- ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನ
- ರಿತೇಶ್ ಕುಮಾರ್ ವಿರುದ್ಧ ಸಹಾರ್ ಪೊಲೀಸರು ಪ್ರಕರಣ
ವಿಸ್ತಾರ ವಿಮಾನ ಹೈಜಾಕ್ ಮಾಡುವ ಯೋಜನೆಯೊಂದು ಸಿದ್ಧವಾಗಿತ್ತು. ಆದರೆ ತಂತ್ರ ರೂಪಿಸುತ್ತಿದ್ದ ಪ್ರಯಾಣಿಕ ತಾನು ಮಾಡಿದ ಯಡವಟ್ಟಿನಿಂದ ಈಗ ಜೈಲು ಸೇರಿದ್ದಾನೆ.
ಈ ಕುತೂಹಲಕಾರಿ ಘಟನೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈನಿಂದ ದೆಹಲಿಗೆ ತೆರಳುತ್ತಿದ್ದ ವಿಸ್ತಾರ ವಿಮಾನದಲ್ಲಿ ಸಂಜೆ 6.30ಕ್ಕೆ ನಡೆದಿದೆ.
ನಗರ ವಿಮಾನ ನಿಲ್ದಾಣದಿಂದ ಮುಂಬೈ-ದೆಹಲಿ ವಿಮಾನ ಹೊರಡುವುದಕ್ಕೂ ಮುನ್ನು ವಿಸ್ತಾರ ವಿಮಾನ ಹೈಜಾಕ್ ಮಾಡುವ ಕುರಿತು ಒಳಗಿದ್ದ 23 ವರ್ಷದ ರಿತೇಶ್ ಸಂಜಯ್ ಕುಮಾರ್ ಜುನೇಜಾ ಎಂಬ ವ್ಯಕ್ತಿ ಫೋನಿನಲ್ಲಿ ಇತರರೊಡನೆ ಸಂಭಾಷಿಸುತ್ತಿದ್ದ.
ವಿಮಾನ ಸಿಬ್ಬಂದಿ ಇದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದರು. ಆಗ ಮುಂಬೈ ಪೊಲೀಸರು ಈತನನ್ನು ಬಂಧಿಸಿದ್ದಾರೆ ಎಂದು ಮಾಧ್ಯಮಗಳು ಶುಕ್ರವಾರ (ಜೂನ್ 23) ವರದಿ ಮಾಡಿವೆ.
ವಿಮಾನ ಹೈಜಾಕ್ ಮಾಡುವ ಬಗ್ಗೆ ವ್ಯಕ್ತಿ ಫೋನಿನಲ್ಲಿ ಮಾತನಾಡುವುದನ್ನು ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಇತರರು ಕೇಳಿದ್ದಾರೆ. ಕೂಡಲೇ ವಿಮಾನ ಸಿಬ್ಬಂದಿ ಪ್ರಯಾಣಿಕನನ್ನು ವಿಮಾನದಿಂದ ಕೆಳಗೆ ಇಳಿಸಿ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು.
ಬಳಿಕ ವಿಮಾನವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಲಾಯಿತು. ನಂತರ ಅಧಿಕಾರಿಗಳ ಸೂಚನೆ ಮೇರೆಗೆ ವಿಮಾನ ದೆಹಲಿಯತ್ತ ಪ್ರಯಾಣಿಸಿತು ಎಂದು ವರದಿಯಾಗಿದೆ.
“ವಿಮಾನ ಹೈಜಾಕ್ ಬಗ್ಗೆ ಒಬ್ಬ ವ್ಯಕ್ತಿ ಫೋನ್‌ನಲ್ಲಿ ಮಾತನಾಡುತ್ತಿದ್ದ. ‘ಅಹ್ಮದಾಬಾದ್‌ನಲ್ಲಿ ವಿಮಾನ ಹೊರಡಲಿದೆ. ಹೈಜಾಕ್ ಮಾಡುವ ಎಲ್ಲ ಯೋಜನೆ ಸಿದ್ಧವಾಗಿದೆ. ಯಾವುದಾದರೂ ತೊಂದರೆ ಎದುರಾದಲ್ಲಿ ನನಗೆ ಕರೆ ಮಾಡಿ’ ಎಂದು ಹೇಳುತ್ತಿದ್ದ ಎಂದು ಸಿಬ್ಬಂದಿ ವಿವರಿಸಿದರು” ಎಂದು ಪೊಲೀಸರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದೆಹಲಿ ಸುಗ್ರೀವಾಜ್ಞೆ ಕುರಿತು ಸಂಸತ್ ಅಧಿವೇಶನಕ್ಕೂ ಮುನ್ನವೇ ನಿರ್ಧಾರ: ಖರ್ಗೆ
ರಿತೇಶ್ ಜುನೇಹಾ ವ್ಯಕ್ತಿಯನ್ನು ಮೊದಲು ಕೇಂದ್ರ ಕೈಗಾರಿಕಾ ಭದ್ರತಾ ದಳಕ್ಕೆ (ಸಿಐಎಸ್‌ಎಫ್) ಹಸ್ತಾಂತರಿಸಲಾಗಿದ್ದು, ಬಳಿಕ ಸಿಬ್ಬಂದಿ ದೂರಿನ ಮೇರೆಗೆ ವ್ಯಕ್ತಿಯನ್ನು ಸಹರ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.
ವಿಸ್ತಾರ ವಿಮಾನ ಹೈಜಾಕ್ ಘಟನೆಗೆ ಸಂಬಂಧಿಸಿ ಮುಂಬೈನ ಸಹರ್ ಪೊಲೀಸರು ವ್ಯಕ್ತಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 336 ಮತ್ತು 505 (2) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ. ಈ ವಿಷಯದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.