ಡಿ.13 ರಂದು ಲೋಕಸಭೆ ಹಾಗೂ ಸಂಸತ್ ಆವರಣದಲ್ಲಿ ನಡೆದ ಭದ್ರತಾ ಲೊಪ ಘಟನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದವು. ಕಲಾಪದೊಳಗೆ ನುಗ್ಗಿದ ಇಬ್ಬರು ಸೇರಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆದರೆ ಸಂಸತ್ತಿನಲ್ಲಾದ ಭದ್ರತಾ ಲೋಪಕ್ಕೆ ಕೇಂದ್ರದ ನಿರ್ಲಕ್ಷ್ಯವೇ ಕಾರಣ ಎನ್ನುವ ವ್ಯಾಪಕ ಟೀಕೆ ಕೇಳಿಬಂದಿದೆ. ವರದಿಗಳ ಪ್ರಕಾರ ಇಡೀ ಸಂಸತ್ತಿನ ಭದ್ರತೆಯ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುವ ಜಂಟಿ ಕಾರ್ಯದರ್ಶಿ (ಭದ್ರತೆ) ಸ್ಥಾನವು ಕಳೆದ 45 ದಿನಗಳಿಂದ ಖಾಲಿಯಿದೆ.
ಹಿಂದಿನ ಅಧಿಕಾರಿ ರಘುಬೀರ್ ಲಾಲ್ ಅವರನ್ನು ನವೆಂಬರ್ ಆರಂಭದಲ್ಲಿ ಕಾನೂನು ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕರಾಗಿ ಅವರ ತವರು ರಾಜ್ಯ ಉತ್ತರ ಪ್ರದೇಶಕ್ಕೆ ವರ್ಗಾಯಿಸಲಾಗಿದೆ. ಈ ಮಧ್ಯೆ ನಿರ್ದೇಶಕ ಮಟ್ಟದ ಅಧಿಕಾರಿ ಬ್ರಿಜೇಶ್ ಸಿಂಗ್ ಅವರು ತಾತ್ಕಾಲಿಕವಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅತ್ಯಾಚಾರ ಆರೋಪಿ ಇನ್ನೂ ಏಕೆ ಶಾಸಕರಾಗಿದ್ದಾರೆ?: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ಆಕ್ರೋಶ
ಇನ್ನೂ ಮುಖ್ಯವಾದ ವಿಚಾರವೆಂದರೆ, ನೂತನ ಸಂಸತ್ತಿನಲ್ಲಿ ಶೇ.40 ರಷ್ಟು ಭದ್ರತಾ ಸಿಬ್ಬಂದಿ ಕೊರತೆಯಿದೆ. ಇದು ಸಂಸತ್ತಿನ ಭದ್ರತಾ ವ್ಯವಸ್ಥೆಯಲ್ಲಿ ಗಮನಾರ್ಹ ಕೊರತೆಯಾಗಿದೆ. ಪ್ರಸ್ತುತ ನೂತನ ಸಂಸತ್ತಿನಲ್ಲಿ 230 ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಇದಲ್ಲದೆ, ಲೋಕಸಭೆಯ ಚೇಂಬರ್ ಒಳಗೆ ಇಬ್ಬರು ವ್ಯಕ್ತಿಗಳು ಅನಿಲ ಕ್ಯಾನ್‌ಗಳನ್ನು ಸಿಡಿಸಿದ ಇತ್ತೀಚಿನ ಉಲ್ಲಂಘನೆಯ ಸಮಯದಲ್ಲಿ, ಹೊಗೆ ಪತ್ತೆ ಹಚ್ಚುವ ಅಲಾರಂಗಳು ಸಕ್ರಿಯವಾಗಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ವಿಶೇಷವಾಗಿ ಸಂಸತ್ತಿನ ಸದಸ್ಯರು ಶಿಫಾರಸು ಮಾಡಿದ ಕಾರಣದಿಂದ ಹೆಚ್ಚಿನ ಸಂಖ್ಯೆಯ ಸಂದರ್ಶಕರು ಹಾಜರಾಗುತ್ತಿದ್ದು, ಇದರ ಸಂಪೂರ್ಣ ಪರಿಶೀಲನೆಯ ಕಾರ್ಯವಿಧಾನಗಳನ್ನು ನಡೆಸುವುದು ಸವಾಲಾಗಿದೆ. ಈ ಕಾರಣದಿಂದಲೇ ಇಬ್ಬರು ಸಂದರ್ಶಕರು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.