ಗಡ್ಡ ಬಿಟ್ಟವರು, ಟೋಪಿ ಹಾಕುವವರು ಅಥವಾ ಗೋಮಾಂಸ ತಿನ್ನುವವರು ಹಿಂದೂ ಧಾರ್ಮಿಕ ಸ್ಥಳಗಳ ಬಳಿ ಕಂಡುಬಂದರೆ ಥಳಿಸಲಾಗುವುದು ಎಂದು ಜಾರ್ಖಂಡ್ನ ಬಿಜೆಪಿ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಲಮೌ ಜಿಲ್ಲೆಯ ಪಂಕಿ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಕುಶ್ವಾಹ ಶಶಿ ಭೂಷಣ್ ಮೆಹ್ತಾ ಮಂಗಳವಾರ(ಅ.24) ವಿಜಯ ದಶಮಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಹಿಂದಿಯಲ್ಲಿ ಈ ವಿವಾದಿತ ಹೇಳಿಕೆಗಳನ್ನು ನೀಡಿದ್ದಾರೆ.
ಅವರ ಈ ವಿವಾದಾತ್ಮಕ ಹೇಳಿಕೆಯಿರುವ ಭಾಷಣದ ತುಣುಕಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಕುಶ್ವಾಹ ಶಶಿ ಭೂಷಣ್ ಮೆಹ್ತಾ ಅವರು ತಮ್ಮ ಭಾಷಣದಲ್ಲಿ, ಮುಸ್ಲಿಮರನ್ನು ಸ್ಪಷ್ಟವಾಗಿ ಹೆಸರಿಸದಿದ್ದರೂ, “ಈ ಜನರು” ಮೊದಲು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಮತ್ತು ನಂತರ ನಮ್ಮವರಿಗೆ ಅಡ್ಡಿಪಡಿಸುತ್ತಾರೆ, ಅಂಥವರು ಹಿಂದೂ ಧಾರ್ಮಿಕ ಸ್ಥಳಗಳ ಬಳಿ ಕಂಡುಬಂದರೆ ಥಳಿಸಿ ಎಂದು ಹೇಳಿದರು.
ಗುರುವಾರ ಸಂಜೆಯವರೆಗೆ ದ್ವೇಷದ ಭಾಷಣಕ್ಕಾಗಿ ಮೆಹ್ತಾ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ನಾರಾಯಣ ಮೂರ್ತಿಯ ವಾರಕ್ಕೆ 70 ಗಂಟೆ ದುಡಿಮೆ ಹೇಳಿಕೆ: ನೆಟ್ಟಿಗರಿಂದ ಆಕ್ರೋಶ
ಪಲಾಮೌ ಪೊಲೀಸ್ ಅಧೀಕ್ಷಕಿ ರೀಷ್ಮಾ ರಮೇಶನ್, “ನಾವು ವಿಡಿಯೊವನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಇಲ್ಲಿಯವರೆಗೆ ಯಾರೂ ಯಾವುದೇ ದೂರು ದಾಖಲಿಸಿಲ್ಲವಾದ್ದರಿಂದ ಎಫ್ಐಆರ್ ಅನ್ನು ಇನ್ನೂ ದಾಖಲಿಸಿಲ್ಲ” ಎಂದು ಹೇಳಿದರು.
ವರದಿಗಾರರು ದ್ವೇಷದ ಭಾಷಣದ ಮೇಲೆ ಸ್ವಯಂಪ್ರೇರಿತ ಪ್ರಕರಣಗಳನ್ನು ದಾಖಲಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ನೆನಪಿಸಿದಾಗ ವಿಡಿಯೋವನ್ನು ಪರಿಶೀಲಿಸಿದ ನಂತರ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧೀಕ್ಷಕಿ ರೀಷ್ಮಾ ರಮೇಶನ್ ಹೇಳಿದರು.
ಅಧಿಕಾರರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಎರಡೂ ಮೆಹ್ತಾ ಅವರ ಹೇಳಿಕೆಗಳನ್ನು ಖಂಡಿಸಿವೆ.
ಮತದಾರರಿಗೆ ತಿಳಿಸಲು ಬೇರೇನೂ ಇಲ್ಲದ ಕಾರಣ ಬಿಜೆಪಿ ನಾಯಕರು ದ್ವೇಷದ ಭಾಷಣದ ಹಿಂದೆ ಬಿದ್ದಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಹೇಳಿದ್ದಾರೆ.
2012ರ ಮೇ 11ರಂದು ಬಿಜೆಪಿ ಮುಖಂಡ ನಡೆಸುತ್ತಿದ್ದ ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರ ಕೊಲೆ ಪ್ರಕರಣದಲ್ಲಿ ಮೆಹ್ತಾ ಆರೋಪಿಯಾಗಿದ್ದರು. 2019ರಲ್ಲಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿರುವುದು ಶಿಕ್ಷಕನ ಕುಟುಂಬದಿಂದ ಪ್ರತಿಭಟನೆಗೆ ಕಾರಣವಾಗಿತ್ತು. ರಾಜ್ಯ ಚುನಾವಣೆಗಳು ಹತ್ತಿರದಲ್ಲಿದ್ದಾಗ ನ್ಯಾಯಾಲಯವು 2019 ರ ಡಿಸೆಂಬರ್ನಲ್ಲಿ ಮೆಹ್ತಾ ಅವರನ್ನು ಖುಲಾಸೆಗೊಳಿಸಿತು. ಚುನಾವಣೆಯಲ್ಲಿ ಮೆಹ್ತಾ ಗೆಲುವು ಸಾಧಿಸಿದರು.