ಹೈದರಾಬಾದ್‌ನ ತಪ್ಪಚಬುತ್ರದ ಹನುಮಾನ್ ದೇವಸ್ಥಾನದ ಆವರಣದಲ್ಲಿದ್ದ ಶಿವ ದೇವಾಲಯದಲ್ಲಿ ಬುಧವಾರ ಮಾಂಸದ ತುಂಡು ಪತ್ತೆಯಾಗಿತ್ತು. ಬಳಿಕ, ಪ್ರಕರಣಕ್ಕೆ ಕೋಮು ಬಣ್ಣ ಬಳಿದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ದೇವಾಲಯದಲ್ಲಿ ಮಾಂಸದ ತುಂಡು ಹಾಕಿದ್ದು ಮನುಷ್ಯರೇ ಅಲ್ಲ. ಅಲ್ಲಿಗೆ ಮಾಂಸದ ತುಂಡು ತಂದಿದ್ದು ಬೆಕ್ಕು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ದೇವಾಲಯದಲ್ಲಿ ಉದ್ದೇಶಪೂರ್ವಕವಾಗಿ ಮಾಂಸದ ತುಂಡು ಹಾಕಲಾಗಿದೆ ಎಂದು ಆರೋಪಿಲಾಗಿತ್ತು. ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಆರೋಪ ಮಾಡಿ, ಕೋಮುವಾದಿ ಬಣ್ಣ ಮಳಿದು, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಮಾಡಲಾಗಿತ್ತು. ಹಿಂದುತ್ವವಾದಿಗಳು ಪ್ರತಿಭಟನೆಗಳನ್ನೂ ನಡೆಸಿದ್ದರು.
ಪ್ರಕರಣ ಸಂಬಂಧ ತಪ್ಪಚಬುತ್ರ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದರಿಂದ, ತ್ವರಿತವಾಗಿ ಪೊಲೀಸರು ತನಿಖೆ ನಡೆಸಿದ್ದಾರೆ. ತಪ್ಪಚಬುತ್ರ ಪೊಲೀಸ್ ಠಾಣಾಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸುಮಾರು 250 ಗ್ರಾಂ ತೂಕದ ಮಾಂಸದ ತುಂಡನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣದ ತನಿಖೆಗಾಗಿ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ಪೊಲೀಸರ ತಾಂತ್ರಿಕ ಘಟಕವು ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದೆ. ಈ ವೇಳೆ, ಬೆಕ್ಕು ಮಾಂಸದ ತುಂಡನ್ನು ತನ್ನ ಬಾಯಿಯಲ್ಲಿ ಕಚ್ಚಿಕೊಂಡು ದೇವಾಲಯದ ಆವರಣ ಪ್ರವೇಶಿಸಿರುವುದು ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.
ದೃಶ್ಯಾವಳಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿದ ಪೊಲೀಸರು, “ಶಿವನ ದೇವಾಲಯದಲ್ಲಿ ಮಾಂಸದ ತುಂಡನ್ನು ಬೆಕ್ಕು ಬಿಟ್ಟುಹೋಗಿದೆ. ದೇವಾಲಯದ ಬಳಿಯಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಬೆಕ್ಕು ಬಾಯಿಯಲ್ಲಿ ಮಾಂಸವನ್ನು ಕಚ್ಚಿಕೊಂಡು ಬರುವುದು ಸ್ಪಷ್ಟವಾಗಿ ದಾಖಲಾಗಿದೆ. ಹೀಗಾಗಿ, ಯಾವುದೇ ವದಂತಿಗಳು ಅಥವಾ ತಪ್ಪು ಮಾಹಿತಿಗಳನ್ನು ಹರಡಬಾರದು” ಎಂದು ತಿಳಿಸಿದ್ದಾರೆ.