ಬಿಹಾರದ ಪಾಟ್ನಾದ ಹೆಸರಾಂತ ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆಯ ಪ್ರಮುಖ ಆರೋಪಿಯನ್ನು ಪೊಲೀಸರು ಇಂದು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಪಾಟ್ನಾ ನಗರದ ಮಾಲ್ ಸಲಾಮಿ ನಗರದಲ್ಲಿ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ವಿಕಾಸ್ ರಾಜ ಹತ್ಯೆಯಾದ ಆರೋಪಿ. ಪೊಲೀಸ್ ವರದಿಯ ಪ್ರಕಾರ ಆರೋಪಿ ರಾಜ, ಉದ್ಯಮಿ ಖೇಮ್ಕಾ ಹತ್ಯೆ ಮಾಡಲು ಶೂಟರ್ ಉಮೇಶ್ ಎಂಬಾತನಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ್ದ.
ಪೊಲೀಸರು ಆರೋಪಿಯನ್ನು ಬಂಧಿಸಲು ತೆರಳಿದಾಗ ಅವರ ಮೇಲೆಯೇ ಗುಂಡು ಹಾರಿಸಿದ್ದಾನೆ. ಪೊಲೀಸರು ಪ್ರತಿದಾಳಿ ನಡೆಸಿದಾಗ ರಾಜ ಮೃತಪಟ್ಟಿದ್ದಾನೆ. ಪೊಲೀಸರು ಘಟನಾ ಸ್ಥಳದಲ್ಲಿ ಪಿಸ್ತೂಲ್, ಜೀವಂತ ಗುಂಡುಗಳು, ವಶಪಡಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೀಡಲಾಗಿದೆ.
“ದಾಮಿಯಾ ಘಾಟ್ ಬಳಿ ಇಂದು ಮುಂಜಾನೆ 2.45ರ ಸುಮಾರಿಗೆ ಆರೋಪಿ ವಿಕಾಸ್ ರಾಜ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತ್ಯೆಯಾಗಿದ್ದಾನೆ. ಘಟನಾ ಸ್ಥಳದಿಂದ ಪಿಸ್ತೂಲ್, ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹವನ್ನು ಪಾಟ್ನಾದ ನಳಂದ ವೈದ್ಯಕೀಯ ಕಾಲೇಜಿಗೆ ಮರಣೋತ್ತರ ಪರೀಕ್ಷೆಗೆ ನೀಡಲಾಗಿದೆ” ಎಂದು ಬಿಹಾರ ಪೊಲೀಸರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಬಿಹಾರ | ಬಿಜೆಪಿ ನಾಯಕ, ಉದ್ಯಮಿ ಗೋಪಾಲ್ ಖೇಮ್ಕಾಗೆ ಗುಂಡಿಕ್ಕಿ ಹತ್ಯೆ
ಖೇಮ್ಕಾ ಹತ್ಯೆಯಲ್ಲಿ ಭಾಗಿಯಾದ 10ಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸರು ಬಂಧಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಜುಲೈ 6 ರಂದು ಖೇಮ್ಕಾ ಅಂತ್ಯಸಂಸ್ಕಾರದ ದಿನದಂದು ಪ್ರಮುಖ ಆರೋಪಿ ರೋಷನ್ ಕುಮಾರ್ ಎಂಬಾತನನ್ನು ಬಂಧಿಸಲಾಗಿತ್ತು.
ಜುಲೈ 4 ರಂದು ನಡೆದ ಉದ್ಯಮಿ ಖೇಮ್ಕಾ ಅವರ ಹತ್ಯೆ ಪೂರ್ವನಿಯೋಜಿತವಾಗಿದ್ದು, ಶೂಟರ್‌ಗಳು ಹಾಗೂ ದಾಳಿಯನ್ನು ಯೋಜಿಸಿದವರು ಖೇಮ್ಕಾ ಅವರ ಚಲನವಲನಗಳನ್ನು ಹಲವು ದಿನಗಳಿಂದ ಗಮನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಪ್ರಸಿದ್ಧ ಉದ್ಯಮಿ ಮತ್ತು ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಜುಲೈ 4 ರಂದು ರಾತ್ರಿ ಪಟ್ನಾದ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗಾಂಧಿ ಮೈದಾನ ಪೊಲೀಸ್ ಠಾಣೆ ಪ್ರದೇಶದ ‘ಪನಾಚೆ’ ಹೋಟೆಲ್ ಬಳಿ ಈ ಘಟನೆ ನಡೆದಿದ್ದು, ಖೇಮ್ಕಾ ಮನೆಗೆ ತೆರಳುತ್ತಿದ್ದಾಗ ಹಂತಕರು ಗುಂಡು ಹಾರಿಸಿದ್ದರು. ಹೋಟೆಲ್ ಪಕ್ಕದಲ್ಲಿರುವ ‘ಟ್ವಿನ್ ಟವರ್’ ಸೊಸೈಟಿಯಲ್ಲಿ ಖೇಮ್ಕಾ ವಾಸಿಸುತ್ತಿದ್ದರು. ಖೇಮ್ಕಾ ಅವರ ಪುತ್ರ ಗುಂಜನ್ ಖೇಮ್ಕಾ ಅವರನ್ನೂ ಮೂರು ವರ್ಷಗಳ ಹಿಂದೆ ಕೊಲೆ ಮಾಡಲಾಗಿತ್ತು.