ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಸೋಮವಾರ ಬೃಹತ್ ‘ಸಂಸತ್ ಚಲೋ’ ಹಮ್ಮಿಕೊಂಡಿತ್ತು. ಮುಂಗಾರು ಅಧಿವೇಶನದ ಮೊದಲ ದಿನವೇ ಪ್ರತಿಭಟನಾಕಾರರು ಸಂಸತ್ತಿನತ್ತ ನುಗ್ಗಿದ್ದರಿಂದ, ಭದ್ರತೆಯ ಹಿತದೃಷ್ಟಿಯಿಂದ ಸಂಸತ್ ಭವನದ ಗೇಟ್‌ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
ಪ್ರತಿಭಟನೆಯ ಪ್ರಮಾಣವನ್ನು ಪೊಲೀಸರು ಕಡಿಮೆ ಅಂದಾಜು ಮಾಡಿದ್ದೇ ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ. “ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕೇವಲ 5,000 ಜನರು ಭಾಗವಹಿಸಬಹುದು ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಜಂತರ್ ಮಂತರ್‌ನಿಂದ ಆರಂಭವಾದ ಮೆರವಣಿಗೆಯಲ್ಲಿ ದಿಢೀರನೆ 12,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಸೇರಿದ್ದಾರೆ” ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (CISF) ಮೂಲಗಳು ತಿಳಿಸಿವೆ.
ಊಹೆಗೂ ಮೀರಿದ ಜನಸ್ತೋಮ ಹರಿದುಬಂದಿದ್ದರಿಂದ ಎಚ್ಚೆತ್ತ ದೆಹಲಿ ಪೊಲೀಸರು ತುರ್ತು ಕ್ರಮಗಳಿಗೆ ಮುಂದಾದರು. ನವದೆಹಲಿ ಜಿಲ್ಲೆಯಾದ್ಯಂತ 2,000ಕ್ಕೂ ಹೆಚ್ಚು ಸಿಬ್ಬಂದಿಯನ್ನೊಳಗೊಂಡ 32 ತುಕಡಿಗಳ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು. ಆದರೂ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ, ಎಲ್ಲಾ 14 ಜಿಲ್ಲೆಗಳಿಂದ ತಲಾ 100 ಪೊಲೀಸ್ ಸಿಬ್ಬಂದಿಯೊಂದಿಗೆ ತಕ್ಷಣವೇ ಒಬ್ಬ ಎಸಿಪಿ (ACP) ದರ್ಜೆಯ ಅಧಿಕಾರಿಯನ್ನು ನಿಯೋಜಿಸುವಂತೆ ಸೋಮವಾರ ಬೆಳಿಗ್ಗೆ ದೆಹಲಿ ಪೊಲೀಸ್ ಕೇಂದ್ರ ಕಚೇರಿಯು ತುರ್ತು ಸಂದೇಶ ರವಾನಿಸಬೇಕಾಯಿತು.
ಪ್ರತಿಭಟನೆಯ ತೀವ್ರತೆಯನ್ನು ಅರಿತಿದ್ದ ಪೊಲೀಸರು ಭಾನುವಾರ ಸಂಜೆಯೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರು. ಸೋಮವಾರ ಮುಂಜಾನೆ ರಾಜಕೀಯ ಮುಖಂಡರು ಮತ್ತು ಅವರ ಪ್ರಮುಖ ಬೆಂಬಲಿಗರು ಮನೆಯಿಂದ ಜಂತರ್ ಮಂತರ್ ಕಡೆಗೆ ಬರದಂತೆ ತಡೆಯಲು ಎಲ್ಲಾ 15 ಜಿಲ್ಲೆಗಳ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಅದರಂತೆ, ಬೆಳಿಗ್ಗೆ 5 ಗಂಟೆಗೇ ರಾಜಕೀಯ ನಾಯಕರ ಮನೆಗೆ ತೆರಳಿದ ಪೊಲೀಸರು ಅವರು ಹೊರಬರದಂತೆ ತಡೆದರು ಎಂದು ಮೂಲಗಳು ತಿಳಿಸಿವೆ.
ಜಂತರ್ ಮಂತರ್ ಸುತ್ತಮುತ್ತಲಿನ ಪ್ರದೇಶವು ಕೋಟೆಯಂತೆ ಮಾರ್ಪಟ್ಟಿತ್ತು. ಅಶ್ರುವಾಯು ಹಾಗೂ ಗಲಭೆ ನಿಗ್ರಹ ಕವಚಗಳನ್ನು ಧರಿಸಿದ ಭದ್ರತಾ ಸಿಬ್ಬಂದಿಯನ್ನು ಬೃಹತ್ ಪ್ರಮಾಣದಲ್ಲಿ ನಿಯೋಜಿಸಿ, ಬಿಗಿ ಭದ್ರತೆ ಒದಗಿಸಲಾಗಿತ್ತು. ಈ ಮಧ್ಯೆ, ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸಂಸತ್ತಿನತ್ತ ಮೆರವಣಿಗೆ ಆರಂಭಿಸಿದರಾದರೂ, ಸಿಜೆಪಿ ಮುಖಂಡರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಲು ತೆರಳಿದ್ದರಿಂದ ಮೆರವಣಿಗೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಯಿತು.
ಸಂಸತ್ ಮತ್ತು ಜಂತರ್ ಮಂತರ್ ಸಂಪರ್ಕಿಸುವ ರಸ್ತೆಗಳಲ್ಲಿ ಭದ್ರತೆಗಾಗಿ 24 ಗಂಟೆಗಳಲ್ಲಿ ಹೊಸದಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರತಿಭಟನಾಕಾರರೊಂದಿಗೆ ಯಾವುದೇ ಘರ್ಷಣೆಗೆ ಇಳಿಯದಂತೆ, ಬದಲಿಗೆ ಸಂಧಾನದ ಮೂಲಕ ಅವರನ್ನು ಶಾಂತಗೊಳಿಸುವಂತೆ ನವದೆಹಲಿ ಡಿಸಿಪಿ ಸಚಿನ್ ಶರ್ಮಾ ಅವರು ಪೊಲೀಸ್ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಂ ವಾಂಗ್‌ಚುಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಈ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.





