ಪೆಟ್ರೋಲ್‌ನಲ್ಲಿ ಶೇ.20ರಷ್ಟು ಎಥೆನಾಲ್ ಬೆರೆಸಿ ಮಾರಾಟ ಮಾಡಬೇಕೆಂಬ ಕೇಂದ್ರ ಸರ್ಕಾರದ ಎಥೆನಾಲ್ ಮಿಶ್ರಣ ಯೋಜನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅಕ್ಷಯ್ ಮಲ್ಹೋತ್ರಾ ಎಂಬ ವಕೀಲ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
“ಎಥೆನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್ ಹೊಂದಿಕೆಯಾಗದ ವಾಹನಗಳ ಮಾಲೀಕರ ಮೂಲಭೂತ ಹಕ್ಕುಗಳನ್ನು ಈ ಯೋಜನೆಯು ಉಲ್ಲಂಘಿಸುತ್ತದೆ. ಈ ಯೋಜನೆಯು ಗ್ರಾಹಕರಿಗೆ ಎಥೆನಾಲ್ ಮುಕ್ತ ಪೆಟ್ರೋಲ್‌ನ ಆಯ್ಕೆಯನ್ನು ನೀಡಿಲ್ಲ ಮತ್ತು ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸದೆಯೇ ಯೋಜನೆ ಜಾರಿಗೊಳಿಸಿರುವುದು ಗ್ರಾಹಕ ಸಂರಕ್ಷಣಾ ಕಾಯ್ದೆ 20191ರ ಪ್ರಕಾರ ಗ್ರಾಹಕರ ಹಕ್ಕು ಉಲ್ಲಂಘಿಸಿದಂತೆ ಆಗುತ್ತದೆ” ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅಕ್ಕಿ ಕೊಡಲು ನಿರಾಕರಿಸಿದ ಬಗ್ಗೆ ‘ಮನ್ ಕಿ ಬಾತ್’ನಲ್ಲಿ ಮಾತಾಡುವಿರಾ; ದಿನೇಶ್ ಗುಂಡೂರಾವ್ ಪ್ರಶ್ನೆ
ಎಥೆನಾಲ್ ಮಿಶ್ರಣ ಪೆಟ್ರೋಲ್ ವಾಹನಗಳ ಮೇಲೆ ಪರಿಣಾಮ ಬೀರುತ್ತದೆ. ವಾಹನ ಘಟಕಗಳ ಸವೆತಕ್ಕೂ ಇದು ಕಾರಣವಾಗಬಹುದು. ಇದರಿಂದಾಗಿ ಗ್ರಾಹಕರಿಗೆ ವಾಹನ ನಿರ್ವಹಣಾ ವೆಚ್ಚ ಹೆಚ್ಚಾಗುತ್ತದೆ ಮತ್ತು ಸುರಕ್ಷತಾ ಕಾಳಜಿಯೂ ಉಂಟಾಗುತ್ತದೆ. ಈ ಯೋಜನೆಗೆ ತಕ್ಕಂತೆ ವಾಹನಗಳನ್ನು ವಿನ್ಯಾಸಗೊಳಿಸಲು ತಯಾರಕರಿಗೆ ಸಾಕಷ್ಟು ಕಾಲಾವಕಾಶ ನೀಡದೆ ಇರುವುದು ಅಸಮಂಜಸ ಪ್ರಕ್ರಿಯೆ ಎಂದು ಅರ್ಜಿದಾರ ತಮ್ಮ ವಾದ ಮಂಡಿಸಿದ್ದಾರೆ.
ಪೆಟ್ರೋಲ್ ಬಳಸುತ್ತಿರುವ ಗ್ರಾಹಕರಲ್ಲಿ ಬಹುತೇಕರಿಗೆ ತಾವು ಬಳಸುತ್ತಿರುವುದು ಎಥೆನಾಲ್ ಮಿಶ್ರಿತ ಪೆಟ್ರೋಲ್ ಎಂಬುದು ತಿಳಿದಿಲ್ಲ. ಈ ಬಗ್ಗೆ ಯಾವುದೇ ವಾಸ್ತವವನ್ನು ತೆರೆದಿಡದ ಕಾರಣ ಗ್ರಾಹಕರ ಆಯ್ಕೆಯ ಮೂಲ ಅಂಶಕ್ಕೆ ಧಕ್ಕೆ ಉಂಟಾಗುತ್ತದೆ ಎದು ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರಾಹಕರಿಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀಡುತ್ತಿದ್ದರೂ ಪೆಟ್ರೋಲ್ ಬೆಲೆ ಕಡಿಮೆಯಾಗಿಲ್ಲ. ಈ ಮೂಲಕ ಕಂಪನಿಗಳು ಗಳಿಸುವ ಲಾಭವನ್ನು ಗ್ರಾಹಕರಿಕೆ ಹಂಚಿಕೆ ಮಾಡುವಲ್ಲಿ ಪೆಟ್ರೋಲಿಯಂ ಕಂಪನಿಗಳು ವಿಫಲವಾಗಿವೆ. ಆದ್ದರಿಂದ ಗ್ರಾಹಕರು ಮೊದಲಿನ ಬೆಲೆಯನ್ನೇ ತೆರಬೇಕಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಯುಎಸ್ ಮತ್ತು ಯುರೋಪಿಯನ್ ಒಕ್ಕೂಟದಲ್ಲಿ ಎಥೆನಾಲ್ ರಹಿತ ಪೆಟ್ರೋಲ್ ನೀಡಲಾಗುತ್ತಿದೆ. ಜೊತೆಗೆ ಎಥೆನಾಲ್ ಮಿಶ್ರಿತ ಪೆಟ್ರೋಲನ್ನು ಗ್ರಾಹಕರ ಆಯ್ಕೆಗೆ ನೀಡಲಾಗುತ್ತಿದೆ. ಆದರೆ ಭಾರತದಲ್ಲಿನ ಎಥೆನಾಲ್ ಮಿತಶ್ರಿತ ಪೆಟ್ರೋಲ್ ಯೋಜನೆಯು ಇದಕ್ಕೆ ತದ್ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಎಲ್ಲಾ ಇಂಧನ ಕೇಂದ್ರಗಳಲ್ಲೂ ಗ್ರಾಹಕರಿಗೆ ಎಥೆನಾಲ್ ಮುಕ್ತ ಪೆಟ್ರೋಲ್‌ನ ಆಯ್ಕೆಯನ್ನು ನೀಡಬೇಕು. ಗ್ರಾಹಕ ಕೇಂದ್ರಿತವಾಗಿ ಯೋಜನೆಯನ್ನು ರೂಪಿಸಬೇಕು. ಎಥೆನಾಲ್ ಯುಕ್ತ ಪೆಟ್ರೋಲ್ ವಾಹನಗಳ ಸವೆತಕ್ಕೆ ಕಾರಣವಾಗುವ ಮತ್ತು ಅದರ ಪ್ರಭಾವದ ಕುರಿತು ರಾಷ್ಟ್ರವ್ಯಾಪಿ ಅಧ್ಯಯನ ನಡೆಸಬೇಕು ಎಂದು ಅಕ್ಷಯ್ ಮಲ್ಹೋತ್ರಾ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ.
