ದೆಹಲಿಯಲ್ಲಿ ಜುಲೈ 20ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಅತಿಯಾದ ಬಲಪ್ರಯೋಗ ಮಾಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಪೆಲೆಟ್ ಗನ್‌ಗಳನ್ನು ಬಳಸಿ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ರ್ಯಾಪಿಡ್ ಆಕ್ಷನ್ ಫೋರ್ಸ್ (RAF) ತನ್ನ ಸಿಬ್ಬಂದಿಯ ನಡವಳಿಕೆಯ ಕುರಿತು ಆಂತರಿಕ ಪರಿಶೀಲನೆ ಮತ್ತು ತನಿಖೆಯನ್ನು ಪ್ರಾರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂಗೆ ನಿಗ್ರಹ ಪಡೆಯ ಇನ್ಸ್‌ಪೆಕ್ಟರ್ ಜನರಲ್‌ಗೆ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಘಟನೆಗಳ ಸರಣಿಯನ್ನು ಕೂಲಂಕುಷವಾಗಿ ಪರಿಶೀಲಿಸುವಂತೆ ಆರ್‍ಎಎಫ್ ಪಡೆಗಳು ಕಾರ್ಯಾಚರಿಸುವ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ನಿರ್ದೇಶನ ನೀಡಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳು ಮತ್ತು ಆರ್‍ಎಎಫ್ ಸಿಬ್ಬಂದಿಯ ಮೇಲೆಯೇ ದಾಳಿ ನಡೆದ ಘಟನೆಗಳನ್ನು ಪರಿಶೀಲಿಸಲು ಸೂಚಿಸಲಾಗಿದೆ. ಪ್ರಸ್ತುತ ಆಂತರಿಕ ಪರಿಶೀಲನೆ ನಡೆಯುತ್ತಿದ್ದು, ಘಟನೆಯಲ್ಲಿ ಹೆಚ್ಚಿನ ತನಿಖೆಗೆ ಆಸ್ಪದವಿದೆ ಎಂಬುದು ಕಂಡುಬಂದರೆ ಮಾತ್ರ ಅಧಿಕೃತ ‘ಕೋರ್ಟ್ ಆಫ್ ಇನ್‌ಕ್ವೈರಿ’ಗೆ ಆದೇಶಿಸಲಾಗುವುದು ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯ ಸೇರಿದಂತೆ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಜುಲೈ 20ರಂದು ಜಂತರ್ ಮಂತರ್‌ನಿಂದ ಸಂಸತ್ತಿನತ್ತ ‘ಚಲೋ ಸಂಸತ್’ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭದ್ರತಾ ಸಿಬ್ಬಂದಿಗಳು ಪ್ರತಿಭಟನಾಕಾರರ ಮೇಲೆ ತೀವ್ರ ದಾಳಿ ನಡೆಸಿದ್ದರು. ಲಾಠಿಚಾರ್ಜ್ ಮತ್ತು ಅಶ್ರುವಾಯು ಪ್ರಯೋಗಿಸಿದ್ದರು.
ಕಾರ್ಯಾಚರಣೆಯ ಸಮಯದಲ್ಲಿ ನೀಲಿ ಬಣ್ಣದ ಮಿಲಿಟರಿ ಸಮವಸ್ತ್ರ ಧರಿಸಿದ್ದ ಆರ್‍ಎಎಫ್ ಸಿಬ್ಬಂದಿಗಳು ಲಾಠಿ ಮತ್ತು ಬಂದೂಕುಗಳನ್ನು ಬಳಸುತ್ತಿರುವ ಹಲವಾರು ವೀಡಿಯೊಗಳು ಮತ್ತು ರಕ್ತಸಿಕ್ತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಓಡುತ್ತಿದ್ದ ಪ್ರತಿಭಟನಾಕಾರರೊಬ್ಬರನ್ನು ಆರ್‍ಎಎಫ್ ಸಿಬ್ಬಂದಿ ಕಾಲು ಹಾಕಿ ಬೀಳಿಸಿರುವುದು ಹಾಗೂ ಸಂಘರ್ಷದ ವೇಳೆ ಸ್ಟನ್ ಗನ್ ಬಳಸಿರುವಂತೆ ಕಾಣಿಸುವ ವೀಡಿಯೋಗಳು ಸಹ ಹರಿದಾಡಿವೆ. ಈ ಎಲ್ಲ ವಿಡಿಯೋಗಳನ್ನು ಸಿಆರ್‌ಪಿಎಫ್ ಗಮನಕ್ಕೆ ತೆಗೆದುಕೊಂಡಿದೆ.
ಜುಲೈ 20ರ ಸಂಘರ್ಷದ ವೇಳೆ ಕನಿಷ್ಠ ಇಬ್ಬರು ವಿದ್ಯಾರ್ಥಿಗಳು ಪೆಲೆಟ್ ಗನ್ ಗಾಯಗಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ದೆಹಲಿ ಪೊಲೀಸರು ತಮ್ಮ ಬಳಿ ಪೆಲೆಟ್ ಗನ್‌ಗಳೇ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಆದರೆ, ಸಿಆರ್‌ಪಿಎಫ್ ಆಗಲಿ ಅಥವಾ ಆರ್‍ಎಎಫ್ ಆಗಲಿ ಪ್ರತಿಭಟನೆಯ ವೇಳೆ ಪೆಲೆಟ್ ಗುಂಡು ಹಾರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ ಅಥವಾ ನಿರಾಕರಿಸಿಲ್ಲ.
ಇದೀಗ, ಕಾರ್ಯಾಚರಣೆಯ ವೇಳೆ ಸಿಬ್ಬಂದಿಯ ನಡವಳಿಕೆಯನ್ನು ಪರಿಶೀಲಿಸಲು ನಿಯಮಾವಳಿಗಳ ಪ್ರಕಾರ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.




