ರಾಜಕೀಯದಲ್ಲಿ “ಸ್ಲಿಪ್ಪರಿ ಸ್ಲೋಪ್” ಎಂಬ ಲೆಕ್ಕಾಚಾರವೂ ಇದೆ. ಇಂದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರೆ, ನಾಳೆ ಇತರ ಸಚಿವರ ವಿರುದ್ಧವೂ ಇದೇ ಮಾದರಿಯ ಒತ್ತಡಗಳು ಹೆಚ್ಚಾಗಬಹುದು. ಒಮ್ಮೆ ಸರ್ಕಾರ ಪ್ರತಿಭಟನೆಯ ಒತ್ತಡಕ್ಕೆ ಮಣಿಯಿತು ಎಂಬ ಸಂದೇಶ ಹೊರಬಿದ್ದರೆ, ಮುಂದಿನ ಎಲ್ಲ ಚಳವಳಿಗಳಲ್ಲೂ ಇದೇ ಮಾದರಿಯ ಬೇಡಿಕೆಗಳು ಬಲ ಪಡೆಯುವ ಸಾಧ್ಯತೆಯನ್ನು ಬಿಜೆಪಿ ಪರಿಗಣಿಸುತ್ತಿರಬಹುದು ಎನ್ನಲಾಗುತ್ತಿದೆ.
ಸಾಲು ಸಾಲು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದಿದೆ. ಜಂತರ್ ಮಂತರ್ನಲ್ಲಿ ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆ, ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ, ಸಂಸತ್ತಿನ ಕಲಾಪ ಬಿಕ್ಕಟ್ಟು, ಪ್ರತಿಪಕ್ಷಗಳ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ರಾಜೀನಾಮೆ ಆಗ್ರಹ.. ಇವೆಲ್ಲದರ ಕೇಂದ್ರಬಿಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್. ಇಷ್ಟೊಂದು ರಾಜಕೀಯ ಮತ್ತು ಸಾರ್ವಜನಿಕ ಒತ್ತಡದ ನಡುವೆಯೂ ಅವರು ಇನ್ನೂ ತಮ್ಮ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಇದರ ಹಿಂದಿರುವ ಸಚಿವರನ್ನ ಉಳಿಸಿಕೊಳ್ಳುವ ಪ್ರಯತ್ನದ ಜತೆಗೆ ಬಿಜೆಪಿಯ ರಾಜಕೀಯ ತಂತ್ರವೇನಿರಬಹುದು ಎನ್ನುವುದು ಹಲವು ರಾಜಕೀಯ ವಿಶ್ಲೇಷಕರ, ಸಾಮಾನ್ಯ ಜನರ ಸದ್ಯದ ಕುತೂಹಲ.
ಅಲ್ಲಾ, ಈ ಸಚಿವರೊಬ್ಬರು ರಾಜೀನಾಮೆ ಕೊಟ್ಟುಬಿಟ್ಟರೆ ಅರ್ಧ ಸಮಸ್ಯೆಯೇ ಬಗೆಹರಿಯುತ್ತದಲ್ಲ ಎನ್ನುವುದು ಕಾಲೋಚಿತ ಅಭಿಪ್ರಾಯ. ಅದರ ಜತೆಗೆ ಒಂದು ವೇಳೆ ಪ್ರಧಾನ್ ರಾಜೀನಾಮೆ ಕೊಟ್ಟರೆ ಅದರ ಬಳಿಕ ಆಗುವ ಬದಲಾವಣೆಗೆ ಬಿಜೆಪಿ ಇನ್ನೂ ತಯಾರಾಗಿದೆಯೋ ಇಲ್ಲವೋ ಎನ್ನುವುದು ಇನ್ನೊಂದು ರೀತಿ ವಿಶ್ಲೇಷಣೆಗೊಳಪಡುತ್ತಿದೆ.
ಮೊದಲನೆಯದಾಗಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರೆ, ಅದನ್ನು ಸರ್ಕಾರ ತನ್ನ ವೈಫಲ್ಯವನ್ನು ತಾನೇ ಒಪ್ಪಿಕೊಂಡಂತೆಯೇ ಅರ್ಥೈಸುವ ಸಾಧ್ಯತೆಯಿದೆ. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಗಂಭೀರ ಪ್ರಕರಣದಲ್ಲಿ ಸಚಿವರ ರಾಜೀನಾಮೆ ಎಂದರೆ ಆಡಳಿತದ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವ ಸಂದೇಶ ರವಾನೆಯಾಗುತ್ತದೆ. ಇದೇ ಕಾರಣಕ್ಕೆ ಸರ್ಕಾರ ಸಚಿವರನ್ನು ಬದಲಿಸುವ ಬದಲು ತನಿಖೆ, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ, ಸಂಸತ್ತಿನಲ್ಲಿ ಚರ್ಚೆ ಮತ್ತು ಸುಧಾರಣೆಯ ಭರವಸೆಗಳ ಮೂಲಕ ಪರಿಸ್ಥಿತಿಯನ್ನು ನಿಭಾಯಿಸುವ ಜಾಣತನವನ್ನೇನೋ ಪ್ರದರ್ಶಿಸುತ್ತಿದೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಅದನ್ನ ನಂಬುವ ವ್ಯವಧಾನವಾಗಲೀ, ಹಳೆಯ ನಂಬಿಕೆಯಾಗಲೀ ಜನರಿಗೆ ಇದ್ದಂತಿಲ್ಲ.
ಎರಡನೆಯದಾಗಿ, ಇದು ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಶೈಲಿಯ ಭಾಗವೆಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಪ್ರತಿಪಕ್ಷಗಳು ಅಥವಾ ಬೀದಿ ಹೋರಾಟಗಳ ಒತ್ತಡಕ್ಕೆ ಮಣಿದಂತೆ ಕಾಣಿಸಿಕೊಳ್ಳುವುದನ್ನು ಬಿಜೆಪಿ ನಾಯಕತ್ವ ಇಷ್ಟಪಡುವುದಿಲ್ಲ. ಸಾಧ್ಯವಾದಷ್ಟು ಅಂತಹ ಸಂದರ್ಭಗಳಿಂದ ತಪ್ಪಿಸಿಕೊಳ್ಳಲು ಬಯಸುತ್ತದೆ. ಸರ್ಕಾರದ ದೃಷ್ಟಿಯಲ್ಲಿ ಒಬ್ಬ ಸಚಿವರ ರಾಜೀನಾಮೆ ನಾಯಕತ್ವದ ಬಲ, ಸರ್ಕಾರದ ಪ್ರತಿಷ್ಠೆ ಮತ್ತು ರಾಜಕೀಯ ಸಂದೇಶಕ್ಕೆ ಸಂಬಂಧಿಸಿದ ವಿಷಯ. ಹೀಗಾಗಿ ಬೇಡಿಕೆ ಎಷ್ಟೇ ತೀವ್ರವಾಗಿದ್ದರೂ, ತಕ್ಷಣ ಒಪ್ಪಿಕೊಳ್ಳುವ ಬದಲು ಪ್ರತಿರೋಧಿಸುವ ತಂತ್ರವನ್ನು ಅನುಸರಿಸುತ್ತಿದೆ.
ಮೂರನೆಯದಾಗಿ, ರಾಜಕೀಯದಲ್ಲಿ “ಸ್ಲಿಪ್ಪರಿ ಸ್ಲೋಪ್” ಎಂಬ ಲೆಕ್ಕಾಚಾರವೂ ಇದೆ. ಇಂದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರೆ, ನಾಳೆ ಇತರ ಸಚಿವರ ವಿರುದ್ಧವೂ ಇದೇ ಮಾದರಿಯ ಒತ್ತಡಗಳು ಹೆಚ್ಚಾಗಬಹುದು. ಒಮ್ಮೆ ಸರ್ಕಾರ ಪ್ರತಿಭಟನೆಯ ಒತ್ತಡಕ್ಕೆ ಮಣಿಯಿತು ಎಂಬ ಸಂದೇಶ ಹೊರಬಿದ್ದರೆ, ಮುಂದಿನ ಎಲ್ಲ ಚಳವಳಿಗಳಲ್ಲೂ ಇದೇ ಮಾದರಿಯ ಬೇಡಿಕೆಗಳು ಬಲ ಪಡೆಯುವ ಸಾಧ್ಯತೆಯನ್ನು ಬಿಜೆಪಿ ಪರಿಗಣಿಸುತ್ತಿರಬಹುದು ಎನ್ನಲಾಗುತ್ತಿದೆ.
ನಾಲ್ಕನೆಯದಾಗಿ, ಬಿಜೆಪಿ ಆಡಳಿತದಲ್ಲಿ ಸಾರ್ವಜನಿಕ ಒತ್ತಡಕ್ಕೆ ಮಣಿದು ಸಚಿವರ ಅಥವಾ ಇನ್ನಾವುದೇ ಹೊಣೆಗಾರ ನಾಯಕರ ರಾಜೀನಾಮೆ ಪಡೆಯುವುದು ಅಪರೂಪದಲ್ಲೇ ಅಪರೂಪ. 2015ರಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೀಗೆ ಹೇಳಿದ್ದರು.. “ಇದು ಯುಪಿಎ ಸರ್ಕಾರವಲ್ಲ, ಎನ್ಡಿಎ ಸರ್ಕಾರ; ಇಲ್ಲಿ ಸಚಿವರು ಹೀಗೆ ರಾಜೀನಾಮೆ ಕೊಡುವುದಿಲ್ಲ” ಎಂದು. ಇದು ಬಿಜೆಪಿಯ ಆಡಳಿತದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಬಹುಶಃ ಸರ್ಕಾರ ಜಾಣ ಕಿವುಡನಂತೆ ವರ್ತಿಸುತ್ತಿರುವುದಕ್ಕೆ ಇದೂ ಒಂದು ಕಾರಣವಿರಬಹುದು ಎಂದು ವಿಶ್ಲೇಷಕರು ಉಲ್ಲೇಖಿಸುತ್ತಾರೆ. ಅಂದಿನಿಂದಲೂ ಆರೋಪಗಳು, ಪ್ರತಿಭಟನೆಗಳು ಅಥವಾ ವಿರೋಧ ಪಕ್ಷಗಳ ಆಗ್ರಹ ಮಾತ್ರಕ್ಕೆ ಸಚಿವರನ್ನು ಕೈಬಿಡದ ಬಿಜೆಪಿ, ತನ್ನ ನಿಲುವು ಬದಲಿಸಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕುವುದನ್ನು ನಿರೀಕ್ಷಿಸಲಾಗುವುದಿಲ್ಲ.
ಇದನ್ನೂ ಓದಿ: ಕಾಕ್ರೋಚ್ ಹೋರಾಟ – ಪ್ರಧಾನಿ ಭರವಸೆ: 3 ವರ್ಷಗಳಲ್ಲಿ 4 ಬಾರಿ ಹೇಳಿದ್ದನ್ನೇ ಹೇಳಿದ ಮೋದಿ
ಇವೆಲ್ಲದರ ಜೊತೆಗೆ ಧರ್ಮೇಂದ್ರ ಪ್ರಧಾನ್ ಅವರ ಸಂಘಟನಾ ಹಿನ್ನೆಲೆಯೂ ಈ ಚರ್ಚೆಯ ಪ್ರಮುಖ ಅಂಶವಾಗಿದೆ. ಅವರು ಈಗ ಕೇಂದ್ರ ಶಿಕ್ಷಣ ಸಚಿವರು. ಆದರೆ ಅವರ ಮೂಲ RSS. ಎಬಿವಿಪಿ (ABVP) ಮೂಲಕ ವಿದ್ಯಾರ್ಥಿ ರಾಜಕಾರಣಕ್ಕೆ ಕಾಲಿಟ್ಟು, ಬಿಜೆಪಿ ಯುವ ಮೋರ್ಚಾದಲ್ಲಿ ಬೆಳೆದು, ಆರ್ಎಸ್ಎಸ್ ಚಿಂತನಾ ಪರಂಪರೆಯಲ್ಲಿ ರೂಪುಗೊಂಡ ನಾಯಕರೆಂದು ಅವರನ್ನು ಪರಿಗಣಿಸಲಾಗುತ್ತದೆ. ಒಡಿಶಾದಲ್ಲಿ ಬಿಜೆಪಿಯನ್ನು ವಿಸ್ತರಿಸಿದ ಪ್ರಮುಖ ಸಂಘಟನಾ ತಂತ್ರಗಾರರಲ್ಲಿ ಅವರ ಹೆಸರೂ ಇದೆ. ಪಕ್ಷದೊಳಗೆ ಮಾತ್ರವಲ್ಲ, ಸಂಘ ಪರಿವಾರದಲ್ಲೂ ಅವರಿಗೆ ಗಮನಾರ್ಹ ಪ್ರಭಾವವಿದೆ ಎನ್ನುವುದು ರಾಜಕೀಯ ವಲಯದಲ್ಲಿನ ಸಾಮಾನ್ಯ ಅಭಿಪ್ರಾಯ. ಇದೇ ಕಾರಣದಿಂದ, ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆ, ಸಾರ್ವಜನಿಕ ಆಕ್ರೋಶದ ನಡುವೆಯೂ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಬಗ್ಗೆ ಬಿಜೆಪಿ ಯೋಚನೆ ಕೂಡ ಮಾಡುವುದಿಲ್ಲ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ. ಸರ್ಕಾರದ ದೃಷ್ಟಿಯಲ್ಲಿ ಅವರು ಸಂಘಟನೆಯ ಪ್ರಮುಖ ರಾಜಕೀಯ ಬಂಡವಾಳ. ಹೀಗಾಗಿ ಅವರನ್ನು ತಕ್ಷಣ ಬದಲಿಸುವುದು ಆಡಳಿತಾತ್ಮಕ ನಿರ್ಧಾರಕ್ಕಿಂತ ದೊಡ್ಡ ರಾಜಕೀಯ ಸಂದೇಶ ರವಾನಿಸಬಹುದು ಎಂಬ ಲೆಕ್ಕಾಚಾರವೂ ಇರಬಹುದು.
ಕೊನೆಗೆ ಈ ಚರ್ಚೆ ಕೇವಲ ಶಿಕ್ಷಣ ಮಂತ್ರಿಯವರ ರಾಜೀನಾಮೆಯನ್ನ ಮೀರಿದೆ ಎಂಬುದು ಸ್ಪಷ್ಟ. ವ್ಯವಸ್ಥೆಯ ವೈಫಲ್ಯದ ಸಂದರ್ಭದಲ್ಲಿ ಹೊಣೆಗಾರಿಕೆಯನ್ನು ಸ್ವೀಕರಿಸುವ ಸಂಸ್ಕೃತಿ ಪ್ರಜಾಪ್ರಭುತ್ವದಲ್ಲಿ ವಿಶ್ವಾಸವನ್ನು ಮರುಸ್ಥಾಪಿಸುತ್ತದೆ. ಆದರೆ ಅದು ಬಿಜೆಪಿಯ ಸಂಸ್ಕೃತಿಯಲ್ಲ. ಸದ್ಯ ಕೇಂದ್ರ ಸರ್ಕಾರ ರಾಜಕೀಯ ಹಾನಿ, ನಾಯಕತ್ವದ ಪ್ರತಿಷ್ಠೆ ಮತ್ತು ಸಂಘಟನೆಯ ಲೆಕ್ಕಾಚಾರವನ್ನು ಆದ್ಯತೆಯಾಗಿ ನೋಡುತ್ತಿರುವಂತೆ ಕಾಣುತ್ತಿದೆ. ಅರಾಜಕತೆ ಸೃಷ್ಟಿಯಾದಾಗ ಅಧಿಕಾರದಲ್ಲಿರುವವರು ನೈತಿಕ ಹೊಣೆ ಹೊರುತ್ತಾರೆಯೇ? ಎಂಬುದೇ ದೊಡ್ಡ ಪ್ರಶ್ನೆ. ಈ ಪ್ರಶ್ನೆಗೆ ಸರ್ಕಾರ ಯಾವಾಗ ಮತ್ತು ಹೇಗೆ ಉತ್ತರಿಸುತ್ತದೆ ಎಂಬುದು ಈ ಹೋರಾಟದ ಮುಂದಿನ ದಿಕ್ಕನ್ನು ನಿರ್ಧರಿಸಲಿದೆ.





