- ಜ್ಞಾನವ್ಯಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿದ್ದ ವಾರಾಣಸಿ ಜಿಲ್ಲಾ ನ್ಯಾಯಾಲಯ
- ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್
ವಾರಾಣಸಿ ನಗರದ ಜ್ಞಾನವಾಪಿ ಮಸೀದಿ ಸೇರಿದಂತೆ 22 ಮಸೀದಿಗಳ ಮೇಲ್ವಿಚಾರಣೆ ಹೊಣೆ ಹೊತ್ತಿರುವ ಅಂಜುಮಾನ್ ಇಂತೆಜಾಮಿಯಾ ಮಸೀದಿ ಸಮಿತಿಯು ಮಸೀದಿಯ ವೈಜ್ಞಾನಿಕ ಸಮೀಕ್ಷೆಗೆ ಜಿಲ್ಲಾ ನ್ಯಾಯಾಲಯ ನೀಡಿರುವ ಆದೇಶವನ್ನು ಪ್ರಶ್ನಿಸಿ ಮಂಗಳವಾರ (ಜುಲೈ 25) ಅಲಹಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಜ್ಞಾನವಾಪಿ ಮಸೀದಿಯ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿ ವಾರಾಣಸಿ ನ್ಯಾಯಾಲಯ ಶುಕ್ರವಾರ (ಜುಲೈ 21) ಮಹತ್ವದ ಆದೇಶ ನೀಡಿತ್ತು. ಇದಕ್ಕೆ ಸುಪ್ರೀಂ ಕೋರ್ಟ್ ಸೋಮವಾರ (ಜುಲೈ 24) ತಾತ್ಕಾಲಿಕ ತಡೆ ನೀಡಿತ್ತು. ಬಳಿಕ ಈ ಮೇಲ್ಮನವಿ ಸಲ್ಲಿಸಲಾಗಿದೆ.
ವಾರಾಣಸಿ ನ್ಯಾಯಾಲಯದ ಆದೇಶವನ್ನು ಜುಲೈ 26ರ ಸಂಜೆ 5 ಗಂಟೆಯವರೆಗೆ ಜಾರಿಗೊಳಿಸಬಾರದು, ಇದರಿಂದಾಗಿ ಜ್ಞಾನವಾಪಿ ಮಸೀದಿ ಸಮಿತಿಯು ಹೈಕೋರ್ಟ್ ಗೆ ಮನವಿ ಸಲ್ಲಿಸಲು ಸಮಯಾವಕಾಶ ಸಿಗುತ್ತದೆ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರ ತ್ರಿಸದಸ್ಯ ಪೀಠ ಸೋಮವಾರದ ಆದೇಶದಲ್ಲಿ ಹೇಳಿತ್ತು.
ತನ್ನ ಮಧ್ಯಂತರ ಆದೇಶವು ಜುಲೈ 26ರಂದು ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮೊದಲು ಮಸೀದಿಯ ಅರ್ಜಿಯ ವಿಚಾರಣೆಗೆ ಅವಕಾಶ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಸುಪ್ರೀಂ ಕೋರ್ಟ್ ಪೀಠ ಕೋರಿತ್ತು.
ಜ್ಞಾನವಾಪಿ ಮಸೀದಿ 16ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು ಈ ಸ್ಥಳದಲ್ಲಿ ಈ ಮೊದಲು ದೇವಾಲಯವಿತ್ತೇ ಎಂಬುದನ್ನು ಪತ್ತೆ ಮಾಡಲು ಉತ್ಖನನಕ್ಕೆ ವಾರಾಣಸಿ ಜಿಲ್ಲಾ ನ್ಯಾಯಾಲಯ ಅವಕಾಶ ನೀಡಿದ್ದರೂ ಸಹ ಕನಿಷ್ಠ ವಾರದ ಮಟ್ಟಿಗೆ ಉತ್ಖನನ ನಡೆಸದಿರಲು ನಿರ್ಧರಿಸಿರುವುದಾಗಿ ವಿಚಾರಣೆಯ ಸಂದರ್ಭದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಪರವಾಗಿ ನೀಡಲಾದ ಹೇಳಿಕೆಯನ್ನು ತ್ರಿಸದಸ್ಯ ಪೀಠ ಪರಿಗಣನೆಗೆ ತೆಗೆದುಕೊಂಡಿತ್ತು.
ಈ ಸುದ್ದಿ ಓದಿದ್ದೀರಾ? ವಾಟ್ಸಾಪ್ ಸ್ಟೇಟಸ್ ಹಾಕುವಾಗ ಎಚ್ಚರವಿರಲಿ: ಬಾಂಬೆ ಹೈಕೋರ್ಟ್ ಸಲಹೆ
ವಾರಾಣಸಿ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ಮಸೀದಿ ಸಮಿತಿ ಮನವಿ ಸಲ್ಲಿಸಿದ ಸಂದರ್ಭ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಎಎಸ್ಐ ನಿಲುವನ್ನು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರು.
ಜ್ಞಾನವಾಪಿ ಮಸೀದಿ ಕಾಶಿ ವಿಶ್ವನಾಥ ದೇವಾಲಯ ಪಕ್ಕದಲ್ಲಿದೆ. ಅದಕ್ಕಾಗಿ ಇದನ್ನು ಎಎಸ್ಐಯಿಂದ ಸಮೀಕ್ಷೆ ನಡೆಸುವಂತೆ ಕೋರಿ ಜುಲೈ 21ರಂದು ನಾಲ್ವರು ಹಿಂದೂ ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯ ಪುರಸ್ಕರಿಸಿ ವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿತ್ತು.