ನು ಮನವಿ ಮಾಡಲಾಗಿದ್ದರೂ, ಈವರೆಗೆ ಯಾವುದೇ ರೀತಿಯ ಕನಿಷ್ಠ ಸೌಲಭ್ಯಗಳೂ ಸರ್ಕಾರದಿಂದ ದೊರೆತಿಲ್ಲ.
ಗ್ರಾಮದ ನಿವಾಸಿ ಶೋಕೆಟ್ ಚೆಕ್ ಹೇಳುವಂತೆ, ಗ್ರಾಮದಲ್ಲಿ ಮೂರು ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಇತರ ಮೂರು ಭಾಗಶಃ ಹಾನಿಗೊಳಗಾಗಿವೆ. ತಾಲಿಬ್ ಹುಸೇನ್ ನಾಯಕ್, ಯೂನಿಸ್ ನಾಯಕ್ ಹಾಗೂ ಫಿರೋಜ್ ದಿನ್ ನಾಯಕ್ ಎಂಬ ಮೂವರು ಸಹೋದರರು ಮತ್ತು ಅವರ ಕುಟುಂಬದ ಸದಸ್ಯರು ನಿರಾಶ್ರಿತರಾಗಿದ್ದಾರೆ.
“ಆ ಕುಟುಂಬಗಳು ಕಾರ್ಮಿಕರು; ಅವರು ತಮ್ಮ ಜೀವನದುದ್ದಕ್ಕೂ ದುಡಿದಿದ್ದನ್ನು ಮನೆ ಕಟ್ಟುವುದಕ್ಕಾಗಿ ವ್ಯಯಿಸಿದ್ದರು. ಆದರೆ, ಈಗ ಆ ಮನೆ ಸಂಪೂರ್ಣವಾಗಿ ನಾಶವಾಗಿದೆ. ಈಗ ಅವರು ಮತ್ತೆ ಹೊಸದಾಗಿ ಬದುಕು ಕಟ್ಟಿಕೊಳ್ಳಬೇಕಿದೆ” ಎಂದು ಶೋಕೆಟ್ ಹೇಳಿದ್ದಾರೆ.
“ಸಲಾಮಾಬಾದ್ ಗ್ರಾಮವೂ ಸೇರಿದಂತೆ ಉರಿಯ ಎಲ್‌ಒಸಿಗೆ ಹೊಂದಿಕೊಂಡಿರುವ ಇತರ ಹಳ್ಳಿಗಳಲ್ಲೂ ಭಾರೀ ಶೆಲ್ ದಾಳಿಗಳು ನಡೆದಿವೆ. ಗ್ರಾಮಗಳ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಆಗಿದ್ದರಿಂದ ಬದುಕುಳಿದಿದ್ದಾರೆ. ಆದರೆ, ಅವರು ತಮ್ಮ ಜೀವನೋಪಾಯದ ಎಲ್ಲವನ್ನೂ ಕಳೆದುಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
“ಸರ್ಕಾರ ಇನ್ನೂ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದೆ ಬಂದಿಲ್ಲ. ಸರ್ಕಾರ ಪರಿಹಾರ ವಿತರಿಸುವವರೆಗೆ ಗ್ರಾಮಸ್ಥರು ಮೂರು ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯವಾಗಿ ಉತ್ತಮವಾದ ಶೆಡ್ ನಿರ್ಮಿಸಲು ನಿರ್ಧರಿಸಿದ್ದೇವೆ” ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಪಡೆಗಳ ಶೆಲ್ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿ, ತಂಗ್ಧರ್, ರಾಜೌರಿ, ಪೂಂಚ್ ಮತ್ತು ಇತರ ಗಡಿ ಜಿಲ್ಲೆಗಳಲ್ಲಿ ನೂರಾರು ಮನೆಗಳು ಹಾನಿಗೊಳಗಾಗಿವೆ. ಕನಿಷ್ಠ 21 ನಾಗರಿಕರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
“ಪಾಕ್ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ನನ್ನ ಸಹೋದರಿಯ ಮನೆ ಹಾನಿಗೊಳಗಾಯಿತು. ಅದೃಷ್ಟವಶಾತ್, ದಾಳಿಯಾದಾಗ ಮನೆಯಲ್ಲ ಯಾರೂ ಇರಲಿಲ್ಲ. ದಾಳಿಯ ಹಿಂದಿನ ರಾತ್ರಿಯೇ ಅವರೆಲ್ಲರನ್ನೂ ನಾವು ಸ್ಥಳಾಂತರಿಸಿದ್ದೆವು. ಆದರೆ, ಮನೆ ಕಳೆದುಕೊಂಡವರಿಗೆ ನೆರವು ನೀಡಲು, ಸಂತ್ರಸ್ತರಿಗೆ ಧೈರ್ಯ ತುಂಬಲು, ಭರವಸೆ ನೀಡಲು ಯಾವುದೇ ಒಬ್ಬ ಸರ್ಕಾರಿ ಅಧಿಕಾರಿಯೂ ಈ ಪ್ರದೇಶಕ್ಕೆ ಭೇಟಿ ನೀಡಿಲ್ಲ” ಎಂದು ಉರಿಯ ಪರನ್‌ಪೀಲನ್ ಗ್ರಾಮದ ಸೈಯದ್ ಮುಸ್ತಫಾ ಹೇಳಿದ್ದಾರೆ.