ಕಾರವಾರ: ದೇಶಾದ್ಯಂತ ನಡೆಯುತ್ತಿರುವ ವಿಶೇಷ ಮತದಾರರ ಪರಿಶೀಲನಾ ಪ್ರಕ್ರಿಯೆಯ (SIR) ನೆಪದಲ್ಲಿ, ಕೇಂದ್ರದ ಬಿಜೆಪಿ ಸರ್ಕಾರವು ಕಾಂಗ್ರೆಸ್ ಪಕ್ಷದ ಬೆಂಬಲಿಗರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಡುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ರಾಜ್ಯದ ಎಸ್ಐಆರ್ ಪ್ರಕ್ರಿಯೆಯ ಕಾಂಗ್ರೆಸ್ ವೀಕ್ಷಕಿ ಅಂಜಲಿ ನಿಂಬಾಳ್ಕರ್ ಆರೋಪಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ನಾಪತ್ತೆಯಾಗಿರುವುದನ್ನು ಪ್ರಸ್ತಾಪಿಸಿ. ತಮ್ಮ ಪಕ್ಷದ ಪರವಾಗಿ ಅಧಿಕಾರ ಉಳಿಸಿಕೊಳ್ಳಲು ಆಡಳಿತರೂಢ ಬಿಜೆಪಿ ಸರ್ಕಾರವು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಈ ಕುರಿತು ತಮ್ಮ ಬಳಿ ಸೂಕ್ತ ದಾಖಲೆಗಳಿರುವುದಾಗಿಯೂ ಅವರು ತಿಳಿಸಿದರು.
ಮಹಿಳಾ ಮೀಸಲಾತಿ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್ ವಿರೋಧವಿಲ್ಲ. ಯುಪಿಎ ಅವಧಿಯಲ್ಲೇ ರಾಜ್ಯಸಭೆಯಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಆದರೆ, ಈಗಿನ ಕೇಂದ್ರ ಸರ್ಕಾರವು ಮಹಿಳಾ ಮೀಸಲಾತಿಯ ಹೆಸರಿನಲ್ಲಿ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಮಾಡಲು ಹೊರಟಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ.
ಈ ಸುದ್ದಿ ಓದಿದ್ದೀರಾ ? ದಾಂಡೇಲಿ | ‘ಮೇವಾ ಮೋದಕ್’ ಹೆಸರಿನಲ್ಲಿ ಮಾದಕ ವಸ್ತು ಮಾರಾಟ ಆರೋಪ; ಪೊಲೀಸ್ ದಾಳಿ, 1.986 ಕೆ.ಜಿ. ವಸ್ತು ಜಪ್ತಿ
ಕ್ಷೇತ್ರ ಮರುವಿಂಗಡಣೆಯನ್ನು ಕೈಬಿಟ್ಟು, ಕೇವಲ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದರೆ, ‘ಇಂಡಿಯಾ’ ಮೈತ್ರಿಕೂಟ ಬೇಷರತ್ತಾಗಿ ಬೆಂಬಲ ನೀಡಲಿದೆ ಎಂದು ಸ್ಪಷ್ಟಪಡಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರ ಸೂಚನೆಯ ಮೇರೆಗೆ ತಾವು ಎಸ್ಐಆರ್ ಪ್ರಕ್ರಿಯೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆನೆ ಎಂದು ಹೇಳಿದರು, ಜಿಲ್ಲೆಯಲ್ಲಿ ಈಗಾಗಲೇ ಶೇ. 75ರಷ್ಟು ಮತದಾರರ ಗುರುತಿನ ಚೀಟಿ ಡಿಜಿಟಲೀಕರಣ ಪೂರ್ಣಗೊಂಡಿದೆ
ಚುನಾವಣಾ ಆಯೋಗವು ಈ ಪ್ರಕ್ರಿಯೆಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಿದ್ದು, ಇದನ್ನು ಶೇ. 100ಕ್ಕೆ ತಲುಪಿಸುವ ಗುರಿ ಹೊಂದಲಾಗಿದೆ ಪಟ್ಟಿಯಲ್ಲಿ ಹೆಸರಿಲ್ಲದವರು ಕೂಡಲೇ ‘ಫಾರ್ಮ್-6’ ಭರ್ತಿ ಮಾಡುವ ಮೂಲಕ ನೋಂದಾಯಿಸಿಕೊಳ್ಳಬೇಕು. ಇಲ್ಲವಾದರೆ ಮತದಾನದ ಹಕ್ಕಿನ ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಲೂ ವಂಚಿತರಾಗುವ ಸಾಧ್ಯತೆಯಿದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿರಸಿ ಶಾಸಕ ಹಾಗೂ ಜಿಲ್ಲಾ ಎಸ್ಐಆರ್ ಉಸ್ತುವಾರಿ ಭೀಮಣ್ಣ ನಾಯ್ಕ, ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ಹೊರಗುಳಿಯಬಾರದು ಎಂಬುದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಆಶಯವಾಗಿದೆ ಎಂದರು.
ಜಿಲ್ಲೆಯಲ್ಲಿ ಇದುವರೆಗೂ ನಡೆದಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಯಶಸ್ಸು ಪಕ್ಷದ ಬ್ಲಾಕ್ ಅಧ್ಯಕ್ಷರು, ಬಿ.ಎಲ್.ಎ ಪ್ರತಿನಿಧಿಗಳು ಹಾಗೂ ಬಿ.ಎಲ್.ಒ ಸಿಬ್ಬಂದಿಯ ಸಮನ್ವಯದಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕಾರ್, ಸುಷ್ಮಾ ರೆಡ್ಡಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.





