ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕನಿಷ್ಠ ವಯಸ್ಸನ್ನು ಇಳಿಕೆ ಮಾಡಲು ಸಂಸದೀಯ ಸಮಿತಿ ಸಲಹೆ ನೀಡಿದೆ. ಇದು ಯುವಕರಿಗೆ ಪ್ರಜಾಪ್ರಭುತ್ವದಲ್ಲಿ ಪಾಲುಗೊಳ್ಳಲು ಸಮಾನ ಅವಕಾಶ ನೀಡುತ್ತದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.
ಪ್ರಸ್ತುತ ಕಾನೂನಿನ ಪ್ರಕಾರ, ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಒಬ್ಬ ವ್ಯಕ್ತಿಗೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ರಾಜ್ಯಸಭೆ ಮತ್ತು ರಾಜ್ಯ ವಿಧಾನ ಪರಿಷತ್ ಸದಸ್ಯರಾಗಲು ಕನಿಷ್ಠ ವಯಸ್ಸು 30 ವರ್ಷ.
‘ರಾಷ್ಟ್ರೀಯ ಚುನಾವಣೆ’ ಅಥವಾ ಲೋಕಸಭಾ ಚುನಾವಣೆಗೆ, ಸ್ಪರ್ಧಿಸುವ ಕನಿಷ್ಠ ವಯಸ್ಸನ್ನು ಪ್ರಸ್ತುತ 25 ವರ್ಷದಿಂದ 18 ಕ್ಕೆ ಇಳಿಸಲು ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ. ಪ್ರಸ್ತುತ, ಒಬ್ಬ ವ್ಯಕ್ತಿಯು ಮತದಾರರಾಗಿ ನೋಂದಾಯಿಸಲು ಕನಿಷ್ಠ 18 ವರ್ಷಗಳಾಗಿರಬೇಕು.
ಕೆನಡಾ, ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ವಿವಿಧ ದೇಶಗಳಲ್ಲಿ ರಾಷ್ಟ್ರೀಯ ಚುನಾವಣೆಗಳಲ್ಲಿ ಉಮೇದುವಾರಿಕೆಗೆ ಕನಿಷ್ಠ ವಯಸ್ಸು 18 ವರ್ಷಗಳು ಎಂಬುದನ್ನು ಸಂಸದೀಯ ಸಮಿತಿ ಗಮನಿಸಿದೆ. ಯುವ ಜನತೆ ವಿಶ್ವಾಸಾರ್ಹವಾಗಿ ಮತ್ತು ಪ್ರಬುದ್ಧವಾಗಿ ಪ್ರಜಾಪ್ರಭುತ್ವದ ಚಟುವಟಿಕೆಗಳಲ್ಲಿ ಭಾಗವಹಿಸಲು ಇದು ಸಹಕಾರಿ ಎಂದು ಆ ರಾಷ್ಟ್ರಗಳ ಉದಾಹರಣೆಗಳು ತೋರಿಸುತ್ತವೆ” ಎಂದು ಕಾನೂನು ಮತ್ತು ಸಿಬ್ಬಂದಿ ಕುರಿತ ಸಂಸದೀಯ ಸ್ಥಾಯಿ ಸಮಿತಿ ಹೇಳಿದೆ.
‘ವಿಧಾನಸಭಾ ಚುನಾವಣೆಯಲ್ಲಿಯೂ ಉಮೇದುವಾರಿಕೆಗೆ ಕನಿಷ್ಠ ವಯಸ್ಸಿನ ಅವಶ್ಯಕತೆಯನ್ನು ಕಡಿಮೆ ಮಾಡಲು’ ಸಮಿತಿ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ: ಅಲೆಮಾರಿಗಳ ‘ಅಸ್ಮಿತೆ’ಗೊಂದು ಆಯೋಗ ಬೇಕೆ?
ಬಿಜೆಪಿಯ ಸುಶೀಲ್ ಮೋದಿ ನೇತೃತ್ವದ ಸಮಿತಿಯು ‘ಜಾಗತಿಕ ಅಭ್ಯಾಸಗಳು, ಯುವಜನರಲ್ಲಿ ಹೆಚ್ಚುತ್ತಿರುವ ರಾಜಕೀಯ ಪ್ರಜ್ಞೆ ಮತ್ತು ಯುವ ಪ್ರಾತಿನಿಧ್ಯದ ಅನುಕೂಲಗಳಂತಹ ಅಪಾರ ಪ್ರಮಾಣದ ಪುರಾವೆಗಳ ಆಧಾರದಿಂದ ಇಂಥದ್ದೊಂದು ಅಭಿಪ್ರಾಯಕ್ಕೆ ಬರಲಾಗಿದೆ’ ಎಂದು ಹೇಳಿದೆ.
ಚುನಾವಣಾ ಆಯೋಗದ ಪ್ರಕಾರ, ಸಂವಿಧಾನದ ನಿಬಂಧನೆಯನ್ನು ಬದಲಾಯಿಸಲು ಬಲವಾದ ಕಾರಣಗಳು ಬೇಕು.